ಕವಿಸಮಯ

ಕಾಳನ್ನೆಲ್ಲವ ಪಡೆದು ಜಳ್ಳನ್ನೆಲ್ಲವ ತೂರಿಬಿಡಿ, ಎಲ್ಲವೂ ಜಳ್ಳಾದಲ್ಲಿ ಬರೆದವನ ಪೊಳ್ಳೆನ್ನದಿರಿ

Monday, February 27, 2006

ಕೊಕ್ಕರೆಗಳ ಕುಣಿತ

ಆ ರಸ್ತೆಯ ಕೆಂಪು ಗುಲ್ಮೋಹರ್ ಸಾಲುಗಳ ನೆರಳಿನಲ್ಲಿ , ಕೆಂಪಿನ ಹಬ್ಬವನ್ನು ಕಣ್ಣುಗಳು ಆಸ್ವಾದಿಸುತ್ತಾ ನಡೆದರೆ, ಕೆಲವು ದಿನಗಳಲ್ಲಿ ಗುಲ್ಮೋಹರ್ ಗಳೆಲ್ಲ ಬೋಳಾಗಿ , ಬಣ್ಣವೆಲ್ಲಾ ಮಾಯವಾಗುವ ಕೊರಗು ಕಾಡುವ ಮುನ್ನ ಎರಡು ಜೋಡಿಮನೆಗಳು ಕಾಣಸಿಗುತ್ತಿತ್ತು. ಆ ಎರಡು ಮನೆಗಳನ್ನು ಕೈತೋಟವೊಂದು ಬೇರ್ಪಡಿಸುತ್ತಿತ್ತು .
( ಹೆಸರಿಗೆ ಕೈತೋಟವಾದರೂ, ಅದನ್ನು ಎರಡೂ ಮನೆಗಳ ಯಾವ ಕೈಗಳೂ ನೀರೆರೆದು ಬೆಳೆಸಿರಲಿಲ್ಲ. ಸಂಬಳಕ್ಕಿದ್ದ ಮಾಲಿಯೊಬ್ಬನ ಬೆವರಿನ ನೀರನ್ನುಂಡು ತೋಟವು ಹೂವುಗಳಿಂದ ಕಂಗೊಳಿಸುತ್ತಿತ್ತು ).
ಒಂದು ಮನೆಯಾದರೋ, ಕೆಂಪು ಗುಲ್ಮೋಹರ್ ಗಳಂತೆ ಕೆಂಪಾಗಿ ಕಂಗೊಳಿಸುತ್ತಿತ್ತು. ಮನೆ ಮುಂದೆ ನಿಂತ ಅದೇ ಗುಲ್ಮೋಹರ್ ಕೆಂಪಿನ ಕಾರಿನೊಳಗಿಂದ ೨೮ರ ಹರೆಯದ ಯುವಕನೊಬ್ಬ ಅಗಲವಾದ ಹಾಳೆಯೊಂದನ್ನು ಓದುತ್ತಿದ್ದನು.ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದರೆ ಅದೊಂದು ಗ್ರೀಟಿಂಗ್ ಕಾರ್ಡ್ ಎಂದು, ”ಆರ್ಚೀಸ್” ಎಂಬ ಆ ಕಾರ್ಡನ್ನಿಟ್ಟ ಚೀಲದ ಮೇಲಿನ ಬರವಣಿಗೆಯಿಂದ ತಿಳಿಯುತ್ತಿತ್ತು. ಆ ವ್ಯಕ್ತಿಯ ಮುಖದಲ್ಲಿರುವ ತುಂಟತನದ ನಗುವು, ಅದು ಪ್ರಥಮ ವಿವಾಹ ವಾರ್ಷಿಕೋತ್ಸವದ ಸಂಭ್ರಮದಿಂದ ಉಂಟಾದ ನಗುವೆಂದು ತಿಳಿಸುತ್ತಿತ್ತು. ಅವನು “ಪ್ರಿಯಾ, come on, Its getting late“ ಎಂದು ನಾಲ್ಕನೇ ಬಾರಿ ಕರೆದ. ಪ್ರತಿ ಬಾರಿಯೂ “ just five minutes, ಸ್ವಲ್ಪ wait ಮಾಡು ಪ್ರತಾಪ್ “ ಎಂಬ ಅದೇ ಉತ್ತರ ಅವನಿಗೆ ದೊರೆಯುತ್ತಿತ್ತು. ಅದರಿಂದ ಬೇಸತ್ತು ಅವನು ಸುಮ್ಮನಾಗಿ , ಬೋಳು ಗುಲ್ಮೋಹರ್ ಗಳಂತೆ ಕಳೆಗುಂದಿದ ಪಕ್ಕದ ಮನೆಯನ್ನು ಒಮ್ಮೆ ನೋಡಿದರೆ, ಮತ್ತೊಮ್ಮೆ ಹೂವುಗಳಿಂದ ತುಂಬಿರುವ ಕೈತೋಟವನ್ನು ನೋಡುತ್ತಾ ಸುಮ್ಮನಾಗುತ್ತಿದ್ದನು. ಸ್ವಲ್ಪ ಹೊತ್ತಿನ ನಂತರ ಮತ್ತದೇ ಪ್ರಶ್ನೆ, ಮತ್ತದೇ ಉತ್ತರ, ಮತ್ತದೇ ನೋಟ.

ಹೀಗೆ ಪ್ರಶ್ನೆ-ಉತ್ತರ-ನೋಟ ಶೃಂಖಲೆಯ ಅದೆಷ್ಟೋ ಪುನರಾವರ್ತನಗಳ ನಂತರ ಅಂತೂ ಸಮೃದ್ಧವಾಗಿ ಅಲಂಕೃತಳಾದ ೨೬ರ ತರುಣಿಯೊಬ್ಬಳು ಹೊರಗೆ ಬಂದು ಕೈತೋಟ ದಾಟಿ ಆ ಕಳೆಗುಂದಿದ ಮನೆಯೆಡೆಗೆ ನಡೆದು ,ಕರೆಗಂಟೆಯನ್ನು ಒತ್ತಿದಳು. ಬಾಗಿಲನ್ನು ತೆರೆಯುವ ಕ್ಷೀಣ ಸದ್ದು ಸುತ್ತಲಿನ ಮೌನವನ್ನು ಭೇದಿಸಿ ಬಂದು, ಮಧ್ಯವಯಸ್ಸಿನ ಹೆಂಗಸೊಬ್ಬಳು ಹೊರಬಂದಳು.
“Aunty, ನಾವಿಬ್ಬರೂ planet Dಗೆ ಹೋಗ್ತಿದೀವಿ, ಯಾರಾದರೂ ಮನೆ ಕಡೆ ಬಂದರೆ ನನ್ನ ಮೊಬೈಲ್ ಗೆ ಫೋನ್ ಮಾಡಲು ಹೇಳಿಬಿಡಿ “ ಎಂದು ಹೇಳಿ ಉತ್ತರಕ್ಕೆ ಕಾಯದೇ ಕಾರಿನೆಡೆಗೆ ಪ್ರಿಯಾ ಮರಳಿದಳು. ಬಾಗಿಲಲ್ಲಿ ನಿಂತಿದ್ದ ಶಾಂತಿ ಕಾರಿನೆಡೆಗೆ ಕೈ ಬೀಸಿ ,ಅದು ನೋಟದಿಂದ ಮರೆಯಾಗುವ ತನಕ ಅಲ್ಲೇ ನಿಂತು, ನಂತರ ಮನೆಯೊಳಹೊಕ್ಕಾಗ ಮತ್ತೆ ಕ್ಷೀಣ ಧ್ವನಿಯಲ್ಲಿ ಬಾಗಿಲ ಚಿಲಕಹಾಕುವ ಸದ್ದು ಕೇಳಿಬಂತು.
ಆ ಮನೆಯೊಳಕ್ಕೆ ಹೊಕ್ಕರೆ ಯಾವುದೋ ಒಂದು ಹೊಸ ಲೋಕಕ್ಕೆ ಬಂದಂತೆನಿಸುತ್ತಿತ್ತು ಮನೆಯೊಳಗೆ ಮರಳುಗಾಡಿನಂತಹ ಮೌನ, ಸಂಜೆಯ ತಂಗಾಳಿಯಲ್ಲಿ ತೇಲಾಡಲು ಅಡ್ಡಿಯಾಗಿರುವ ಮುಚ್ಚಿರುವ ಕಿಟಕಿಗಳನ್ನು ಪರದೆಗಳು ಕೋಪಗೊಂಡು ನೋಡುತ್ತಿದ್ದವು.
ಪರದೆಗಳಂತೆ ಆ ಮನೆಯಲ್ಲಿದ್ದ ಮಿಕ್ಕೆಲ್ಲ ವಸ್ತುಗಳೂ ಮೌನವಹಿಸಿದ್ದವು. ಶಾಂತಿ ಸೋಫ ಮೇಲೆ ಕುಳಿತು ಸಾಪ್ತಾಹಿಕವೊಂದನ್ನು ಹಿಡಿದಿದ್ದಳು. ಆಗಲೇ ಪ್ರತಾಪನ " It's getting late" ನಿವೇದನೆಯಂತೆ ಹಲವು ಬಾರಿ ಅದರ ಪುಟಗಳನ್ನು ತಿರುವಿದ್ದರೂ ಮತ್ತೆ ಅದೇ ಪುಟಗಳನ್ನು ಅವಳ ಬೆರಳುಗಳು ತಿರುವುತ್ತಾ ಆಸಕ್ತಿಯಿಂದ ಓದುತ್ತಿರುವಂತೆ ಕಣ್ಣುಗಳು ನಟಿಸುತ್ತಿದ್ದವು.ಪತ್ನಿಯ ನಟನಾ ಕೌಶಲ್ಯದ ಪರಿವೇ ಇಲ್ಲದೆ ಮನೋಹರ ಚಾಪೆಯ ಮೇಲೆ ಮಲಗಿದ್ದ. ಶಾಂತಿಯನ್ನು ಬೈಯುತ್ತಿರುವ ಕನಸುಗಳು ಆಗಾಗ ಬಿದ್ದು " ಏನಕ್ಕೂ ಪ್ರಯೋಜನವಿರದ ಮೂದೇವಿ" "ಗೂಬೆ" ಎಂದೆಲ್ಲಾ ನಿದ್ದೆಯಲ್ಲೇ ಆಗಾಗ್ಗೆ ಕನವರಿಸುತ್ತಿದ್ದ. ನಾಲ್ಕು ಘಂಟೆಗೆ
" ಕಾಫಿ ವೇಳೆ" ಸಮೀಪಿಸುತ್ತಿದ್ದರಿಂದ ಗಾಢ ನಿದ್ದೆಯಿಂದ ಸಹಜವೆಂಬಂತೆ ಮನೋಹರನು ಎದ್ದು ಸ್ವಲ್ಪಹೊತ್ತು ಅತ್ತಿತ್ತ ನೋಡಿ, ತನ್ನ ಒಂದೇ ಹವ್ಯಾಸವಾಗಿರುವ ಟಿವಿ ವೀಕ್ಷಣೆಯಲ್ಲಿ ತೊಡಗಿದ. ಟಿವಿಯ ಚಾನೆಲ್ ಗಳನ್ನು ತಿರುವುತ್ತಾ ತನ್ನ ಅಚ್ಚುಮೆಚ್ಚಿನ " ಚಿರತೆ ಜಿಂಕೆಯನ್ನು ಬೇಟೆಯಾಡುವ ದೃಶ್ಯಾವಳಿ" ಯನ್ನು ತೋರಿಸುವ ಚಾನೆಲ್ ನನ್ನು ಹುಡುಕತೊಡಗಿದ. ಇಬ್ಬರೂ ಮತ್ತೊಬ್ಬರ ಇರುವಿಕೆಯನ್ನು ಗಮನಿಸದೆ ತಮ್ಮ -ತಮ್ಮ ಲೋಕಗಳಲ್ಲಿ ಮುಳುಗಿದ್ದರು. ಮದುವೆಯಾದ ಹಲವು ವರ್ಷಗಳ ನಂತರ ಅವರ ಮಧ್ಯೆ ಮಾತನಾಡಲು ಏನೂ ಉಳಿದಿಲ್ಲದಂತಾಗಿತ್ತು. ನಿದ್ದೆಯು ಮನೋಹರನನ್ನು ಬಿಟ್ಟು ಶಾಂತಿಯನ್ನು ಬೇಟೆಯಾಡತೊಡಗಿ,ಅವಳು ಅದಕ್ಕೆ ಸುಲಭ ತುತ್ತಾದಳು.

ಸ್ವಲ್ಪ ಹೊತ್ತಿನ ಬಳಿಕ ಪಕ್ಕದಲ್ಲಿ ಯಾರೋ ಬಂದು ಕುಳಿತಂತೆನ್ನಿಸಿ ಶಾಂತಿ ತಿರುಗಿ ನೋಡಿದಳು
ಕಿರುನಗೆ ಬೀರುತ್ತಾ ಪಕ್ಕದಲ್ಲಿ ಕುಳಿತಿದ್ದ ಮನೋಹರನನ್ನು ಕಂಡು ಆಶ್ಚರ್ಯವಾಯಿತು.
" ನಾವು planet Dಗೆ ಹೋಗಿ ಡ್ಯಾನ್ಸ್ ಮಾಡಿಬರೋಣ ಬಾ" ಎಂದು ಮನೋಹರನೆಂದಾಗ ಶಾಂತಿಗೆ ಅವನ ಮಾತುಗಳನ್ನು ನಂಬಲಾಗಲ್ಲಿಲ್ಲ.

