ಕವಿಸಮಯ

ಕಾಳನ್ನೆಲ್ಲವ ಪಡೆದು ಜಳ್ಳನ್ನೆಲ್ಲವ ತೂರಿಬಿಡಿ, ಎಲ್ಲವೂ ಜಳ್ಳಾದಲ್ಲಿ ಬರೆದವನ ಪೊಳ್ಳೆನ್ನದಿರಿ

Tuesday, May 30, 2006

ಪ್ರವಾಸ

(ಈ ಪ್ರವಾಸಕಥನ ಬರೆದು ಸುಮಾರು ಒಂದು ವರ್ಷವೇ ಆಗಿದೆ. ಆದರೂ ಕೀಲಿಮಣೆಯಲ್ಲಿ ಕುಟ್ಟಿಟ್ಟಿಲ್ಲವಾದ್ದರಿಂದ ಕಳೆದು ಹೋಗುವುದರಲ್ಲಿತ್ತು. ಈಗ ಸ್ವಲ್ಪ ನಿರಾಳ)
“ಶ್ರೀಮತ್ವೆಕಟನಾಥಾರ್ಯ ಕವಿತಾಲಯಃ ಕೇಸರಿ” ಎಂದು ಧ್ಯಾನ ಶ್ಲೋಕವನ್ನು ಹೇಳಿ , ಉಪಾಕರ್ಮದ ಮಾರನೇ ದಿನ ಗಾಯತ್ರಿ ಜಪವನ್ನು ಮಾಡಲು ಕುಳಿತಾಗ, ಅಷ್ಟೋತ್ತರ ಸಹಸ್ರ ಬಾರಿ ಮಂತ್ರವನ್ನು ಜಪಿಸಬೇಕಿದ್ದರೂ, ಸಮಯದ ಅಭಾವದಿಂದ, ಜೊತೆಗೆ ಸೋಮಾರಿತನದಿಂದ ಅಷ್ಟೋತ್ತರ ಶತಕ್ಕೆ ಇಳಿಸಿದೆ.ಸಂಕಲ್ಪದಲ್ಲಿ ಆ ದಿನ ನಾನಿದ್ದ ಸ್ಥಳ ಹಾಗು ಸಮಯದ ಸಂಪೂರ್ಣ ಪರಿಚಯಕೊಟ್ಟು (ಅಂದ್ರೆ ಶ್ವೇತವರಾಹಕಲ್ಪದ, ಕಲಿಯುಗದ,ಪಾರ್ಥಿವ ಸಂವತ್ಸರದ, ದಕ್ಷಿಣಾಯನದ, ವರ್ಷಋತುವಿನ, ಸಿಂಹಮಾಸದ, ಪೌರ್ಣಮಿಯಂದು, ಭರತಖಂಡದ ಬೆಂಗಳೂರಿನಲ್ಲಿ…..) ಜಪ ಮಾಡಲು ಪ್ರಾರಂಭಿಸಿದೆ.
(ಆ ಸಂಕಲ್ಪ ಹೇಳುವುದೇ ಪ್ರಯಾಸದ ಕೆಲಸವಾದರೂ ಭಾರತೀಯರ ಗಣಿತ ಪ್ರೌಢಿಮೆಗೆ ಈ ಕಾಲ ವಿಂಗಡಣೆ ಒಂದು ಉದಾಹರಣೆ ಎನ್ನಿಸಿಬಿಟ್ಟಿತು.)
ಅಲ್ಲಿಯವರೆಗೆ ಎಲ್ಲ ಮಂತ್ರಗಳನ್ನು ಕಾಟಾಚಾರಕ್ಕೆಂಬಂತೆ ಉಚ್ಚರಿಸುತ್ತಿದ್ದವನು “ಧಿಯೋ ಯೋನಃ ಪ್ರಚೋದಯಾತ್” ಕೂಡಿರುವ ಗಾಯತ್ರಿ ಮಂತ್ರ ಉಚ್ಚರಿಸುವಾಗ , ಎಲ್ಲೆಲ್ಲೊ ಹರಿದಾಡುತ್ತಿದ್ದ ಮನಸ್ಸು ಒಂದೆಡೆ ಕೇಂದ್ರೀಕೃತವಾದಂತಾಯಿತು.ಜೀವನೋಪಾಯಕ್ಕೆ ಬುದ್ಧಿಯನ್ನು ಅವಲಂಬಿಸಿರುವುದರಿಂದಲೇನೋ, ಆ ಮಂತ್ರದ ಬಗ್ಗೆ ವಿಶೇಷ ಗೌರವವಿರುವುದು. ದೇವಸ್ಥಾನದ ಪೂಜಾರಿಗಳಂತೆ “ನಮಃ” ಮಾತ್ರ ಕೇಳುವಂತೆ ಉಚ್ಛರಿಸದೇ , ಪೂರ್ಣವಾಗಿ ನೂರೆಂಟು ಬಾರಿ ಮಂತ್ರ ಜಪ ಮಾಡುವುದು ಪ್ರಯಾಸವೇ ಆಯಿತು.
ಅಮ್ಮ ಅಂದು ಗೊರವನಹಳ್ಳಿಗೆ ಹೋಗುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಅಲ್ಲಿಗೆ ಮೊದಲ ಬಾರಿ ಹೋಗಿ ಬಂದ ಮಾರನೇ ದಿನವೇ ನನಗೆ ಕೆಲಸ ಸಿಕ್ಕಿದ್ದರಿಂದ ಅಲ್ಲಿನ ಲಕ್ಷ್ಮೀದೇವಿಯ ಮಹಿಮೆಯಲ್ಲಿ ಅಮ್ಮನಲ್ಲಿ ನಂಬಿಕೆ ವಜ್ರವಾಗಿತ್ತು. ಅಮ್ಮನ ಜೊತೆಗೆ ಅವರ ಅಕ್ಕಂದಿರು ಹಾಗು ಮಕ್ಕಳು ಹೊರಟಿದ್ದರು.”ತನಗೆ ದೊರೆತ ಸತ್ಫಲಗಳು ಅವರ ಕುಟುಂಬಗಳಿಗೂ ದೊರೆಯಲಿ “ ಎಂಬುದು ಅಮ್ಮನ ಆಶೆಯಾಗಿತ್ತು.ನಾನೂ ಅರೆಮನಸ್ಸಿನಿಂದ ಅವರೊಂದಿಗೆ ಹೊರಡಲು ನಿರ್ಧರಿಸಿದೆ.
ಮನೆಮುಂದೆ ಬಂದು ನಿಂತ ಟಾಟಾ ಸುಮೋವನ್ನೇರಿ ತುಮಕೂರಿನ ಕಡೆಗೆ ಸಾಗಿದೆವು. ನಾನು ಚಾಲಕನ ಪಕ್ಕದಲ್ಲಿ ಕುಳಿತಿದ್ದರಿಂದ ಗಾಡಿ ಹೊರಟ ಕೂಡಲೇ FM91 ಹಾಕಲೇಬೇಕೆಂಬ ಒತ್ತಾಯಪೂರ್ವ ದನಿಯಲ್ಲಿ ಬೇಡಿಕೆ ಕಾರಿನ ಹಿಂಬದಿಯಲ್ಲಿ ಕುಳಿತಿದ್ದ ಸಿಂಧುವಿನಿಂದ ಬಂತು. ಅದುವರೆಗೂ ಜೋಗಿ ಚಿತ್ರದ ಹಾಡುಗಳನ್ನು ಕೇಳುತ್ತಿದ್ದ ವಾಹನಚಾಲಕ ಸಪ್ಪಗಾಗಿ cassette ತೆಗೆದು, ರೇಡಿಯೊ ಟ್ಯೂನ್ ಮಾಡತೊಡಗಿದ. FM91 ಬದಲು ಯಾವುದೋ ಕಂಪನಾಂಕದಲ್ಲಿ ನಿಲ್ಲಿಸಿ, ಕನ್ನಡ ಚಲನಚಿತ್ರದ ಹಾಡುಗಳು ಚಾಲಕನು ಕೇಳತೊಡಗಿದ. ಬಹಳ ಸಮಯವಾದರೂ FM91ನ ಪಟಪಟನೆ ಮಾತನಾಡುವ ರೇಡಿಯೋ ಜಾಕಿಗಳ (RJ) ಸದ್ದು ಕೇಳದಿದ್ದರಿಂದ ಮತ್ತೆ ಸಿಂಧು ಅಷ್ಟೇ ಒತ್ತಾಯಪೂರ್ವಕವಾಗಿ ತನ್ನ ಹಳೆ ಬೇಡಿಕೆಯನ್ನು ಸಲ್ಲಿಸಿದಳು. ಅಂತೂ ಕೊನೆಗೆ ಆ ಕಂಪನಾಂಕ ಸಿಕ್ಕಿ ಹರಕು ಮುರುಕು ಕನ್ನಡವನ್ನು ಆಂಗ್ಲ ಭಾಷೆಯೊಡನೆ ಬೆರೆಸಿ ಮಾತನಾಡುವ RJಗಳ ಧ್ವನಿ ಕೇಳತೊಡಗಿದಾಗಲೆ ಸಿಂಧುವಿಗೆ ಸಮಾಧಾನವಾಯಿತು. ಪ್ರಯಾಣದುದ್ದಕ್ಕೂ ಹಿಂದಿ ಚಲನಚಿತ್ರಗಳ ಹಾಡುಗಳನ್ನು ಗುನುಗುತ್ತಾ , ಕೇಳುತ್ತಾ ಹೋಗುವಂತಾಯಿತು.