ಹುಷಾರಗಿದ್ದೀರಿ ತಾನೆ ? " ಎಂದು ಆಶ್ಚರ್ಯಚಕಿತ ದನಿಯಲ್ಲೇ ಕೇಳಿದಳು
"ಈಗ ಹೊರಡ್ತಿಯೋ ಇಲ್ವೋ ?" ಎಂದು ಹುಸಿಕೋಪ ತೋರಿಸುತ್ತಾ ಮನೋಹರ ಕೇಳಿದ.
" ಇದ್ದಕ್ಕಿದ್ದಂತೆ ಈ ಖಯಾಲಿ ಏನಕ್ಕೆ ..... ?" ಎಂದು ಶಾಂತಿಯು ಕೇಳಲು ಹೊರಟಾಗ, ಅವಳ ಪ್ರಶ್ನೆಯನ್ನು ಅರ್ಧದಲ್ಲೆ ತಡೆದು "ಮೊನ್ನೆ ಅನಿಮಲ್ ಪ್ಲಾನೆಟ್ ನಲ್ಲಿ ಕೊಕ್ಕರೆಗಳ ಬಗ್ಗೆ ಡಾಕ್ಯೂಮೆಂಟ್ರಿಯೊಂದನ್ನು ತೊರಿಸ್ತಿದ್ರು , ಜೋಡಿ ಕೊಕ್ಕರೆಗಳು ಜೀವನವಿಡಿ ಒಟ್ಟಿಗೆ ಇರುತ್ವಂತೆ, ಅವುಗಳ ಮಧ್ಯವಿರುವ ಅನುಬಂಧವನ್ನು ಗಟ್ಟಿಮಾಡಿಕೊಳ್ಳೋಕ್ಕೆ ಆಗಾಗ್ಗೆ ಕುಣಿಯುತ್ವಂತೆ. ಅವುಗಳ ಕುಣಿತ ಎಷ್ಟು ಚೆನ್ನಾಗಿತ್ತು ಗೊತ್ತಾ !" ಎಂದು ಉತ್ಸಾಹಭರಿತವಾಗಿ ಹೇಳುವಾಗ ಅವನ ಕಣ್ಣುಗಳಲ್ಲಿ ಹೊಳಪು ಕಾಣುತ್ತಿತ್ತು.
"ಹಾಗಂತ ನಾವು ಕುಣಿಯೋದ ?" ಅಂತ ಹೇಳಬೇಕೆನ್ನಿಸಿದರೂ ಶಾಂತಿಗೆ ಮನಸ್ಸಾಗಲಿಲ್ಲ
ಶಾಂತಿ ಸ್ವಲ್ಪ ಹೊತ್ತು ಯೋಚಿಸಿ " ನನಗೆ ಅಲ್ಲೆಲ್ಲಾ ಬರೋಕ್ಕಾಗೊಲ್ಲ, ಅಷ್ಟಕ್ಕೂ rock-n-roll ವಯಸ್ಸೇ ನಮ್ಮದು ?" ಎಂದಳು.
ಮನೋಹರ ಕೊಂಚ ಬೇಸರಗೊಂಡರೂ ಸಮಾಧಾನದಿಂದ "ಸರಿ ಹಾಗಾದ್ರೆ, ಇಲ್ಲೆ ಡಾನ್ಸ್ ಮಾಡೋಣ " ಎಂದಾಗ ಅರೆಮನಸ್ಸಿನಿಂದ ಶಾಂತಿ ಒಪ್ಪಿದಳು.

ball-room ಡಾನ್ಸಿನಂತೆ ನಿಧಾನವಾಗಿ ಆ ನರ್ತನ ಪ್ರಾರಂಭವಾಗಿ ಇಬ್ಬರು ಗಿರಿ-ಗಿರಿ ಸುತ್ತತೊಡಗಿದರು.ಹತ್ತಿರದಲ್ಲೇ ಇದ್ದ ಹೂದಾನಿಗಳ ಬಗ್ಗೆ ಗಮನವಿಟ್ಟಿದ್ದರಿಂದ ಮನೋಹರನ ಕಾಲುಗಳು ಶಾಂತಿಯ ಕಾಲುಗಳಿಗೆ ತಾಗಿ ಅವಳು ಆಯತಪ್ಪಿ ಬೀಳುವಂತಾದಾಗ ಮನೋಹರನು ಅವಳನ್ನು ತನ್ನ ಕೈಚಾಚಿ ಹಿಡಿದುಕೊಂಡನು. ಎಷ್ಟೋ ಕಾಲದ ಹಿಂದೆ ಇಂತಹ ಅಕ್ಕರೆಯ ಆಸರೆಯನ್ನು ಅನುಭವಿಸಿದ ನೆನಪು ಶಾಂತಿಗೆ ಮರುಕಳಿಸಿ, ಜೀವನದ ಸಪ್ಪೆತನವನ್ನೆಲ್ಲಾ ಹೋಗಳಾಡಿಸಿ ಸಂತೋಷವನ್ನುಂಟು ಮಾಡಿತು. ಕೊನೆಯಿಲ್ಲದ ಗುಂಡಿಯೊಳಕ್ಕೆ ಬೀಳುತ್ತಿದ್ದ ತನ್ನ ಬಾಳನ್ನು ಕೊಕ್ಕರೆ ಜೋಡಿಯೊಂದು ಮತ್ತೆ ಹಿಡಿದೆತ್ತಿ , ಹೊಸ ಪ್ರಾಣಶಕ್ತಿಯ ಸಂಚಲನ ಮಾಡಿ, ಮರುಹುಟ್ಟು ನೀಡಿದೆಯೆಂದೆನ್ನಿಸಿ. ಸಿಕ್ಕಿರುವ ಎರಡನೇ ಅವಕಾಶವನ್ನು ಕಳೆದುಕೊಳ್ಳಬಾರದೆಂದು ನಿರ್ಧರಿಸಿ ಶಾಂತಿ ಮನಸ್ಸು ತುಂಬಿ ನರ್ತಿಸುತ್ತಿದ್ದಳು.

"ಎದ್ದೇಳೇ ಮೂದೇವಿ ! ,ನಾಲ್ಕು ಗಂಟೆಯಾದ್ರೂ ಕಿಸಿತಾ ಮಲ್ಗಿದ್ದೀಯಾ ? ಕಾಫಿ ಮಾಡು ಹೋಗೆ " ಎಂದು ಮನೋಹರನು ಅರಚಿದಾಗ ತನ್ನ ಕನಸಿನ ಲೋಕದ ವಿಹಾರದಿಂದ ಶಾಂತಿ ಎಚ್ಚೆತ್ತು , ಏನೂ ತೋಚದಂತವಳಾಗಿ ಅಡುಗೆಮನೆಗೆ ಓಡಿದಳು.
ಕಾಫಿ ಮಾಡುವಾಗ ಪಕ್ಕದ ಮನೆಗೆ ಕಾರು ಬಂದ ಸದ್ದಾಗಿ ಪ್ರಿಯಾ " ಮಾತಾಡ್ಬೇಡಾ ನನ್ನ್ ಜೊತೆ ,ಯಾರವಳು ಪ್ರತಿಮಾ ? " ಎಂದು ಕೂಗಾಡುತ್ತಾ ಮನೆಯೊಳಕ್ಕೆ ಹೋಗುತ್ತಿರುವುದು ಶಾಂತಿಗೆ ಕೇಳಿಸಿತು.
ಅಪ್ರಿಯಳಾಗಿದ್ದ ಪ್ರಿಯಾಳ ಮುಂದೆ ಪ್ರತಾಪನ ಪ್ರತಾಪ ಮಾಯವಾಗಿ ಅವಳನ್ನು ಸಂತೈಸಲು ಹೆಣಗಾಡುತ್ತಿದ್ದ.ಮನೋಹರ ಜಿಂಕೆಬೇಟೆಯಲ್ಲಿ ತಲ್ಲೀನನಾಗಿದ್ದನು. ಶಾಂತಿ ಕಾಫಿ ಮಾಡುತ್ತಾ ತನ್ನ ಕನಸಿನ ಗುಂಗಿನಲ್ಲೇ ನಿಂತುಬಿಟ್ಟಳು.