ಐಶ್ವರ್ಯ ರೈಳ ಕೆನ್ನೆಯಷ್ಟೇ ನುಣುಪಾಗಿದ್ದ ತುಮಕೂರಿನೆಡೆಗಿರುವ NH4 ಹೈವೇಯಲ್ಲಿ ಗಾಳಿಯಲ್ಲಿ ತೇಲಿದಂತೆ ಸಾಗುವಾಗ , ಆಶ್ಚರ್ಯ ಬೆರೆತ ಸಂತೋಷ ಕಾರಿನಲ್ಲಿ ತುಂಬಿತ್ತು. ಅಂದು “ಅಹಿಂದ” ಸಮಾವೇಶಕ್ಕೆ ಹೊರಡುತ್ತಿದ್ದ ಹಲವಾರು ಸರ್ಕಾರಿ ಹಾಗು ಖಾಸಗಿ ಬಸ್ಸುಗಳನ್ನೂ, ಲಾರಿಗಳಲ್ಲಿ ಜೋತಾಡುತ್ತಾ ಹೋಗುತ್ತಿರುವ ಜನರನ್ನು ನೋಡುತ್ತಿರುವಾಗ “ ಆ ಬಸ್ಸುಗಳನ್ನೂ, ಲಾರಿಗಳಿಗೆ ಅಲ್ಪಸಂಖ್ಯಾತರ, ಹಿಂದುಳಿದವರ ಹಾಗು ದಲಿತರ ಏಳಿಗೆಗೆಂದು ಸರ್ಕಾರ ಬಿಡುಗಡೆ ಮಾಡಿರುವ ಹಣದಿಂದಲೇ ಬಾಡಿಗೆ ನೀಡಿರಬಹುದು” ಎಂದೆನ್ನಿಸಿ ಆ ಸಮಾವೇಶದ ಅರ್ಥಹೀನತೆ ಬಗ್ಗೆ ನಗುಬಂತು.
ಚಾಲಕನನ್ನು ಮಾತನಾಡಿಸುತ್ತಿರುವಾಗ ಅವನ ಮಣಿಕಟ್ಟಿನ ಸುತ್ತ ಮಿನುಗುತ್ತಿದ್ದ ೮ ರಾಖಿಗಳನ್ನು ಗಮನಿಸಿ “ ಇಷ್ಟೊಂದು ಜನ ಸಹೋದರಿದ್ದಾರಾ ? ಹಾಗಾದ್ರೆ ನಿಮಗೆ ಜವಾಬ್ದಾರಿ ತುಂಬಾ ಜಾಸ್ತಿಯಲ್ವೆ ? “ ಎಂದು ಛೇಡಿಸಿದೆ. “ಏನ್ಮಾಡೋದು ಸಾರ್ ಸಂಬಂಧಿಕರ ಮಕ್ಕಳು ಎಲ್ಲರೂ ರಾಖಿ ಕಟ್ತಿನಿ ಅಂದ್ರು , ಎಲ್ಲರಿಗೂ ಹತ್ತು ರುಪಾಯಿ ಕೊಡಬೇಕಾಯ್ತು” ಎಂದಾಗ, ಕಾಲೇಜಿನ ಹುಡುಗಿಯರು ರಾಖಿ ಕಟ್ಟುಬಿಡುವರೆಂಬ ಭಯದಿಂದ, ರಕ್ಷಾ ಬಂಧನದ ದಿನ ಕಾಲೇಜಿಗೆ ಗೈರುಹಾಜರಾಗುತ್ತಿದ್ದ ನನ್ನ ಮಿತ್ರನ ನೆನಪು ಬಂತು. ಕಾರಿನ ಹಿಂಬದಿಯಲ್ಲಿ ಕುಳಿತಿದ್ದ ನನ್ನ ಅಕ್ಕ ತಂಗಿಯರು ಇಂದು ರಾಖಿ ಕಟ್ಟಿದ್ದಿದ್ದರೆ ಹತ್ತು ರೂಪಾಯಿಯ ಹತ್ತು ಪಟ್ಟಾದರೂ ಕೊಡಬೇಕಾಗುತ್ತಿತ್ತೇನೋ ? ಅವರ ರಾಖಿಯ ಬೆಲೆ ದುಬಾರಿಯೇ ಸರಿ.ಇದ್ದಕ್ಕಿದ್ದಂತೆ “ಗೊರವನಹಳ್ಳಿ ಕ್ಷೇತ್ರಕ್ಕೆ ದಾರಿ” ಎಂದು ಬರೆದಿದ್ದ ತಿರುವೊಂದನ್ನು ಅಲಕ್ಷಿಸಿ ಚಾಲಕನು ಮುಂದೆ ಹೋಗಿದ್ದರಿಂದ , ಮತ್ತೆ ಕಾರ ಹಿಂದಿರುಗಿ ಗೊರವನಹಳ್ಳಿಯ ರಸ್ತೆಯೆಡೆಗೆ ತಿರುಗಿತು.