Wednesday, February 22, 2006

ಟೈಮ್ ಪಾಸ್

ನೀನು ದುರುಗುಟ್ಟಿ ನೋಡುತ್ತಿರುವುದನ್ನು ಅನಿತಾ ತೋರಿಸಿದಾಗಲೂ, ನಿನ್ನ ನಾಚಿಕೆಯಿಲ್ಲದ ನೆಟ್ಟ ನೋಟ ಹಾಗೆಯೇ ಇತ್ತು. ಇಷ್ಟು ಸುಂದರವಾಗಿರುವ ನಿನ್ನನ್ನು ತಾನಾಗಿದ್ದರೆ ಹೋಗಿ ಖಂಡಿತ ಮಾತನಾಡಿಸಿಬರುತ್ತಿದ್ದೆ ಎಂದು ಗೇಲಿಮಾಡಿದಳು.ನೀನು ಹಾಗೆ ದುರುಗುಟ್ಟಿ ನೋಡುತ್ತಿದ್ದರೂ ನನ್ನ ಬಳಿ ಬರಲು ಭಯವೇ ? ಛೇ ನಾಚಿಕೆ ಇರಬಹುದು ಎಂಬ ಕಾರಣ ಬರಿ ಪೊಳ್ಳು. ಅದೇನಾದರೂ ಇದ್ದಿದ್ದರೆ, ನಮ್ಮ ನೋಟಗಳೆರಡು ಕೂಡಿದಾಗ , ಕಂಡೂ ಕಾಣದವನಂತೆ ದೃಷ್ಟಿ ಬೇರೆಡೆಗೆ ಸರಿಸುತ್ತಿದ್ದೆ. ಆದರೂ ನಿನ್ನ ಕಂಡಾಕ್ಷಣ ನಿನ್ನ ಕಣ್ಣಿನ ಮುಗ್ಧತೆ,ರೂಪ ನನ್ನನ್ನು ಸೆಳೆಯದೇ ಇರಲಿಲ್ಲ. ಅದರೂ ಇಲ್ಲದ ತೊಂದರೆಯನ್ನು ಗಂಟಿಕ್ಕಿಕ್ಕೊಳ್ಳಬಾರದು ಎಂದು ಮನಸ್ಸಿನಲ್ಲೇ ನಿರ್ಧರಿಸಿ ಮನೆಯೆಡೆಗೆ ನಡೆದೆ. ಎಷ್ಟಾದರೂ ನೀನು ಅಪರಿಚಿತನಲ್ಲವೆ ?. ಮನೆಗೆ ಹೋಗುವಾಗ ಸಿಕ್ಕುವ ಜಾರುಬಂಡೆಯಂತಿರುವ ರಸ್ತೆಯಲ್ಲಿ ನಡೆದು ಬರುವಾಗ ಯಾರೋ ನನ್ನನ್ನು ಹಿಂಬಾಲಿಸುವಂತೆನ್ನಿಸಿ ಹಿಂದುರುಗಿ ನೋಡಿದಾಗ ಮತ್ತೆ ನಿನ್ನ ದರ್ಶನವಾಯಿತು. “ ಥೂ ! ನಾನು ನೋಡಿದ್ದೇ ತಪ್ಪಾಯಿತು. ಅನಗತ್ಯ ತಲೆನೋವು ಎದುರಾಯಿತಲ್ಲಾ” ಎಂದು ಒಮ್ಮೆ ನನ್ನನ್ನೇ ಬೈದುಕೊಂಡೆ. ಅಲ್ಲೇ ಬಳಿ ಬಂದು ಚೆನ್ನಾಗಿ ಬೈದು, ಬೇಕಾದರೆ ಅಲ್ಲೇ ತಿರುಗಾಡುತ್ತಿರುವ ಬೆರಳೆಣಿಕೆಯ ಜನರನ್ನು ಸೇರಿಸಿ ಜಗಳ ಪ್ರಾರಂಭಿಸಬಹುದೆಂದು ಯೋಚಿಸಿದೆ.ಅದರೆ ಧೈರ್ಯಬರಲಿಲ್ಲ. ಜಗಳದಲ್ಲಿ ನೀನು ಕೋಪಗೊಂಡು ಗಾಯಗೊಳಿಸಿದರೆ, ಒಬ್ಬಳೇ ಆಸ್ಪತ್ರೆಗೆ ತಿರುಗಬೇಕಾಗುತ್ತದೆ ಎಂದೆನ್ನಿಸಿ ಹಾಗೆಯೇ ಮುಂದೆ ನಡೆದೆ. ರಸ್ತೆ ಕೊನೆಯವರೆಗೂ ಹಿಂದಿರುಗಿ ನೋಡದೆ ನಡೆದು, ಅರಳಿ ಮರದ ಜೋಡಿ ರಸ್ತೆ ಸಿಕ್ಕಾಗ ಸ್ವಲ್ಪ ಧೈರ್ಯ ಬಂತು. ಈ ಜನನಿಬಿಡ ರಸ್ತೆಯಲ್ಲಿ ಹಿಂಬಾಲಿಸುವ ಧೈರ್ಯ ಯಾರಿಗಿದೆ ? ಎಂದೆನ್ನುತ್ತಾ ಮತ್ತೆ ತಿರುಗಿ ನೋಡಿದಾಗ ನಿನ್ನನ್ನು ಕಂಡು ಅಶ್ಚರ್ಯವಾಯಿತು. ನಿನ್ನ ತಾಳ್ಮೆಯನ್ನು ಮೆಚ್ಚಲೇಬೇಕು, ಇಷ್ಟು ದೂರ ಹಿಂಬಾಲಿಸುವುದು ಕಷ್ಟವೇ ಸರಿ. ಹಿಂಬಾಲಿಕೆಯಲ್ಲೂ ಸೌಜನ್ಯವೇ ? ಹಿಂಬಾಲಿಸುತ್ತಿರುವಂತೆ ಕಾಣದಿರಲು ದೂರ ಕಾಯ್ದುಕೊಳ್ಳುತ್ತಿರುವುದು. ಜೊಲ್ಲು ಸುರಿಸಿಕೊಂಡು ಬೀದಿ ತಿರುಗುವ ನಿಮ್ಮಂಥವರಿಗೆ ಸೌಜನ್ಯಗಳ ಗಂಧವಿದೆಯೇ ?
ಸುಮ್ಮನೆ ಅಲಕ್ಷಿಸಿ ನಡೆದರೆ, ತೆಪ್ಪಗೆ ಹಿಂದಿರುಗುತ್ತೀಯ ಎಂದು ಗೊಣಗಿಕೊಂಡು ನಡೆದೆ. ಅರಳಿಮರದ ಕೆಳಗೆ ಕುಳಿತುಕೊಳ್ಳುವ ಪಡ್ಡೆ ಹುಡುಗರು, ಸೋಮಾರಿಗಳು ನಾನು ನಡೆದುಬರುವುದನ್ನು ನೋಡುತ್ತಿರುವಾಗ, ನಿನ್ನ ಅವರ ನೋಟಗಳ ವ್ಯತ್ಯಾಸದ ಅರಿವಾಯಿತು. ಗೆಳೆತನದ ಅಪೇಕ್ಷೆಯ ನೋಟಕ್ಕೂ, ಲಂಪಟ ನೋಟಕ್ಕೂ ವ್ಯತ್ಯಾಸ ತಿಳಿಯುವ ಬುದ್ಧಿಮತ್ತೆ ನನ್ನಲ್ಲಿದೆ. ಈಗ ನೀನು ನನ್ನೊಂದಿಗಿದ್ದಿದ್ದರೆ ನನ್ನನ್ನು ಗೇಲಿಮಾಡುವುದಿರಲಿ, ನೋಡಲೂ ಅವರು ಹೆದರುತ್ತಿದ್ದರು ಎನ್ನಿಸಿತು.ಇದ್ದಕ್ಕಿದ್ದಂತೆ ನಿನ್ನ ಗೆಳೆತನದ ಬಗ್ಗೆ ಯೋಚಿಸತೊಡಗಿದೆ. ಮನೆಯಲ್ಲಿ ಯಾವ ತೊಂದರೆ ಆಗುವುದಿಲ್ಲ .ಅಪ್ಪ ತುಂಬಾ “ಬಿಂದಾಸ್” ಆಸಾಮಿ. ಇಲ್ಲಿಯವರೆಗೆ ನಾನು ಮಾಡಿರುವ ಕೆಲಸವನ್ನು ವಿರೋಧಿಸಿಲ್ಲ. ತಪ್ಪಾಗಿ ಕಂಡಾಗ ಮಾತ್ರ,ಅದರಿಂದ ಎದುರಾಗುವ ತೊಂದರೆಗಳನ್ನು ಎಳೆ ಎಳೆಯಾಗಿ ಅವರು ವಿವಿರಿಸಿದಾಗ ,ನನಗೆ ಅದೆಷ್ಟು ಬಾರಿ ಮನಃಪರಿವರ್ತನೆಯಾಗಿಲ್ಲ. ಅಮ್ಮ ಸ್ವಲ್ಪ ಕೋಪಮಾಡಿಕೊಳ್ಳಬಹುದು. ಹೊಸಬರು, ಯಾರೇ ಇರಲಿ ಸಂಶಯದ ದೃಷ್ಟಿಯಿಂದ ನೋಡುವುದು ಅವರ ಅಭ್ಯಾಸ.ಆದರೂ ಅಮ್ಮ ತುಂಬಾ ಒಳ್ಳೆಯವರು.ನಿನ್ನ ಕಣ್ಣಿನ ಮುಗ್ಧತೆಯನ್ನು ಕಂಡಾಗ ಅವರೂ ಕರಗಿ ಸುಮ್ಮನಾಗುತ್ತಾರೆ. ಆದರೂ ಕೆಲವು ಸೋಮಾರಿಗಳ ಕಾಡುಹರಟೆಗೆ ಹೆದರಿ ನಿನ್ನ ಗೆಳೆತನ ಬೆಳೆಸಿದರೆ ನಿನ್ನನ್ನು ಉಪಯೋಗಿಸಿದಂತಾಗುವುದಿಲ್ಲವೆ ? . ಈ ವ್ಯರ್ಥ ಚಿಂತೆಗಳಲ್ಲಿ ಕಾಲಹರಣ ಮಾಡಬಾರದು. ಕೆಲಸ ಸಾಕಷ್ಟಿದೆ. ಪರೀಕ್ಷೆಗಳು ಹತ್ತಿರವಾಗುತ್ತಿವೆ, ಒಳ್ಳೆ ಕಾಲೇಜಿನಲ್ಲಿ ಸೀಟು ಸಿಕ್ಕುವಂತಾಗಬೇಕು. ಅದೂ ಮೆರಿಟ್ ಸೀಟು. ಅಪ್ಪನಿಗೆ ಹೊರೆಯಾಗದೇ ಸ್ವಂತ ಕಾಲಿನ ಮೇಲೆ ನಿಂತಾಗ ಅಮ್ಮನ ದಿನನಿತ್ಯದ “ಮನೆ ಕೆಲಸ ಕಲಿತುಕೊ” ರಾಗಕ್ಕೆ ಮಂಗಳ ಹಾಡಿದಂತಾಗುತ್ತದೆ.” ನಾನು ಇಷ್ಟೆಲ್ಲಾ ಓದಿರುವುದು ಮನೆಯಲ್ಲಿ ಅಡಿಗೆಮಾಡಿಕೊಂಡು ಸುಮ್ಮನಿರುವುದಕ್ಕಲ್ಲ , ಏನಾದರೂ ಸಾಧಿಸಬೇಕು, ಹೆಸರುಗಳಿಸಬೇಕು “ ಎಂದು ಹುಮ್ಮಸ್ಸಿನಿಂದ ನಡೆಯತೊಡಗಿದೆ. ಮನೆಯ ರಸ್ತೆ ತಿರುವಿನಲ್ಲಿಯೂ ನಿನ್ನ ಬಗ್ಗೆ ಯೋಚಿಸುತ್ತಿರಲಿಲ್ಲ, ಆದರೆ ನೀನು ನಡೆದು ಬರುತ್ತಿರುವುದು ಮಾತ್ರ ಕಾಣಿಸಿತು. ಕೊನೆಯ ಬಾರಿ ನಿನ್ನ ಕಣ್ಣುಗಳನ್ನು ಒಮ್ಮೆ ನೋಡಿಬಿಡಬೇಕೆಂದು ತಿರುಗಿದೆ. ನಿನ್ನ ಕಣ್ಣುಗಳ ಮುಗ್ಧತೆಯಲ್ಲಿ ನನ್ನ ದೃಢನಿಶ್ಚಯವೆಲ್ಲಾ ಕರಗಿ ಅಲ್ಲೇ ನಿಂತುಬಿಟ್ಟೆ. ಆಗ ಅನುಭವಿಸಿದ ತಳಮಳ, ಅವಿಸ್ಮರಣೀಯ ! ಕೆಲವು ಕ್ಷಣಗಳು ಮುಂದೇನು ಮಾಡಬೇಕೆಂದು ತಿಳಿಯದಂತಾದರೂ ಭಯ, ಅನಿಶ್ಚಿತತೆಗಳ ನಡುವೆ ವಿಚಿತ್ರವಾದ ಸಂತೋಷವನ್ನೂ ಅನುಭವಿಸುತ್ತಿದ್ದೆ. ಸರಿ ಅದ್ದದ್ದಾಗಲಿ ಎಂದು ಗಟ್ಟಿ ಮನಸ್ಸು ಮಾಡಿ ನಿನ್ನೆಡೆಗೆ ಕೈಮಾಡಿ ಕರೆದಾಗ, ಒಡನೆ ಬಳಿ ಬಂದು ನೀನು ಬಾಲವಲ್ಲಾಡಿಸಿದೆ.

ಪಾನಿಪಟ್

“ಹೆದರಿಕೊಳ್ಳಬೇಡಿ, ನಾನು ನಿಮಗೆ ಯಾವ ರೀತಿಯಲ್ಲೂ ತೊಂದರೆ ಕೊಡೊದಿಲ್ಲ”

( ಅಲ್ಲಿದ್ದವರು ಸುತ್ತಮುತ್ತ ತಿರುಗಿ, ಎಲ್ಲ ನೋಟಗಳು ಎಲ್ಲ ದಿಕ್ಕುಗಳನ್ನು ಸುತ್ತಿಬಂದು ಕೊನೆಗೆ ಒಂದೇ ಕಡೆ ಕೇಂದ್ರೀಕೃತವಾದವು. ಮತ್ತೆ ಅದೇ ವಿನಯಪೂರ್ಣ ಧ್ವನಿ ಮಾತನಾಡಿತು)

“ನಾನು ನಿಮ್ಮಂತೆ ಒಂದು ಸಾಧಾರಣ ಜೀವ,ನನ್ನ ಮಾತು ಕೇಳಿ ನಿಮಗೆ ಆಶ್ಚರ್ಯವಾಗ್ತಿರಬಹುದು.ಆದ್ರೆ ನನಗೆ ಇದೇನು ಹೊಸದಲ್ಲ.ನಿಮ್ಮೊಡನೆ ಮಾತನಾಡುವುದಕ್ಕಿಂತ ಮೊದಲು ಇಲ್ಲೇ ಇದ್ದನನ್ನ ಬಂಧುಗಳೊಡನೆ, ಸ್ನೇಹಿತರೊಡನೆ ಮಾತನಾಡುತ್ತಿದ್ದೆ.ಆದರೆ ಈಗ ಅವರ್ಯಾರು ಇಲ್ಲ.”

(ವಿನಯದಿಂದ ಧ್ವನಿಯ ಭಾವ ವಿಷಾದಕ್ಕೆ ತಿರುಗಿದರೂ, ಮಾತನಾಡುವುದನ್ನು ಮುಂದುವರೆಸುತ್ತದೆ)

“ನಿಮ್ಮಂಥವರೇ ಅವರನ್ನೆಲ್ಲ ನನ್ನ ಪಾಲಿಗೆ ಇಲ್ಲದಂತೆ ಮಾಡಿಬಿಟ್ರು. ಚೈತ್ರದಲ್ಲಿ ಕೊಬ್ಬಿ ಗ್ರೀಷ್ಮದಲ್ಲಿ ಸೊರಗುತ್ತಿದ್ದ ನಮಗೆ ಹೆಚ್ಚೇನೂ ಚಿಂತೆಗಳಿರಲಿಲ್ಲ.ಬೆಳಗ್ಗಿನಿಂದ ಸಂಜೆಯವರೆಗೆ ಊಟ ತಯಾರಿಸಿ,ಶೇಖರಿಸಿ, ರಾತ್ರಿ ಹರಟೆಹೊಡೆಯುತ್ತಾ, ನಿದ್ದೆ ಹೋಗುತ್ತಿದ್ದ ನಮಗೆ ಆಗೊಂದು, ಈಗೊಂದು ಕ್ಷಾಮ ಬಿಟ್ಟರೆ ಜೀವಕ್ಕೆ ಆಪತ್ತಾಗುವಂತಹ ಪರಿಸ್ಥಿತಿ ಒದಗೊದಿಲ್ಲ, ಅಂತಲೇ ಅಓದುಕೊಂಡಿದ್ದ.ಆದ್ರೆ ಒಂದು ದಿನ ಜನರ ಗುಂಪೊಂದು ಬಂದು ನನ್ನ ಬಂಧುಗಳನ್ನೂ , ಮಿತ್ರರನ್ನೂ ಕೊಂದು, ಅವರ ಅವಯವಗಳನ್ನು ಕೊಂಡೊಯ್ದರು. ಆ ಗುಂಪು ನಮ್ಮನ್ನೆಲ್ಲಾ ಕೊಲ್ಲಲು, ನಮ್ಮ ದೂರದ ಸಂಬಂಧಿಯೊಬ್ಬನ ಅಂಗವನ್ನೇ ಆಯುಧದ ಹಿಡಿಯಾಗಿ ಬಳಸುತ್ತಿದ್ದರು. ನಿಂತುಬಿಡು ಎಂದು ಅವನನ್ನು ಗೋಗರೆದೆವು, ಆದರೆ ಅವರು ಅವನ ಬಾಯಿ ಮುಚ್ಚಿಸಿಬಿಟ್ಟಿದ್ದರು. ನಮ್ಮ ಚೀರಾಟವೆಲ್ಲಾ ವ್ಯರ್ಥವಾಯಿತು. ಅಂದು ನಾನು ತಬ್ಬಲಿಯಾದೆ.

(ವಿಷಾದದಿಂದ ಶಾಂತಭಾವಕ್ಕೆ ಧ್ವನಿ ಮರಳಿತು.ಅಲ್ಲಿದ್ದ ದಾರಿಹೋಕರೆಲ್ಲ ತಬ್ಬಿಬ್ಬಾಗಿ , ತಮ್ಮ ಕಿವಿಗಳನ್ನೇ ನಂಬಲಾಗದೆ ಮೌನವಾಗಿದ್ದರು. ಸ್ವಲ್ಪ ಹೊತ್ತು ಮೌನವು ಅಲ್ಲಿನ ವಾತವರಣದಲ್ಲಿ ನೆಲೆಸಿತು )

“ನನ್ನನ್ನು ಯಾಕೆ ಕೊಲ್ಲದೇ ಬಿಟ್ಟು ಹೋದರು ಅಂತ ಒಮ್ಮೊಮ್ಮೆ ಯೋಚಿಸುತ್ತೇನೆ ? ಆದ್ರೆ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಬಹುಶಃ ಮನುಷ್ಯರು ತೊಂದರೆಯಿಂದ ಪಾರಾದಾಗಲೆಲ್ಲಾ “ತಮ್ಮ ಪೂರ್ವ ಜನ್ಮದ ಪುಣ್ಯ” ಎಂದು ಹೇಳುತ್ತಾರಲ್ಲ ಅದೇ ನನ್ನ ಉಳಿವಿಗೂ ಅದೇ ಕಾರಣವಿರಬಹುದೇನೋ ?” ಅಥವ ನನ್ನ ಅಂಗಾಂಗಗಳು ಅವರ ಪ್ರಯೋಜನಕ್ಕೆ ಬರುತ್ತಿರಲ್ಲಿಲ್ಲವೋ ? ಗೊತ್ತಿಲ್ಲ “
( ಮೆಲ್ಲನೆ ಚಿಕ್ಕ ನಗು ಕೇಳಿಬಂತು)

“ಅಂದಿನಿಂದ ಮನುಷ್ಯರ ಮೇಲೆ ನನಗೆ ತಡೆಯಲಾರದಷ್ಟು ಕೋಪ. ನನ್ನ ನೆರಳನ್ನರಸಿ ಬಂದ ದಾರಿಹೋಕರಿಗೆ, ಅದು ದೊರೆಯದಿರಲೆಂದು , ಹಿಂದಕ್ಕೆ ಬಾಗಲು ಪ್ರಯತ್ನಿಸುತ್ತಿದ್ದೆ, ಗಟ್ಟಿಯಾದ ನನ್ನ ಕಾಯಿಗಳನ್ನು ಅವರ ಮೇಲೆಲ್ಲಾಉದುರಿಸುತ್ತಿದ್ದೆ. ಆದರೆ ಆ ದಿನ ಒಂದು ಘಟನೆ ನೋಡಿದ ಮೇಲೆ ನಿಮ್ಮ ಮೇಲಿದ್ದ ಧೋರಣೆಯೇ ಬದಲಾಯಿತು. ಮತ್ತೆ ಅದೇ ಘಟನೆ ಸಂಭವಿಸುವ ಸೂಚನೆಗಳು ಸಿಕ್ಕಿದ್ದರಿಂದ, ನೀವೆಲ್ಲಾ ಇಲ್ಲಿಂದ ಹೋಗುವುದು ಒಳಿತೆಂದು ಎಚ್ಚರಿಸಲು ಮಾತನಾಡಬೇಕಾಯಿತು. ಆದ್ರೆ ಅಷ್ಟಕ್ಕೆ ಸುಮ್ಮನಾಗದೆ ನನ್ನ ಕಥೆಯನ್ನೆಲ್ಲಾ ಹೇಳಿಬಿಟ್ಟೆ”
( ಮರದ ಮಾತುಗಳನ್ನು ಕೇಳಿದ ನಂತರ ಅಲ್ಲಿದ್ದ ದಾರಿಹೋಕರ ಕುತೂಹಲ ಗಾಬರಿಗೆ ತಿರುಗುತ್ತದೆ. ಅವರಲ್ಲೊಬ್ಬ ಧೈರ್ಯಮಾಡಿ ನಡೆದ ಘಟನೆಯನ್ನು ವಿವರಿಸೆಂದು ಮರಕ್ಕೆ ಹೇಳುತ್ತಾನೆ)

“ ಈ ಘಟನೆ ನಡೆದು ಬಹಳ ಕಾಲವೇ ಆಗಿವೆ. ಆಗ ನಾನು ಘಮಘಮಿಸುವ ಹೂವುಗಳಿಂದ, ದಪ್ಪ ಕಾಯಿಗಳಿಂದ ಕೂಡಿ ವಿಜ್ರಂಭಿಸುತ್ತಿದ್ದೆ . ನಾಲ್ಕೈದು ಜೋಡಿಹಕ್ಕಿಗಳ ಗೂಡುಗಳು ಕೂಡ ಇದ್ದವು. ಹಕ್ಕಿಮರಿಗಳ ಚಿಲಿಪಿಲಿಯೊಂದಿಗೆ ನಾನು ಕೂಡ ಹಾಡುತ್ತಿದ್ದೆ. ನನ್ನ ಬಂಧು ಮಿತ್ರರೇ ಹಕ್ಕಿಮರಿಗಳಾಗಿ ಬಂದಿರಬೇಕೆನ್ನಿಸುತ್ತಿತ್ತು.ಒಂದು ದಿನ ಆಯುಧಗಳನ್ನು ಹಿಡಿದ ಜನರ ದೊಡ್ಡ ಗುಂಪು ನಾನಿದ್ದಲ್ಲಿಗೆಬರುತ್ತಿರುವುದು ಕಾಣಿಸಿತು.ಇಲ್ಲಿಗೆ ನನ್ನ ಜೀವಿತವು ಮುಗಿಯಿತೆಂದು ಅನ್ನಿಸತೊಡಗಿದರೂ, ಈ ಬಾರಿ ಸುಲಭವಾಗಿ ಶರಣಾಗದೆ,ಹೋರಡಬೇಕೆಂದು ನಿರ್ಧರಿಸಿ, ಅತ್ತಿತ್ತ ಅಲುಗಾಡಿ ಕಾಯಿಗಳ ಮಳೆಯನ್ನು ,ಬರುತ್ತಿರುವ ಗುಂಪಿನ ಮೇಲೆ ಸುರಿಸಲು ಸಜ್ಜಾದೆ. ಆದರೆ ಆ ಗುಂಪಿನ ಬಳಿ ನನ್ನ ಬಂಧುಗಳನ್ನು ಕೊಂದ ಆಯುಧವಿರಲಿಲ್ಲ , ಬದಲಿಗೆ ಹರಿತ ತುದಿಯ ಆಯುಧಗಳೇ ಇದ್ದವು. ಗುಂಪಿನಲ್ಲಿ ಕೆಲವರು ನಡೆದುಬರುತ್ತಿದ್ದರೆ, ಇನ್ನುಕೆಲವರು ಕುದುರೆಯ ಮೇಲೆ, ಆನೆಯ ಮೇಲೆ ಕುಳಿತು ಸಾಗಿ ಬರುತ್ತಿದ್ದರು. ಆನೆಯ ಮೇಲೆ ಕುಳಿತಿದ್ದವರಂತೂ ವಿಚಿತ್ರವಾದ ಬಟ್ಟೆಗಳನ್ನು ಧರಿಸಿದ್ದರು. ಆನೆಯ ಮೇಲೆ ಕುಳಿತಿದ್ದ ಒಬ್ಬನಂತೂ ಕಬ್ಬಿಣದ ಬಟ್ಟೆಯನ್ನೇ ಧರಿಸಿದ್ದನು. ಸೂರ್ಯನ ಬೆಳಕು ಅದರ ಮೇಲೆ ಬಿದ್ದು , ಹೊಳೆಯುವಂತೆ ಮಾಡುತ್ತಿತ್ತು. ಆ ಗುಂಪು “ಬಾಬರ್ ಚಕ್ರವರ್ತಿ ಜಿಂದಾಬಾದ್” “ಅಲ್ಲಾ-ಹು-ಅಕ್ಬರ್” ಎಂದೆಲ್ಲಾ ಕೂಗುತ್ತಾ ಹತ್ತಿರ ಬರುತ್ತಿತ್ತು. ಆ ಗಲಾಟೆಗೆ ಹೆದರಿ ಮರದಲ್ಲಿದ್ದ ಹಕ್ಕಿಗಳೆಲ್ಲಾ ಗೂಡುಗಳನ್ನು ಬಿಟ್ಟು ಹಾರಿಹೋಗಿ, ತಮ್ಮ ಗೂಡುಗಳತ್ತ ಆ ಗುಂಪು ಗಮನಹರಿಸದಿರಲೆಂದು ಅವುಗಳೂ ಗಲಾಟೆ ಮಾಡತೊಡಗಿದವು. ಅವರ ಗಲಾಟೆಯಲ್ಲೇ ಮಗ್ನವಾಗಿದ್ದ ಆ ಗುಂಪಿಗೆ ಹಕ್ಕಿಗಳ ಗುಂಪಿನ ಗಲಾಟೆ ಗಮನಕ್ಕೇ ಬರಲಿಲ್ಲ.

ಆನೆಯ ಮೇಲೆ ಕುಳಿತಿದ್ದವನು, ಆ “ಬಾಬರ್ ಚಕ್ರವರ್ತಿ” ಯೇ ಆಗಿರಬೇಕು. ಆತ ಮರದ ಬಳಿ ಬಂದಾಗ, ಆನೆಯಿಂದಿಳಿದು ಅವನಂತೆಯೇ ಬಟ್ಟೆ ಧರಿಸಿದ್ದ ಕೆಲವರೊಂದಿಗೆ ಸ್ವಲ್ಪ ಹೊತ್ತು ಮಾತನಾಡಿದನು. ನಾನು ಕೋಪದಿಂದ ಒಂದು ದಪ್ಪ ಕಾಯನ್ನು ಅವನ ತಲೆಯ ಮೇಲೆ ಬೀಳುವಂತೆ ಮಾಡಿದೆ. ಅವನು ಸಮಧಾನದಿಂದಿದ್ದರೂ “ಹಾಯ್ ಅಲ್ಲಾ ! “ ಎಂದು ಗುಂಪಿನಿಂದ ಹಲವು ಧ್ವನಿಗಳು ಬಿಡಿಬಿಡಿಯಾಗಿ ಕೇಳಿಬಂದವು. ಅವನು ಮಾತ್ರ ಬೆದರದೆ, ನನ್ನನ್ನು ದಿಟ್ಟಿಸಿ ನೋಡಿ “ಈ ದೇಶದಲ್ಲಿ ಎಲ್ಲರೂ ನಮ್ಮ ಶತ್ರುಗಳು, ಎಚ್ಚರದಿಂದಿರಿ, ಎಲ್ಲಿಂದ ಮುಂದಿನ ಪ್ರಹಾರ ಬರುತ್ತದೋ ಗೊತ್ತಿಲ್ಲ” ಎಂದು ನಕ್ಕನು. ಅವನ ಮಾತು ಆ ಗುಂಪಿನಲ್ಲಿ ನಗೆಯ ಅಲೆಯನ್ನು ತರಿಸಿತು. ಅವನ ಮಾತನ್ನು ಕೇಳಿದವರು, ಕೇಳದಿದ್ದವರು ಎಲ್ಲರೂ ನಗುತ್ತಿದ್ದರು. ಅವನ ಮಾತಿನಲ್ಲಿ ನಗುವಂತಹ ವಿಚಾರವೇನೆಂದು ನನಗೆ ತಿಳಿಯಲಿಲ್ಲ.
ಬಹುಶಃ ಅವರಿಗೆಲ್ಲಾ ಅವನಿಂದೇನೋ ಪ್ರಯೋಜನವಿರಬೇಕು. ಅಷ್ಟು ಜನ ಒಬ್ಬ ವ್ಯಕ್ತಿಯನ್ನು ಸಂತೋಷಪಡಿಸಲು ಹಾತೊರೆಯುತ್ತಿರುವುದನ್ನು ಕಂಡು ನನಗೆ ಅಸೂಯೆಯಾಯಿತು.
ಸ್ವಲ್ಪ ವಿರಾಮದ ನಂತರ ಆ ಗುಂಪು ಮುಂದುವರೆಯಿತು. ಎಷ್ಟೋ ಜನ ನಾನು ಬೀಳಿಸಿದ್ದ ಕಾಯಿಗಳನ್ನು ಆರಿಸಿಕೊಂಡು ತಿನ್ನುತ್ತಾ ಮುಂದುವರೆದರು “
“ನನ್ನ ಪ್ರಾಣಕ್ಕೊದಗಿದ ಸಂಚಕಾರದಿಂದ ಪಾರಾದೆನೆಂಬ ಸಮಾಧಾನ, ಜೊತೆಗೆ ಸಂತೋಷದಿಂದ ಆ ಗುಂಪು ದೂರಸರಿಯುತ್ತಿರುವುದನ್ನು ನೋಡುತ್ತಾ ನಿಂತೆ.ನೀರಿನ ಹನಿಗಳೆಲ್ಲಾ ತಮ್ಮ ಸ್ವಂತಿಕೆಯನ್ನು ಬಿಟ್ಟು ಒಡಗೂಡಿ ಮೋಡವಾಗುವಂತೆ, ಆ ಗುಂಪಿನ ಆನೆ, ಕುದುರೆ ಮತ್ತು ಮನುಷ್ಯರು ಒಡಗೂಡಿ, ಅವರ ಬಿಡಿಚಿತ್ರಗಳೆಲ್ಲ ಮಾಯವಾಗಿ ಆಯುಧಗಳ ಕಾಡೊಂದು ಸೃಷ್ಟಿಯಾಯಿತು. ಅದರಿಂದ ಸ್ವಲ್ಪ ದೂರದಲ್ಲೇ ಮತ್ತೊಂದು ಆಯುಧಗಳ ಕಾಡು ನಿಂತಿತ್ತು.

ಇದ್ದಕ್ಕಿದ್ದಂತೆ, ಎರಡೂ ಕಾಡುಗಳಿಂದ ಬಿಡಿ,ಬಿಡಿಯಾಗಿ ಮನುಷ್ಯರು, ಕುದುರೆಗಳು ಹೊಮ್ಮತೊಡಗಿದರು. ಅವರೆಲ್ಲರೂ ಮತ್ತೊಂದು ಗುಂಪಿನ ಜನರೊಂದಿಗೆ ಹೊಡೆದಾಡತೊಡಗಿದರು. ನನ್ನ ಬಂಧುಗಳ ಅಂಗಗಳನ್ನು ಕತ್ತರಿಸಿದಂತೆ, ಅವರು ಮತ್ತೊಬ್ಬರ ಅಂಗಗಳನ್ನು ಕತ್ತರಿಸತೊಡಗಿದರು. ಕೆಂಪು ನೀರು ದೂರಕ್ಕೆ ಕಾಣುತ್ತಿತ್ತು.
ಮನುಷ್ಯರ ಆವೇಷದ ಕೂಗಾಟ, ಕುದುರೆಗಳ ಕೆನೆತ, ಆನೆಗಳ ಘೀಳಾಟ ದೂರದಲ್ಲಿದ್ದ ನನಗೇ ಕೇಳುತ್ತಿತ್ತು.
ಬಹಳ ಹೊತ್ತಿನ ಹೊಡೆದಾಟದ ನಂತರ ಒಂದು ಗುಂಪು ಅಲ್ಲಿಂದ ಓಡತೊಡಗಿತು.ನಾನು ಮೊದಲೇ ನೋಡಿದ್ದ ಗುಂಪಿನ ಜನರು, ಅವರ ಬೆನ್ನಟ್ಟಿ,ಎಷ್ಟೋ ಜನರನ್ನು ಹಿಡಿದು ಕತ್ತರಿಸಿದರು. ಕೆಲವರು ಮಾತ್ರ ತಪ್ಪಿಸಿಕೊಂಡರು . ಅವರೆಲ್ಲಾ ” ಪೂರ್ವಜನ್ಮದಲ್ಲಿ ಪುಣ್ಯ” ಮಾಡಿದ್ದ ವರಿರಬೇಕು. ಅವರ ಹಿಂಬಾಲಿಕೆಯನ್ನು ನಿಲ್ಲಿಸಿ ಆ ಗುಂಪು , ಮತ್ತೆ ಆಯುಧಗಳ ಕಾಡಾಯಿತು. ಮತ್ತೆ “ ಬಾಬರ್ ಚಕ್ರವರ್ತಿ ಜಿಂದಾಬಾದ್” ,” ಅಲ್ಲಾ-ಹು- ಅಕ್ಬರ್” ಎಂದು ಕೂಗತೊಡಗಿದರು.