ಐಶ್ವರ್ಯ ರೈ ಮುದುಕಿಯಾಗಿ, ಯಾವುದೇ ರೀತಿಯ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳದಿದ್ದರೆ ಅವರ ಮುಖದಲ್ಲಿ ಕಾಣಬಹುದಾದ ಉಬ್ಬುತಗ್ಗು ಗಳು ಈ ರಸ್ತೆಯಲ್ಲಿದ್ದು, ಇಂತಹ ರಸ್ತೆಯಲ್ಲಿ ೨೦ ಕಿಲೋಮೀಟರ್ ಪ್ರಯಾಣ ಮಾಡಬೇಕಿತ್ತು. ವಾಹನದಲ್ಲಿದ್ದವರೆಲ್ಲಾ ರಸ್ತೆಯನ್ನು ಶಪಿಸುತ್ತಿರುವಾಗ “ ಮತ್ತೆ ಸಿದ್ಧರಾಮಯ್ಯನವರ ನೆನಪು ಬಂತು. ಅಹಿಂದ ಸಮಾವೇಷಕ್ಕೆ ಸಿದ್ಧರಾಮಯ್ಯನವರು ಇಂತಹ ರಸ್ತೆಯಲ್ಲಿ ಸಂಚರಿಸಬೇಕಿದ್ದರೆ ರಸ್ತೆ ಸರಿಪಡಿಸಬೇಕೆಂದು ಅವರಿಗೆ ಬಹುಶಃ ಅನ್ನಿಸದಿದ್ದರೂ, ಮುಂದೆ ಯಾವ ಸಮಾವೇಶಗಳನ್ನೂ ಈ ಪ್ರದೇಶದಲ್ಲಿ ಆಯೋಜಿಸಬಾರದೆಂದು ನಿರ್ಧರಿಸುತ್ತಿದ್ದರೇನೋ ?” ಎನ್ನಿಸಿತು. ಹೈವೇಯಲ್ಲಿ ತೇಲಿಬಂದ ಕಾರು ಈಗ ತಡೆಗೋಡೆಗಳನ್ನು ಹಾರುವ ಓಟಗಾರನಂತೆ ಉಬ್ಬುತಗ್ಗುಗಳನ್ನು ದಾಟುತ್ತಾ ಮುಂದೆ ಸಾಗಿತು. ಆ ರಸ್ತೆಯ ಸುತ್ತ ಹಲವಾರು ಗುಡ್ಡಗಳಿದ್ದು, ಕೆಲವಂತೂ ಬೆಟ್ಟಗಳೆನ್ನುವಷ್ಟು ಎತ್ತರವಾಗಿದ್ದವು. ಚಾರಣರಿಯರಿಗೆ ಸೊಗಸಾದ ತಾಣಗಳಾಗಿ ತೋರುತ್ತಿದ್ದವು. ಮಳೆಗಾಲವು ಪ್ರಾರಂಭವಾಗಿ ಎರಡು ತಿಂಗಳಾಗಿದ್ದರಿಂದ ಬೆಟ್ಟಗಳಲ್ಲಿ ಹಸಿರು ಸೊಂಪಾಗಿ ಬೆಳೆದಿತ್ತು.ತಿಳಿಹಸಿರು, ಹಚ್ಚಹಸಿರು, ಹಳದಿ ಮಿಶ್ರಿತ ಹಸಿರು ಹೀಗೆ ಬಗೆಬಗೆಯ ಹಸಿರು ಕಾಣುವಾಗ ಮನಸ್ಸಿನಲ್ಲಿ ಆಹ್ಲಾದಭಾವ ಮೂಡುತ್ತಿತ್ತು.