“ ಕೆಲವರನ್ನು ಗಾಯಾಳುಗಳ ಶುಶ್ರೂಷೆಗೆ ಬಿಟ್ಟು , ಪೂರ್ವ ಜನ್ಮದಲ್ಲಿ ಪುಣ್ಯಮಾಡಿದ್ದವರು ಓಡಿಹೋದ ದಿಕ್ಕಿನಲ್ಲಿ ಆ ಗುಂಪು ಮುಂದುವರೆಯಿತು. ಅಲ್ಲೆ ಉಳಿದವರು ಒಂದು ದೊಡ್ಡ ಗುಂಡಿಯನ್ನು ತೆಗೆದು, ತಮ್ಮ ಗುಂಪಿನ ಸತ್ತವರನ್ನು ಮಾತ್ರ ಹೂಳತೊಡಗಿದರು. ಪ್ರಾಣ ಉಳಿಸುವಷ್ಟು ಸಮಯವಿಲ್ಲದವರನ್ನು ಅಲ್ಲೆ ಕೊಂದು ಹೂಳಿಬಿಡುತ್ತಿದ್ದರು. ಇದಾದ ನಂತರ ಸಾಧ್ಯವಾದಷ್ಟು ಗಾಯಾಳುಗಳನ್ನು ಹೊತ್ತು ಮಾಯವಾದರು. ತುಂಡರಿಸಿದ್ದ ಮನುಷ್ಯರ ದೇಹಗಳು ರಣಹದ್ದುಗಳಿಗೆ ಹೇರಳವಾಗಿ ಆಹಾರವಾದವು.ಅವುಗಳು ನನ್ನಲ್ಲೆ ತಂಗತೊಡಗಿದ್ದರಿಂದ , ಜೋಡಿಹಕ್ಕಿಗಳೆಲ್ಲ ಹೆದರಿ ದೂರವಾದವು. ಎರಡನೇ ಬಾರಿ, ಸಿಕ್ಕ ಅಲ್ಪ ಸಂತೋಷವು , ಮನುಷ್ಯರ ದೆಸೆಯಿಂದ ದೂರವಾಯಿತು. ಆದರೂ ಆ ಹೊಡೆದಾಟ ಕಂಡ ಮೇಲೆ ನನಗೆ ಮನುಷ್ಯರ ಮೇಲಿದ್ದ ಕೋಪವೆಲ್ಲ ತಣ್ಣಗಾಯಿತು. ತಮ್ಮ ಕುಲದವರನ್ನೇ ಹೀಗೆ ಕೊಲ್ಲುವಾಗ ಮರಗಳನ್ನು ಉಳಿಸಿಯಾರೆ ? ನಾನು ಹೂಬಿಡೂವುದನ್ನು ಹೇಗೆ ತಡೆಯಲಾಗುವುದಿಲ್ಲವೋ ಅಂತೆಯೆ ಮನುಷ್ಯರು ಹೊಡೆದಾಡುವುದನ್ನು ತಡೆಯಲಾಗುವುದಿಲ್ಲವೆನ್ನಿಸಿಬಿಟ್ಟಿತು. ಈಗಲೂ ನಿಮ್ಮ ಮೇಲೆ ಅದೇ ಧೋರಣೆಯಿದೆ.
ಎಷ್ಟೋ ದಾರಿಹೋಕರು ಆ ಘಟನೆಯನ್ನು “ಯುದ್ಧ” ವೆಂದು ಕರೆಯುವುದುಂಟು “ ಎಂದು ಹೇಳಿ ಸುಮ್ಮನಾಯಿತು.

(ಯುದ್ಧದ ವಿಚಾರವನ್ನು ಕೇಳಿದೊಡನೆ ಅಲ್ಲಿದ್ದ ಬಹುತೇಕ ಮಂದಿ ಮರದ ಮಾತುಗಳು ಮುಗಿಯುವ ಮುನ್ನವೇ ಮಾಯವಾಗಿದ್ದರು. ಒಬ್ಬ ಮಾತ್ರ ಅದರ ಮಾತುಗಳಲ್ಲಿ ಉತ್ಸುಕನಾಗಿ ನಿಂತಿದ್ದನು.)

ಆ ದಾರಿಹೋಕನು “ಯುದ್ಧ ಆರಂಭವಾದ ಸುದ್ದಿ ಕೇಳಿದ್ದೇನೆ. ಇಂದು ಇಲ್ಲಿ ಕಾದಡುತ್ತಿರುವುದು, ಇನ್ಯಾರೂ ಅಲ್ಲ , ಅಂದು ನೀನು ನೋಡಿದ ಆ ಬಾಬರ್ ಚಕ್ರವರ್ತಿಯ ಮೊಮ್ಮಗನ ಸೈನ್ಯ ? ಗೊತ್ತಾ? “ ಎಂದನು

(ಮರದ ಉತ್ತರಕ್ಕೆ ಕಾಯದೆ, ಮಾತು ಮುಂದುವರೆಸುತ್ತಾ)

“ ಹುಮಾಯೂನನ ಹಠಾತ್ ಮರಣದ ನಂತರ ಆ ಹಸುಗೂಸನ್ನು ಸಿಂಹಾಸನದ ಮೇಲೆ ಕೂರಿಸಿ, ರಾಜ್ಯಭಾರವನ್ನೆಲ್ಲಾ ಅವನ ಮಾವ ಬೈರಾಮ್ ಖಾನನು ನೋಡಿಕೊಳ್ತಾ ಇದ್ದಾನೆ. ಮೊಗಲರ ಹುಟ್ಟಡಗಿಸಬೇಕೆಂದು ಕಾಯುತ್ತಿದ್ದ ಹೇಮುವಿಗೆ ಇದು ಸರಿಯಾದ ಸಮಯವೆನ್ನಿಸಿ ಅವರ ಮೇಲೆ ದಂಡೆತ್ತಿ ಬಂದಿದ್ದಾನೆ. ಆದ್ರೆ ಪಾಣಿಪಟ್ ನಲ್ಲಿ ಕಾದಾಡುವಷ್ಟು ಧೈರ್ಯ ಮೊಗಲರಿಗೆ ಹೇಗೆ ಬಂತು ? ಸ್ವಲ್ಪ ಆಶ್ಚರ್ಯವೇ ಆಗ್ತಾಯಿದೆ ! ಹೇಮುವಿನ ಸೈನ್ಯದಲ್ಲಿ ೧೫೦೦ ಆನೆಗಳಿವೆ, ಜೊತೆಗೆ ಅವನ ಸೈನ್ಯವು ಮೊಗಲರಿಗಿಂತ ದುಪ್ಪಟ್ಟಿದೆ ಎಂಬ ಸುದ್ದಿ ಕೇಳಿದ್ದೇನೆ. “ ಎಂದು ದೂರದ ಯುದ್ಧಭೂಮಿಯನ್ನು ದಿಟ್ಟಿಸುತ್ತಾ ನುಡಿದನು.

“ ಏನು ? ಯುದ್ಧ ಪ್ರಾರಂಭವಾಗಿದೆಯೇ ? ಮತ್ತೆ ಜನರ ಗುಂಪುಗಳೇ ಕಾಣಿಸುತ್ತಿಲ್ಲ ? “ ಎಂದು ಮರವು ಪ್ರಶ್ನಿಸಿತು.
(ದಾರಿಹೋಕನು ಒಮ್ಮೆ ನಕ್ಕನು)
“ ಹೇಮು ಆಗಲೇ ಮೊಗಲ್ ಸೈನ್ಯವನ್ನು ಎಷ್ಟೋ ಕಡೆ ಹಿಮ್ಮೆಟ್ಟಿಸಿದ್ದಾನೆ, ಈಗ ನಡೆಯುವುದೇನಿದ್ದರೂ ಕೊನೆಯ ಯುದ್ಧ , ಮೊಗಲ ಸಂತತಿಯ ಅಳಿವು-ಉಳಿವುಗಳನ್ನು ನಿರ್ಧರಿಸುವ ಯುದ್ಧ. ನಾನು ಇಲ್ಲಿಯವರೆಗೆ ಯುದ್ಧವನ್ನು ಕಣ್ಣಾರೆ ನೋಡಿಲ್ಲ, ನೀನು ಅವಕಾಶಕೊಟ್ಟರೆ ಕೊಂಬೆಯೊಂದರ ಮೇಲೆ ಕುಳಿತು, ಎಲೆಮರೆಯಿಂದ ಯುದ್ಧವನ್ನು ನೋಡುತ್ತೇನೆ”
(ಮರದ ಸಮ್ಮತಿ ಪಡೆದು , ದಾರಿಹೋಕನು ಮರವೇರಿ ಎಲೆಮರೆಯಲ್ಲಿ ಕುಳಿತು, ಯುದ್ಧಭೂಮಿಯೆಡೆಗೆ ನೋಟ ಬೀರುತ್ತಾ ಮೌನವಾಗುತ್ತಾನೆ. ಸ್ವಲ್ಪ ಹೊತ್ತಿಗೆ ಆಯಾಸದಿಂದ ನಿದ್ದೆಹೋಗುತ್ತಾನೆ)

“ಏಳು, ಏಳು, ಅಲ್ಲಿ ನೋಡು , ಆಗಲೇ ಒಂದು ಗುಂಪು ಬಂದಾಗಿದೆ ”

(ಕೊಂಬೆಗಳನ್ನು ಅಲ್ಲಾಡಿಸುತ್ತಾ ಮರವು ದಾರಿಹೋಕನನ್ನು ಎಬ್ಬಿಸುತ್ತದೆ)

“ಕುದುರೆಯ ಮೇಲೆ ಕುಳಿತ ಒಬ್ಬ ವ್ಯಕ್ತಿ ಬೊಬ್ಬೆಹೊಡೆಯುತ್ತಾ ಎಡಬಿಡದೆ ಒಂದು ತುದಿಯಿಂದ, ಇನ್ನೊಂದೆಡೆಗೆ ಓಡಾಡುತ್ತಿದ್ದಾನೆ. ಆಗಲೇ ನಾಲ್ಕು ಬಾರಿ ಗುಂಪಿನ ರಚನೆ ಬದಲಿಸಿದ್ದಾಯಿತು”

(ದಾರಿಹೋಕನು ಎಚ್ಚರವಾಗುತ್ತಾನೆ)

“ ಓ ! ಆಗಲೇ ಮೊಗಲ್ ಸೈನ್ಯ ಬಂದುಬಿಟ್ಟಿದೆ.ಅವರ ಕುದುರೆಗಳನ್ನು ಎಲ್ಲಿಬೇಕಾದರೂ, ಎಷ್ಟು ದೂರಿದಿಂದಾದರೂ ಪತ್ತೆ ಹಚ್ಚಬಹುದು. ಅವರ ಸೈನ್ಯದಲ್ಲಿ ಬೇರೆಯವರ ಸೈನ್ಯಕ್ಕಿಂತ ವಿಭಿನ್ನ. ಆನೆಗಳ ಮೇಲೆ ಅವರಿಗೆ ಹೆಚ್ಚಾಗಿ ನಂಬಿಕೆಯಿಲ್ಲ, ಕುದುರೆಗಳು, ಬಿಲ್ಲುಗಾರರೇ ಹೆಚ್ಚಾಗಿ ಕಂಡುಬರೋದು”

(ಬೈರಾಮ ಖಾನನ ಹುರುಪನ್ನೂ , ಚಾಕಚಕ್ಯತೆಯನ್ನು ಮರವು ತೀಕ್ಷ್ಣ ವಾಗಿ ಗಮನಿಸುತ್ತಿತ್ತು)
“ಇಂಥವನೊಬ್ಬ ನಮ್ಮಲ್ಲೊಬ್ಬನಿದ್ದಿದ್ದರೆ ನಮ್ಮನ್ನು ಕೊಲ್ಲಲು ಬಂದ ಗುಂಪಿಗೆ ಒಳ್ಳೆ ಪ್ರತಿರೋಧವನ್ನೇ ಒಡುತ್ತಿದ್ದೆವು” ಎಂದು ಅವನನ್ನು ಪ್ರಶಂಸಿಸುತ್ತಾ ಮರವು ಹೇಳಿತು.

“ಅಲ್ಲಿ ನೋಡು ಹೇಮುವಿನ ಸೈನ್ಯ ನಡೆದು ಬರುತ್ತಿದೆ. ಅಬ್ಬ ! ಹೇಮು ಕುಳಿತಿರುವ ಆನೆ ಎಷ್ಟು ಎತ್ತರವಾಗಿದೆ. ಆನೆಗಳ ಗುಂಪಿನ ಮಧ್ಯದಲ್ಲಿದ್ದರೂ ಅವನು ಎದ್ದು ತೋರುತ್ತಿದ್ದಾನೆ. ಗೆಲ್ಲುವೆನೆಂಬ ಆತ್ಮವಿಶ್ವಾಸ , ಅವನ ದೇಹವನ್ನು ಕಂಬದಂತೆ ನೆಟ್ಟಗೆ ನಿಲ್ಲುವಂತೆ ಮಾಡಿದೆ” ಎಂದು ಹೇಮುವಿದ್ದ ಆನೆಗಳ ಗುಂಪಿನೆಡೆಗೆ ಕೈಮಾಡಿ ತೋರಿಸಿದನು.

“ ಈ ಆತ್ಮವಿಶ್ವಾಸ ಅಂದರೇನು ?” ಎಂದು ಮರವು ದಾರಿಹೋಕನನ್ನು ಪ್ರಶ್ನಿಸಿತು.