ಸ್ವಲ್ಪ ದೂರ ಸಾಗಿದ ನಂತರ ಹಸಿರು ಹೊಲಗಳು ಸಿಕ್ಕತೊಡಗಿದವು. ಒಳ್ಳೆ ಮಳೆಯಾಗಿದ್ದರಿಂದ ಕಳೆ ಕೀಳಿಸಿ, ಉತ್ತು,ಬಿತ್ತು ,ಈಗ ಸಸಿಗಳು ತಿಳಿಹಸಿರಾಗಿದ್ದವು. ಹೀಗೆ ಹಸಿರಿನ ಮಧ್ಯ ಸಾಗುತ್ತಿರುವಾಗ ಮಂಗಳಾರತಿಯ ತಟ್ಟೆ ಹಾಗು ತೀರ್ಥದ ಬಟ್ಟಲಿನಲ್ಲಿ ಅದ್ದಿರುವ ಉದ್ಧರಣೆಯನ್ನು ಹಿಡಿದ ವ್ಯಕ್ತಿಯೊಬ್ಬ ರಸ್ತೆ ಬದಿಗೆ ನಿಂತಿರುವುದು ಕಂಡಿತು. ತಿರುವುವಿನಲ್ಲಿ ಒಂದು ಶನಿದೇವನ ದೇವಸ್ಥಾನವನ್ನು ಕಂಡಾಗ ಆ ವ್ಯಕ್ತಿ ಅಲ್ಲಿನ ಪೂಜಾರಿಯೆಂದು ತಿಳಿಯಿತು. ದಾರಿಹೋಕರು, ಅದರಲ್ಲೂ ಕಾರಿನಲ್ಲಿ ಸಾಗಿಬರುವ ದೈವಭಕ್ತ ದಾರಿಹೋಕರಿಂದ ಅಲ್ಪಸ್ವಲ್ಪ ಮಂಗಳಾರತಿ ತಟ್ಟೆ ದುಡ್ಡು ಸಿಕ್ಕುವ ಆಸೆಯಿಂದ ಕಾರುಗಳನ್ನು ಕಂಡಾಕ್ಷಣ ರಸ್ತೆ ಬದಿಗೆ ಬರುತ್ತಿದ್ದನು. ಆದರೆ ಗಾಡಿಯನ್ನು ನಿಲ್ಲಿಸದೇ ಮುಂದೆ ಹೋಗಿದ್ದರಿಂದ ಪೆಚ್ಚಾಗಿ ಮರಳಿದನು. ಶನಿದೇವನ ದೇವಸ್ಥಾನದಿಂದ ಸ್ವಲ್ಪ ಮುಂದೆ , ಅದಕ್ಕೆ ಸ್ಪರ್ಧಿಯಾಗಿ ಒಂದು ಮಾರುತಿ ದೇವಾಲಯವಿತ್ತು. ಅಲ್ಲಿಯೂ ಕಾರು ನಿಲ್ಲಿಸದಿದ್ದರಿಂದ ಅಲ್ಲಿನ ಪೂಜಾರಿಯೂ ನಿರಾಶನಾಗಿ ಮರಳಿದ. ಭೂಲೋಕದ ಜನರಿಗೆ ಏಳುವರ್ಷ ಕಾಟಕೊಟ್ಟು ಭಯಪಡಿಸುವ ಶನಿದೇವ ಹಾಗು ರಾಮಭಕ್ತ ಹನುಮನ ಈ ವಿಚಿತ್ರ ಸ್ಪರ್ಧೆಯಲ್ಲಿ ಯಾರು ಹೆಚ್ಚಾಗಿ ಗೆಲ್ಲುತ್ತಿದ್ದರೆಂದು ತಿಳಿಯಲಿಲ್ಲ.ಮುಂದೆ ಒಂದು ಸೂರ್ಯಕಾಂತಿಯ ಹೊಲವನ್ನು ಕಂಡಾಗ, ಸೂರ್ಯಕಂತಿಯನ್ನು ನೋಡಿ ವರ್ಷಗಳೇ ಕಳೆದಿವೆಯೆಂಬ ವಿಚಾರ ಗಮನಕ್ಕೆ ಬಂದಿತು. ನನ್ನ ತಾತನ ಹೊಲದಲ್ಲಿ ಸೂರ್ಯಕಾಂತಿಯನ್ನು ಒಮ್ಮೆ ಬಿತ್ತನೆ ಮಾಡಿದ್ದರು. ಸರಿಯಾದ ಇಳುವರಿ ಸಿಕ್ಕದಿದ್ದರಿಂದ, ಮತ್ತೆ ಅಕ್ಕಿಗೆ ಮರಳಿದರು. ಬಹುಶಃ ಅದೇ ಕೊನೆಯ ಬಾರಿ ಸೂರ್ಯಕಾಂತಿಯನ್ನು ನೋಡಿದ್ದು.