“ಸ್ವಲ್ಪ ಸೂಕ್ಷ್ಮವಾಗಿ ಗಮನಿಸು, ಬೈರಾಮ್ ಖಾನನು ಮುಖದಲ್ಲಿ ಸಮಾಧಾನ ಭಾವವಿದ್ದರೂ, ಅವನ ಕೈಗಳು ಅದುರುತ್ತಿವೆ. ಜೀನಿನ ಹಿಡಿತ ಆಗ್ಗಿಂದಾಗ್ಗೆ ತಪ್ಪಿ, ಕುದುರೆಯು ಸೊಟ್ಟ ಸೊಟ್ಟ ಹಾದಿಯಲ್ಲಿ ನಡೆದಾಡುತ್ತಿದೆ. ಸೋಲಿನ ಅಳುಕು ಅವನನ್ನು ಕಾಡುತ್ತಿದೆ. ಅದೇ ಹೇಮುವನ್ನು ನೋಡು , ಶರೀರವು ಅಲುಗಾಡುತ್ತಿಲ್ಲ , ಗೆಲುವು ನಿಶ್ಚಿತವೆಂದು, ಒಮ್ಮೊಮ್ಮೆ ನಗುತ್ತಿದ್ದಾನೆ. “

( ಸೈನ್ಯಗಳೆರಡೂ ಮತ್ತೆ ಆಯುಧಗಳ ಕಾಡಾಗಿ, ಮತ್ತೆ ಬಿಡಿಬಿಡಿಯಾಗಿ, ಕಾದಾಟ ಆರಂಭವಾಗುತ್ತದೆ. ಎದುರು ನಡೆಯುತ್ತಿದ್ದ ಕಾಳಗವನ್ನು ನೋಡುತ್ತಾ ಮರ ಮತ್ತು ದಾರಿಹೋಕನು ಬಾಯಿಗೆ ಬೀಗಹಾಕಿದವರಂತೆ ಸೊಲ್ಲೆತ್ತದೆ ನೋಡುತ್ತಿರುತ್ತಾರೆ. ಅದೆ ರಕ್ತದೋಕುಳಿ, ಅದೇ ಆವೇಷದ ಕೂಗಾಟ. )

ಹೇಮುವಿನ ಸೈನ್ಯ ಮೊಗಲ್ ಸೈನ್ಯವನ್ನು ಹಿಂದೂಡಲು ಪ್ರಾರಂಭಿಸಿದಾಗ “ಇನ್ನು ಮೊಗಲರ ಕಥೆ ಮುಗಿಯಿತು.ಆನೆಗಳು ಮುನ್ನುಗ್ಗಿದರೆ ಬೈರಾಮ್ ಖಾನನು ಹೆದರಿ ಓಡುತ್ತಾನೆ” ಎಂದು ದಾರಿಹೋಕನು ತನ್ನ ಯುದ್ಧಪಾಂಡಿತ್ಯ ಪ್ರದರ್ಶಿಸತೊಡಗಿದನು. ಆದರೆ ಮರವು ಅದಕ್ಕೆ ಬೆಲೆಕೊಡದೇ ಯುದ್ಧವನ್ನು ನೋಡುತ್ತಿತ್ತು.

ಯುದ್ಧದಲ್ಲಿ, ಗುರಿಯಿಲ್ಲದೆ ಹಾರಿಬಿಟ್ಟ ಬಾಣವೊಂದು ಆನೆಯ ಮೇಲಿದ್ದ ಹೇಮುವಿನ ಕಣ್ಣಿಗೆ ತಾಗಿ, ರಕ್ತದ ಧಾರೆ ಹರಿಯತೊಡಗಿ, ಮೂರ್ಛೆಹೋಗುತ್ತಾನೆ. ದಂಡನಾಯಕರು ತಮ್ಮ ಯುದ್ಧ ರಚನೆಗಳನ್ನೆಲ್ಲ ಮರೆತು ಹೇಮು ರಕ್ಷಣೆಗೆ ನಿಲ್ಲುತ್ತಾರೆ.

“ ಅಬ್ಬಾ ! ಯುದ್ಧ ಎಷ್ಟು ಬೇಗ ತಿರುಗಿಬಿಟ್ಟಿತು. ಹೇಮುವಿನ ಸೈನ್ಯ ಹೆದರಿದಂತಿದೆ. ಅವನು ಸತ್ತನೆಂದು ಸೈನ್ಯದಲ್ಲಿ ಗುಲ್ಲೆದ್ದಿರಬೇಕು.ಆ ದಂಡನಾಯಕರೋ ದಡ್ಡ ಶಿಖಾಮಣಿಗಳು, ಸೈನ್ಯವನ್ನು ಸಾಂತ್ವನಗೊಳಿಸದೇ ಹೇಮುವಿನ ಬಳಿ ನಿಂತಿದ್ದಾರೆ “ ಎಂದು ಎತ್ತರದ ಧ್ವನಿಯಲ್ಲಿ ಮಾತನಾಡುವಾಗ ಅವನ ಮಾತುಗಳು ಯುಕ್ತಿಯ ಗೋಡೆಗಳನ್ನು ಲೆಕ್ಕಿಸದೇ, ಸ್ವಚ್ಛಂದವಾಗಿ ಹರಿದಾಡುತ್ತಿರುತ್ತದೆ.

ಹಿಂದೂಡಲ್ಪಡುತ್ತಿದ್ದ ಮೊಗಲ್ ಸೈನ್ಯ ಆತ್ಮವಿಶ್ವಾಸದ ಸಂಚಾಲನವಾಗಿ, ಹೇಮುವಿನ ಪದಾತಿದಳದತ್ತ ವೇಗವಾಗಿ ಮುನ್ನುಗ್ಗಿ ಅವರನ್ನು ಚಂಡಾಡತೊಡಗಿದರು.ಹೆದರಿದರ ಪದಾತಿಸೈನ್ಯ ಕಂಗೆಟ್ಟು ಓಡತೊಡಗಿತು.

“ಇನ್ನು ಹೇಮು ಕಥೆ ಮುಗಿಯಿತು.ಆ ಚುರುಕಾದ ಕುದುರೆ ಸೈನ್ಯವನ್ನು ಆನೆ ಮೇಲಿರುವವರು ಹೇಗೆ ತಾನೆ ಎದುರಿಸಿಯಾರು ?” ಎನ್ನುತ್ತಾ ಕೊಂಬೆಯ ಮೇಲೆ ಸರಿದಾಡಿದ್ದರಿಂದ ಇನ್ನೇನು ಆಯತಪ್ಪಿ ಬೀಳುವಂತಾದರೂ, ಪ್ರಾಣಭೀತಿಯ ಅರಿವಾದೊಡನೆ, ತಾರಕಕ್ಕೇರಿದ ಅವನ ಧ್ವನಿಯಲ್ಲಿ ಸಂಯಮ ಕಾಣಿಸಿಕೊಂಡು ಮರದಂತೆ ಮತ್ತೆ ಮೂಕಪ್ರೇಕ್ಷಕನಗುತ್ತಾನೆ.

ದಾರಿಹೋಕನು ಊಹಿಸಿದಂತೆ ಮಿಂಚಿನ ವೇಗದಲ್ಲಿ ಸಂಚರಿಸುವ ಅಶ್ವದಳದ ಮುಂದೆ ಗಜಸೈನ್ಯವು ಅಶಕ್ತವಾಯಿತು. ಹೇಮುವನ್ನು ಕಾಪಾಡಲು ಪಟ್ಟಪ್ರಯತ್ನಗಳೆಲ್ಲ ವ್ಯರ್ಥವಾಗಿ, ಮೊಗಲರು ಅವನ ಶವವು ಸಿಕ್ಕಿ ಅದನ್ನು ಅಕ್ಬರ್ ಆಸ್ಥನಕ್ಕೆ ಎಳೆದೊಯ್ಯುತ್ತಾರೆ.

ವೈರಿ ಪಡೆ ಪಲಾಯನದ ನಂತರ “ ಅಲ್ಲಾ-ಹು-ಅಕ್ಬರ್” ಘೋಷಣೆಗಳ ತೆರೆಮರೆಯಲ್ಲಿ “ ಜೈ ಭಜರಂಗ ಬಲಿ”
ಘೋಷಣೆಗಳೂ ಕೇಳಿಬರುತ್ತವೆ.

“ನೋಡಲ್ಲಿ ಮತ-ಧರ್ಮದ ಹೆಸರಲ್ಲಿ ಕಚ್ಚಾಡುವ ಜನರು ಇಂದು ಒಡಗೂಡಿ ಘೋಷಣೆಗಳನ್ನು ಕೂಗುತ್ತಿದ್ದಾರೆ. ಎಂತಹ ವಿಚಿತ್ರ ?” ಎಂದು ದಾರಿಹೋಕನು ನುಡಿದನು.

“ ಮತವೆಂದರೇನು ? ಧರ್ಮ ವೆಂದರೇನು ?” ಎಂದು ಮರವು ಪ್ರಶ್ನಿಸಿತು.

“ಈ ಪ್ರಶ್ನೆಗೆ ನನ್ನ ಬಳಿ ಉತ್ತರವಿಲ್ಲ, ಜೊತೆಗೆ ಸಮಯವೂ ಇಲ್ಲ. ಕತ್ತಲಾಗುತ್ತಿದೆ. ಆದರೆ ಹೋಗುವ ಮುನ್ನ ಒಂದು ಮಾತು, ಮನುಷ್ಯರೆಲ್ಲಾ ಹೊಡೆದಾಡುತ್ತಾರೆ ನಿಜ, ಇನ್ನೂ ನಿನ್ನ ಜೀವಿತದಲ್ಲಿ ಇದೇ ಭೂಮಿಯಲ್ಲಿ ಸಾಕಷ್ಟು ಹೊಡೆದಾಟವನ್ನು ನೋಡಬಹುದು, ಅದಕ್ಕೆ ದುರಾಸೆ ಕಾರಣವಾಗಿರಬಹುದು , ಒಮ್ಮೊಮ್ಮೆ ಶಾಂತಿ ನೆಲೆಸಲು ಹೊಡೆದಾಡಬೇಕಾಗುವುದು. ಆದರೆ ಹೊಡೆದಾಟ ಮನುಷ್ಯನ ಮನೋಧರ್ಮವಲ್ಲ “. ಎಂದು ಹೇಳಿ ಕೊಂಬೆಯಿಂದ ಜಾಗರೂಕನಾಗಿ ಇಳಿದು ನಡೆದುಹೋದನು.

ಮತ್ತೊಂದು ಯುದ್ಧಕ್ಕೆ ಕಾಯುತ್ತಾ ಮರವು ಅಲ್ಲಿ ಉಳಿಯಿತು. ಪಾಣಿಪಟ್ ರಣರಂಗವನ್ನು ಒಂಟಿತನ ಮತ್ತು ರಣಹದ್ದುಗಳು ಮತ್ತೆ ಆವರಿಸಿದವು.

Thursday, February 16, 2006

ಪರಿವರ್ತನೆ

ಪರಿವರ್ತನೆ
ಭೈರಪ್ಪನವರ ಕೆಲವು ಕೃತಿಗಳ ಮುನ್ನುಡಿಯಲ್ಲಿ ಈ ವಿಚಾರ ಓದಿದ ನೆನಪು.ಯಾವುದೋ ಒಂದು ವಿಚಾರ ಅವರ ಮನಸ್ಸಿನಲ್ಲಿ ಉಂಟಾಗಿ ,ಬಹುಕಾಲ ಚರ್ಚೆ ,ವಿಶ್ಲೇಷಣೆಗಳಾಗಿ,ಕೊನೆಗೆ ಕಥೆಯಾಗಿ ಮೂಡಿಬಂದಿರುವ ಬಗ್ಗೆ ತಿಳಿಸಿದ್ದಾರೆ.ಹೀಗೆ ಮನಸ್ಸಿನ ವಿಚಾರವನ್ನು ಹೊರಗೆಡವಲು ಕಥೆಗಳನ್ನು ಬಳಸುವ ಲೇಖಕರ ಪುಸ್ತಕಗಳನ್ನು ಹೆಚ್ಚಾಗಿ ಓದಿರುವುದರಿಂದಲೇ ಇರಬೇಕು , ಅವರ ಕಥೆಗಳು ನನಗೆ ತುಂಬಾ ಕುತೂಹಲಕಾರಿಯಾಗಿ ತೋರುತ್ತವೆ. ಬಹುಶಃ ಒಬ್ಬ ಬರಹಗಾರ/ಬರಹಗಾರ್ತಿಗೆ ಮಾತ್ರ ಅಂತಹ ಭಾವನೆಯನ್ನು ಅನುಭವಿಸಲು ಸಾಧ್ಯ. ನನ್ನಂತಹ ಹವ್ಯಾಸಿ ಓದುಗನಿಗೆ ಇದು ಅರ್ಥವಾಗುವುದಿಲ್ಲವೇನೋ.ಅಂತೆಯೇ ಕೆಲವರಿಗೆ ಬದುಕಿನ ದಿನನಿತ್ಯದ ಘಟನೆ ಎಷ್ಟೇ ಸಣ್ಣದಿರಲಿ ,ಮನಸ್ಸಿನಲ್ಲೇ ನಿಂತುಬಿಟ್ಟು, ಅದನ್ನು ಯಾರಿಗಾದರೂ ವಿವರಿಸಿದ ನಂತರವೇ ಆ ವಿಚಾರ ಚಿಂತನಾಲಹರಿಯಲ್ಲಿ ಹಿಂದೆ ಸರಿಯತ್ತದೆ.
ಇಂದು ಬೆಳಿಗ್ಗೆ ಒಂದು ಬಸ್ಸಿನ ಸಂಭಾಷಣೆಯು ನನ್ನಲ್ಲಿ ವಿಚಿತ್ರವಾದ ಕುತೂಹಲ ಉಂಟುಮಾಡಿದೆ.
ಆ ಸಂಭಷಣೆಯೇ ಇಲ್ಲಿನ ಕಥ(ನ)ವಸ್ತುವಾಗಿದೆ.
ವಾರದ ಐದು ದಿನಗಳನಂತೆ ಈ ದಿನವೂ ಬೆಳಿಗ್ಗೆ ಆಫೀಸಿಗೆ ತಯಾರಾಗಿ ಬಸ್ ನಿಲ್ದಾಣಕ್ಕೆ ಬಂದು ಕಾದು ನಿಂತೆ.ಸ್ವಲ್ಪ ಹೊತ್ತಿನ ಬಳಿಕ ಬಂದ ಬಸ್ ಏರಿದಾಗ ಅದೃಷ್ಟಕ್ಕೆ ಸೀಟು ಕೂಡ ಸಿಕ್ಕಿತು.ನಿತ್ಯದ ಅಭ್ಯಾಸದಂತೆ ಮೊಬೈಲ್ ಫೋನಿನಲ್ಲಿದ್ದ , ಆಟಗಳನ್ನಡುತ್ತಿರುವಾಗ ಪಕ್ಕದ ಸೀಟಿನಿಂದ ಇಬ್ಬರು ತರುಣರ ಸಂಭಾಷಣೆ ಕೇಳಿಬಂತು.ಒಬ್ಬ ಸ್ವಲ್ಪ ಕಪ್ಪಗಿದ್ದು ಬೈತಲೆ ಸೀಳು ಮಧ್ಯಕ್ಕೆ ಬರುವಂತೆ ಕೂದಲನ್ನು ಬಾಚಿದ್ದ.ಮತ್ತೊಬ್ಬ ಬೆಳ್ಳಗಿದ್ದು,ಕೂದಲನ್ನು ಕ್ರಾಪು ತೆಗೆಸಿದ್ದ.ಇಬ್ಬರೂ ಟೀಶರ್ಟ್, ಜೀನ್ಸ್ ಧರಿಸಿದ್ದರು.ಅವರಿಬ್ಬರೂ ಸಹಪಾಠಿಗಳಿರಬಹುದು.ಇಬ್ಬರೂ ಪರಸ್ಪರ ಆಂಗ್ಲ ಭಾಷೆಯಲ್ಲಿ ಮಾತನಾಡಿಕೊಳ್ಳುತಿದ್ದರು.ಅವರ ಸಂಭಾಷಣೆಯಲ್ಲಿನ ಭಾವವನ್ನು ,ಧಾಟಿಯನ್ನು ಕಾಪಡುವ ಸಲುವಾಗಿ ಅವರ ಮಾತುಗಳನ್ನು ಅದೇ ಭಾಷೆಯಲ್ಲೇ ಬರೆದಿದ್ದೇನೆ.ಇದು ನನಗೆ ಅನಿವಾರ್ಯವೆನ್ನಿಸಿತು.
"you know, that Praveen asked out Priya last week da ?? " ಎಂದು ಬಿಸಿ ಸುದ್ದಿ ಬಿತ್ತರಿಸುವ ಖಾಸಗಿ ವಾರ್ತಾ ಚಾನೆಲ್ ಗಳ ಸುದ್ದಿಗಾರರು ಮಾತನಾಡುವ ಉತ್ಸಾಹ ಉಕ್ಕುತ್ತಿರುವ ಧ್ವನಿಯಲ್ಲಿ ಕ್ರಾಪಿನ ಹುಡುಗ ಹೇಳಿದ.
ಹುಬ್ಬೇರಿಸುತ್ತಾ ಅ ಮಧ್ಯ-ತಲೆಸೀಳಿನ ಹುಡುಗ "When this did happen da ?" ಎಂದು ಕೇಳಿದ.
ಆಂಗ್ಲ ಭಾಷೆಯಲ್ಲಿ ಮಾತನಾಡುವಾಗ ವಾಕ್ಯದ ಕೊನೆಯಲ್ಲಿ "da" ಪೋಣಿಸುವುದು ಎಂದಿನಿಂದ ಪ್ರಾರಂಭವಾಯ್ತೋ ಗೊತ್ತಿಲ್ಲ,ಚೆನ್ನೈನ ನನ್ನ ಮಿತ್ರರ ಮಾತುಗಳಲ್ಲಿ "da" ಪ್ರಯೋಗವನ್ನು ಮೊದಲು ಬಾರಿ ಕೇಳಿದ್ದೆ.ಈಗ ಆ ಪ್ರಯೋಗತುಂಬಾ ಪ್ರಖ್ಯಾತವಾಗಿ ಹೇಗೋ ಒಂದು ತಮಿಳಿನ ಪದ ದಕ್ಷಿಣ ಭಾರತದ ಆಡು ಮಾತಿನ ಇಂಗ್ಲಿಷ್ ನಲ್ಲಿ ಸೇರಿಹೋಗಿದೆ.ಆದರೆ ಪ್ರತಿ ಸಾರಿಯೂ ಆ 'ಡಾ' ನನ್ನು ಬಳಸಿದಾಗ ವಿಚಿತ್ರವೆನ್ನಿಸುತ್ತದೆ,ಆಭಸವಾಗಿ ತೋರುತ್ತದೆ.ಇವರಿಬ್ಬರ ಮಾತುಗಳಲ್ಲಿ ಪುಂಖಾನುಪುಂಖವಾಗಿ "ಡಾ" ಪ್ರಯೋಗಗಳು ಕೇಳಿಬರುತಿದ್ದವು.ಅವೆಲ್ಲವನ್ನೂ ನೆನಪಿಸಿಕೊಂಡು ಬರೆಯುವ ಶಕ್ತಿ ನನಗಿಲ್ಲ.
"Last Friday da" ಎಂದು ಉತ್ತರಿಸಿದ.
"Bastard !! I was thinking of asking her out during holidays after the exams" ಎಂದು ಕೋಪದಿಂದ ಗೊಣಗಿದರೂ ಮತ್ತೆ ಕಳ್ಳ ನಗೆ ಬೀರುತ್ತ "you know,of all the gals in our class ,Shraavani,Priya... are the cool chicks da" ಎಂದು ಉದ್ಗಾರದೊಡನೆ ಆ ಬೈತಲೆ-ಸೀಳಿನ ಹುಡುಗ ಮಾತು ನಿಲ್ಲಿಸಿದ.
ಇನ್ನಿಬ್ಬರು ಕೂಲ್ ಚಿಕ್ಸ್ ಹೆಸರುಗಳು ಅ ವಾಕ್ಯದಲ್ಲಿತ್ತು , ಆದರೆ ಈಗ ನೆನಪಿಗೆ ಬರುತ್ತಿಲ್ಲ.
ಕೀಟಲೆ ದನಿಯಲ್ಲಿ "ಓ............." ಎಂದು ಧೀರ್ಘವಾದ 'ಓ' ಹೇಳಿ " good thing you didn't ask her out , she made a big fuss about it .But have you asked Shraavani out anytime ?" ಎಂದು ಕಿರುನಗೆಯೊಂದಿಗೆ ಕ್ರಾಪಿನ ಹುಡುಗ ಪ್ರಶ್ನಿಸಿದ.
"she doesn't hang out with our gang.....,so I haven't asked her,but looks like she wants to go out with me" ಎಂದು ಅವನ ಮಿತ್ರ ಉತ್ತರಿಸಿದ.
ಈ ವಿಷಯ ನಿನಗೆ ಹೇಗೆ ತಿಳಿಯಿತೆನ್ದು ಕೇಳಲು ಮುಖ ಅರಳಿಸಿಕೊಂಡ.ಅಷ್ಟರಲ್ಲೇ ಅದನ್ನರಿತ ಅವನ ಮಿತ್ರ "she had sent Sindhu to indirectly enquire about me ,you know.............sindhu is in our gang.But, instead of saying good things about her, sindhu started making fun of her " ಎಂದು ನಗತೊಡಗಿದ.

"what did she say ?? " ಎಂದು ಮತ್ತೆ ಪ್ರಶ್ನಿಸದ.

ಮಾತು ಮುಂದುವರೆದಂತೆ ಆ ಕ್ರಾಪಿನ ಹುಡುಗ ಕ್ವಿಜ್ ಮಾಸ್ಟರ್ ಆಗತೊಡಗಿದ್ದ.ಆದರೆ ತನ್ನ ಮಿತ್ರನ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಬೇಕಾದುದು ತನ್ನ ಕರ್ತವ್ಯವೆಂಬಂತೆ ಮತ್ತೊಬ್ಬ ಅವಕ್ಕೆಲ್ಲ ಉತ್ತರಿಸುತ್ತಿದ್ದ.
"sindhu joked about possessiveness of shraavani saying that she was very kind, caring and other things,but I could make out what she was saying" ಎಂದ.

ಇಬ್ಬರು ಸ್ವಲ್ಪಹೊತ್ತು ನಕ್ಕರು.ಇದ್ದಕ್ಕಿದ್ದಂತೆ ಡೇಟಿಂಗ್ ನಿಂದ ನಾಳಿನ ವರಮಹಾಲಕ್ಷ್ಮೀ ಹಬ್ಬದ ರಜೆಯ ಪ್ರಯುಕ್ತ ಇಬ್ಬರೂ ಹಮ್ಮಿಕೊಂಡಿದ್ದ ಕಾರ್ಯಕ್ರಮದ ವೇಳಾಪಟ್ಟಿಯ ಪರಸ್ಪರ ವಿನಿಮಯ ಮಾಡಿಕೊಳ್ಳುತ್ತ
" Tomorrow is a holiday, some vara..... varlakshmi it seems ? whatever....?
Most colleges are closed tomorrow for varlakshmi so what are you doing da ?" ಎಂದ.
ಆ ಕ್ರಾಪಿನ ಹುಡುಗ "I need to prepare for maths test tomorrow da" ಎಂದು ಹೇಳುವಾಗ ಅವನ ಮಾತಿನಲ್ಲಿ ಹಿಂದಿನ ಸುದ್ದಿಗಾರನ ಉತ್ಸಾಹವೆಲ್ಲಾ ಇಳಿದುಹೋಯಿತು.

ಅದನ್ನು ಲೆಕ್ಕಿಸದೆ ಅವನ ಮಿತ್ರ "Ok, I am comfortable, with differentiation ..........but worried about complex numbers" ಎಂದು ಚಿಂತೆಯಿಲ್ಲದ ಧ್ವನಿಯಲ್ಲಿ ಹೇಳಿದ.
ಸ್ವಲ್ಪಹೊತ್ತು ಇಬ್ಬರೂ ಮೌನವಾದರು.ಕಿಟಕಿಯ ಹೊರಗೊಂದು ಹೋಂಡ ಸಿಟಿ ಕಾರನ್ನು ಕಂಡಾಗ ಅವರ ಮಾತುಗಳು ಕಾರುಗಳ ಕಡೆಗೆ ತಿರುಗಿತು.ಆರಾಮದಯಕ,ಬೆಲೆಬಾಳುವ ಕಾರುಗಳ ಪಟ್ಟಿಯನ್ನೇ ಮಾಡಿಬಿಟ್ಟರು. ಜಯನಗರ ನಾಲ್ಕನೇ ಬ್ಲಾಕ್ ಬಸ್ ನಿಲ್ದಾಣ ಕಂಡೊಡನೆ ,ಅವರಿಬ್ಬರ ಮಾತುಗಳ ಆಲಿಕೆಯನ್ನು ಬಿಟ್ಟು ಕೆಳಗಿಳಿದು ಆಫೀಸಿನ ಕಡೆಗೆ ನಡೆದೆ.ದಾರಿಯುದ್ದಕ್ಕೂ ಒಂದು ವಿಚಿತ್ರ ಭಾವನೆ ಮನಸ್ಸಿನಲ್ಲಿ ಹಾಗು ಮುಖದಲ್ಲಿ ನಗುವನ್ನೂ,ಕುತೂಹಲವನ್ನು ಏಕಕಾಲದಲ್ಲಿ ತರಿಸಿತ್ತು.
"ಸಮಾಜದ/ನಾಗರೀಕತೆಯ ಮೌಲ್ಯಗಳು ,ತತ್ವಗಳು ಎಂದಿಗೂ ಶಾಶ್ವತಗಳಲ್ಲ,ಚಿರಸ್ಥಾಯಿಯೂ ಅಲ್ಲ,ಪ್ರತಿಯೊಂದು ತಲೆಮಾರು ಕೂಡ ತನ್ನದೇ ಆದ ಮೌಲ್ಯಗಳನ್ನು ,ತತ್ವಗಳನ್ನು ಸೃಷ್ಟಿಸಿಕೊಂಡು ಸಮಾಜ/ನಾಗರೀಕತೆಯಲ್ಲಿ ಪರಿವರ್ತನೆಗೆ ಕಾರಣವಾಗುತ್ತದೆ" ಎಂದು ಯಾರೋ ಒಬ್ಬ ಚಿಂತಕನ ಮಾತನ್ನು ನನ್ನ ಮಿತ್ರ ಪೃಥ್ವಿರಾಜ್ ನಿಂದ ಕೇಳಿದ್ದೆ.

ಇಪ್ಪತ್ತನೇ ಶತಮಾನದ ಮೌಲ್ಯಗಳ,ತತ್ವಗಳ ಅಸ್ತಂಗತವನ್ನು ,ಜೊತೆಗೆ ಇಪ್ಪತ್ತೊಂದನೇ ಶತಮಾನದ ಹೊಸ ಮೌಲ್ಯಗಳ ಉದಯವನ್ನು ಕಾಣುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಈ ಸಂಭಾಷಣೆ ಉದಯಿಸುತ್ತಿರುವ ಹೊಸ ಸಮಾಜದ ಬಗ್ಗೆ ಬೆಳಕನ್ನು ಚೆಲ್ಲುತ್ತದೆ.

ಕಾಲೇಜಿನ ದಿನಗಳಲ್ಲಿ e√x ನ ಡಿರೈವೇಟಿವ್ ನನ್ನು ಫರ್ಸ್ಟ್ ಪ್ರಿನ್ಸಿಪಲ್ಸ್ ನಿಂದ ಬಿಡಿಸುವ ಬಗ್ಗೆ ಹೆಚ್ಚು ಗಮನಕೊಟ್ಟ ನನಗೆ ಈ ಘಟನೆ ವಿಚಿತ್ರವೇ ಸರಿ.

ಕವಿಸಮಯ

"ಇಂದು ಜನರು ಸಂಗೀತವನ್ನು ನೋಡುತ್ತಾರೆ , ಕೇಳೋದಿಲ್ಲ" ಹೀಗೆ ನೊಂದು ನುಡಿದವರು ಸಂಗೀತ ನಿರ್ದೇಶಕ ಮನ್ನಾ ಡೆ. ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ಪ್ರಕಟವಾದ ಸಂದರ್ಶನವೊಂದರಲ್ಲಿ ಸಂಗೀತದಲ್ಲಾಗುತ್ತಿರುವ ಇತ್ತಿಚಿನ ಬೆಳವಣಿಗೆಗಳ ಬಗ್ಗೆ ಮಾತನಾಡುತ್ತ ಮೇಲಿನ ಮಾತನ್ನು ಹೇಳಿದ್ದರು.ಪ್ರಾಚೀನ ಕಲೆ,ಪರಂಪರೆಗಳ ಸುವರ್ಣಯುಗವನ್ನು ವರ್ಣಿಸುತ್ತಾ,ಇಂದಿನ ಅವುಗಳ ಅವಸಾನದ ಬಗ್ಗೆ ಗೊಣಗಾಡುವ ಇನ್ನೊಬ್ಬ 'ಮುತ್ಸದ್ದಿ'ಗಳೆನ್ದುಕೊಂಡು ದಿನಪತ್ರಿಕೆಯ ಪುಟಗಳನ್ನು ತಿರುವುತ್ತಾ ಬೇರೆ ಸುದ್ದಿಗಳನ್ನು ಗಮನಿಸುತ್ತ ಹೋದೆ. ರೇಡಿಯೋದಲ್ಲಿ ಕೇಳಿದ ಕಿಶೋರಿ ಅಮೋಂನ್ಕರ್ ಅವರ ಗಾಯನವು ಮೇಲಿನ ಮಾತನ್ನು ಎರಡು ವರ್ಷದ ನಂತರ ಮತ್ತೆ ನೆನಪಿಸಿತು. ಅಂದು ಅವರು ರಾಗ 'ಮಿಯನ್ ಕೆ ಮಲ್ಹರ್" ವನ್ನು ಹಾಡಿದ್ದು , ಶಾಸ್ತ್ರೀಯ ಸಂಗೀತದ ಒಂದು ಆಯಾಮವನ್ನು ಪರಿಚಯಮಾಡಿಕೊಟ್ಟಿತು. ವಿಶೇಷವೆಂದರೆ ಈ ರಾಗಕ್ಕೆ ಸಮಾನಾಂತರವಾಗಿ "Allegro" ಎಂಬ ರಾಗವು ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದಲ್ಲೂ ಇದೆ.
ಸಂಗೀತದ ಬಗ್ಗೆ ನಾನಗೆ ಹೆಚ್ಚೇನೂ ತಿಳಿದಿಲ್ಲ, ಕೆಲವರು ಪ್ರಖ್ಯಾತ ಗಾಯಕರ, ವಾದಕರ ಧ್ವನಿಮುದ್ರಿಕೆಗಳನ್ನು
ಕೇಳಿದ್ದೇನೆ.ರಾಗದ ಪರಿಚಯವಾಗಲಿ, ಸ್ವರಜ್ಞಾನವಾಗಲಿ ಇಲ್ಲ.ಆದರೂ ಅಮೋನ್ಕರ್ ಅವರ ಹಾಡುಗಾರಿಕೆ ನೆನಪಿನಲ್ಲಿ ಉಳಿಯುವ ಆಲಿಕೆಯಾಯಿತು.
ಗಾಯನ ಪ್ರಾರಂಭವಾಗುವ ಮುನ್ನ ರಾಗದ ಪರಿಚಯವನ್ನು ನಿರೂಪಕಿಯು ಮಾಡಿಕೊಟ್ಟರು. ಅವರು ಹೇಳಿದ ರಾಗದಲ್ಲಿನ ಗಾಂಧಾರ, ಮಧ್ಯಮಗಳ ಪ್ರಯೋಗ ಏನೇನೂ ಅರ್ಥವಾಗಲ್ಲಿಲ್ಲ.ಆದರೆ ಆಲಾಪದಲ್ಲಿ ಚಲಿಸುವ ಮೋಡಗಳ ಕಲ್ಪನೆ ಇದೆಯೆಂದೂ, ತಾನದಲ್ಲಿ ಗುಡುಗು-ಮಿಂಚುಗಳ ಕಲ್ಪನೆಯಿದೆಯೆಂದು ಹೇಳಿದರು.ಇಂತಹ ಕಲ್ಪನೆ ಹಾಡಿನಲ್ಲಿ ಹೇಗೆ ಕಲ್ಪಿಸಿಯಾರು ? ಎಂಬ ಕುತೂಹಲ ಉಂಟಾಗಿ, ಮುಂದಿನ ಎಫ್ ಎಂ ಸ್ಟೇಷನ್ನಿಗೆ ಬದಲಾಯಿಸದೆ ಹಾಡನ್ನು ಕೇಳಲು ಆರಂಭಿಸಿದೆ.

ಮಂದಗತಿಯಲ್ಲಿದ್ದ ಆಲಾಪವು ,ಆಲಿಕೆಯನ್ನು ಸ್ವಲ್ಪ ಕಷ್ಟಕರವಾಗೇ ಮಾಡಿತ್ತು. ಆದರೂ ಕೇಳುತ್ತ ಮುಂದುವರಿದಾಗ, ಮಂದಗತಿಯಲ್ಲಿ ಚಲಿಸುವ ಮೇಘಗಳ ಕಲ್ಪನೆ ಮನಸ್ಸಿಗೆ ಬರತೊಡಗಿತು. ಭೂಮಿಯಿಂದ ಏತ್ತರದಲ್ಲಿ ಮೋಡಗಳ ಚಲನೆಯ ಶಾಂತತೆಯನ್ನು ,ಆಲಾಪದ ಶಾಂತತೆಯಲ್ಲಿ ಹಿಡಿದಿಟ್ಟಿದ್ದರು. ಜೊತೆಗೆ ಹಾಡಿನ ನುಡಿಯು, ತನ್ನಿಂದ ದೂರವಗಿರುವ ಪ್ರಿಯಕರನ ನೆನಪಿಸಿಕೊಳ್ಳುತ್ತಿರುವ ಹೆಣ್ಣೊಬ್ಬಳ ಚಿತ್ರವನ್ನು ಮೂಡಿಸತೊಡಗಿತು. ಮನೆಯ ಎತ್ತರದ ಅಂತಸ್ತಿನ ಕಿಟಕಿಯಿಂದ ಮೋಡಗಳನ್ನು ಕಂಡೊಡನೆ ಚಲಿಸುವ ಮೋಡದಂತೆ ದೂರವಾಗುತ್ತಿರುವ ಪ್ರಿಯಕರನ ನೆನಪು ಆಲಾಪನೆಯ ನಿಧಾನ ಗತಿಯಿಂದ ,ಏಕತಾನತೆಯಿಂದ, ಚಿತ್ರಿತವಾಗುತ್ತಿತ್ತು.

ಬಹಳ ಹೊತ್ತು ಸಾಗಿದ ಆಲಾಪನೆಯಿಯಿಂದ ಬೇಸರ ಉಂಟುಮಾಡುವಂತೆ ತಡೆದದ್ದು , ಮೇಲೆ ಕಲ್ಪಿಸಿದ ಚಿತ್ರವೊಂದೇ.ಆಂತೂ ಆಗ ರೇಡಿಯೋ ಟ್ಯೂನ್ ಮಾಡದೇ ಸುಮ್ಮನಿದ್ದೆ.ಆಲಾಪನೆಯ ಗತಿಯೇರತೊಡಗಿತು, ಆದರೆ ಈ ಗತಿ ಬದಲಾವಣೆ, ಪಾದರಸವೇರಿದನಂತೆ ಕ್ಷಣಮಾತ್ರದಲ್ಲಾಗದೇ,ಗುರುತ್ವಾಕರ್ಷಣೆಯ ಪ್ರಭಾವದಿಂದ ಹೊರಬಂದು ಮೇಲಕ್ಕೆ ಹರಿಯಲು ಪ್ರಯತ್ನಿಸುತ್ತಿರುವ ಆಕಾಶಗಂಗೆಯಂತೆ ಅಮೋನ್ಕರ್ ರವರ ಧ್ವನಿ ಏರಿಳಿತಗಳು, ಪ್ರತಿ ಏರಿಕೆಯಲ್ಲೂ ಹಿಂದಿನ ಮಟ್ಟವನ್ನು ಹಿಂದೆಹಾಕಿ ಇಳಿಕೆಯಲ್ಲಿ ಮತ್ತೆ ಅದೇ ಕೆಳಮಟ್ಟವನ್ನು ತಲುಪುತ್ತಿತ್ತು.ಕಿಟಕಿಯಿಂದ ಹೊರನೋಡುತ್ತಿರುವ ಆ ಹೆಣ್ಣಿನ ಮನಸ್ಸಿನಲ್ಲಿ ವಿವಿಧ ಭಾವನೆಗಳ ಏರಿಳಿಕೆಯಾಗಿ, ವಿರಹವು ಮನಸ್ಸನ್ನು ದಾಟಿ ಮೇಲೇಳಲು ಪ್ರಯತ್ನಿಸುವಂತಿತ್ತು.
ತಾನದ ಆರೋಹಣ, ಅವರೋಹಣಗಳು ಆರಂಭವಾಯಿತು,ಆರೋಹಣವು ಮೆಟ್ಟಿಲು-ಮೆಟ್ಟಿಲಾಗಿ ಮೇಲೇರಿ,ಎತ್ತರದಲ್ಲಿ ಮಿಂಚಿನ ಬೆಳಕಂತೆ ಕ್ಷಣಮಾತ್ರ ನಿಂತು ಮರೆಯಾಗಿ, ಅವರೋಹಣವು ಗುಡುಗಿನಂತೆ ಗಂಭೀರ ಧ್ವನಿಯಲ್ಲಿ ಕೆಳಗಿಳಿಯುತ್ತಿತ್ತು.ಆಗಸದ ಮಿಂಚು-ಗುಡುಗುಗಳನ್ನು ಕಂಡ ಕಣ್ಣುಗಳು ಮನಸ್ಸಿನಲ್ಲಿ ವಿರಹದಿಂದ ಉಕ್ಕುವ ದು:ಖ-ಕೋಪಗಳ
ಮಿಂಚು-ಗುಡುಗನ್ನು ಅನುಭವಿಸತೊಡಗಿತು.ಪ್ರತಿ ಆರೋಹಣದಲ್ಲಿನ ಮಿಂಚಿನ ಬೆಳಕು ಹೆಚ್ಚು ಹೊತ್ತು ನಿಲ್ಲತೊಡಗಿತು, ಅಷ್ಟು ಮೇಲೇರಿದ್ದರಿಂದ ಅವರೋಹಣದಲ್ಲಿಳಿಯುವಾಗ ಗುಡುಗಿನ ಧ್ವನಿಯ ಪ್ರಭಾವ ಪ್ರಖರವಾಗಿತ್ತು.ಪ್ರತಿ ಆರೋಹಣ-ಆವರೋಹಣ ಚಕ್ರದ ನಡುವೆ ಗುಡುಗಿನ ನಂತರದ ಶಾಂತಿ ಇರುತ್ತಿತ್ತು.

ಮಿಂಚು-ಗುಡುಗುಗಳನ್ನು ಆಹ್ವಾನಿಸಿದ್ದ ತಾನವು ಈಗ "ಉಮಡ್, ಗುಮಡ್, ಗರಜ್ ಗರತ್ " ಎಂದು ಮಳೆಯನ್ನು ಆಹ್ವಾನಿಸತೊಡಗಿತು,ಜೊತೆಗೆ ಅವಳ ಕಣ್ಣುಗಳಲ್ಲಿ ಕಣ್ಣೀರಿನ ಮಳೆಯನ್ನು ತರಿಸಿತು. ಮಳೆ ಬಂದು ,ಚಲಿಸುವ ಮೋಡಗಳೆಲ್ಲ ಕರಗಿಹೋದವು.ಅವಳ ಮುಖದಲ್ಲಿ ಕಣ್ಣೀರು ಬಂದು ವಿರಹದ ಮೋಡವನ್ನು ಕರಗಿಸಿ ಸಮಾಧಾನ ತರಿಸಿತು.
ಈ ಸಮಾಧನದ ಭಾವದೊಂದಿಗೆ ಗಾಯನವು ಮುಕ್ತಾಯವಾಯಿತು.

ಒಂದು ಘಂಟೆ ನನ್ನನ್ನು ಕೇಳುವಂತೆ ಮಾಡಿದ್ದ ಈ ಸಂಗೀತದ ಅನುಭವವನ್ನು ಮರೆಯುವ ಮುನ್ನ ಬರೆದಿಡಬೇಕೆನ್ನಿಸಿತು.ಬಹುಶಃ ಮತ್ತೊಮ್ಮೆ ಇದೆ ಹಾಡನ್ನು ಕೇಳಿದರೂ ಈ ನೆನಪು ಮರುಕಳಿಸದಿದ್ದರೆ ?
ರೀಮಿಕ್ಸ್ ವಿಡಿಯೋಗಳಲ್ಲಿ ಕಟ್ಟುಮಸ್ತಾದ ಆಳೊಬ್ಬನ ಸುತ್ತ ಲಘುವಸ್ತ್ರಖಚಿತವಾಗಿ ನರ್ತಿಸುವ ಸುಂದರಿಯರು ಹಾಡುವ ಹಾಡುಗಳು, ಮಲ್ಹರ್ ನಂತೆ ಮನಸ್ಸಿನಲ್ಲಿ ಚಿತ್ರಗಳನ್ನು ಕೆತ್ತುತ್ತವೋ? ತಿಳಿಯದು, ಪರದೆಯ ಮೇಲಂತೂ ಕೆತ್ತುತ್ತವೆ.
ಮನಸ್ಸಿನ ಚಿತ್ರಗಳು ಪರದೆಯ ಮೇಲೆ ಕಾಣತೊಡಗಿದಾಗ ಮನ್ನಾ ಡೆ ಅವರೂ ಸಂಗೀತವನ್ನು ನೋಡಲು ಕಲಿಯುತ್ತಾರೋ ಏನೋ ?