ಹೆಸರಿಗೆ ತಕ್ಕಂತೆ ಸೂರ್ಯನೆಡೆಗೆ ಮುಖಮಾಡಿದ್ದ ನಿಂತಿದ್ದ, ಹಳದಿ ಮಿಶ್ರಿತ ಅರಿಸಿನ ಬಣ್ಣದ ಸೂರ್ಯಕಾಂತಿಗಳ ನೆನಪು ಒಂದೆರಡು ದಿನ ಹಸಿರಾಗಿಯೇ (ಕ್ಷಮಿಸಿ ಹಳದಿಯಾಗಿಯೇ) ನಿಂತಿತ್ತು.
ಅಂತೂ ಗೊರವನಹಳ್ಳಿಗೆ ತಲುಪಿದಾಗ , ಆ ದೇವಸ್ಥಾನ ಹಳ್ಳಿಯಿಂದ ೨-೩ ಕಿಲೋಮೀಟರ್ ದೂರವಿರುವ ವಿಚಾರ ತಿಳಿದು, ಮುಂದೆ ಸಾಗಿದೆವು. ೧೯೭೨ರಲ್ಲಿ ಕಮಲಮ್ಮ ಎಂಬುವರಿಗೆ ಈಗಿರುವ ದೇವಸ್ಥಾನದ ಹತ್ತಿರದಲ್ಲೇ ಹರಿಯುವ ಹೊಳೆಯಲ್ಲಿ ಲಕ್ಷ್ಮೀ ವಿಗ್ರಹ ಸಿಕ್ಕಿತೆಂದೂ, ಅದನ್ನು ಇಲ್ಲಿ ಪ್ರತಿಷ್ಟಾಪಿಸಿ ಸಣ್ಣ ದೇಗುಲವೊಂದನ್ನು ನಿರ್ಮಿಸಿದರಂತೆ.ಮೂವತ್ತು ವರ್ಷಗಳಲ್ಲಿ ದಾರಿಯಲ್ಲಿ ಸಿಕ್ಕ ಬಿರುಕುಗೋಡೆಯ ದೇವಸ್ಥಾನಗಳಂತಿದ್ದ ಈ ದೇವಸ್ಥಾನವು ಈಗ granite ನೆಲವಿರುವ ಕಾಂಕ್ರೀಟ್ ಕಟ್ಟಡವಾಗಿದೆ.ಕಾರಿನಿಂದಿಳಿದೊಡನೆ ಪೂಜಾ ಸಾಮಗ್ರಿಗಳನ್ನು ಮಾರುವವರು ನಮ್ಮನ್ನು ಸುತ್ತುವರೆದರು. “ಬೇಕಿದ್ದರೆ ಕೊಳ್ಳುತ್ತೇವೆ, ಒತ್ತಾಯ ಮಾಡಬೇಡಿ” ಎಂದು ನಾನು ಗದರಿಸಿದರೂ, ಮತ್ತೆ-ಮತ್ತೆ ಕಾರಿನಲ್ಲಿದ್ದವರನ್ನು ಸುತ್ತುವರೆದು ಪೀಡಿಸುತ್ತಿದ್ದರು. ಡಿಸ್ಕವರಿ ಚಾನಲ್ ನಲ್ಲಿ ಬೇಟೆಯ ಪಳೆಯುಳಿಕೆಗೆ ರಣಹದ್ದುಗಳು ಕಚ್ಚಾಡುವಾಗ ನಿರ್ಮಾಣವಾಗುವ ದೃಶ್ಯಕ್ಕೂ, ಇಲ್ಲಿ ನಿರ್ಮಾಣವಾಗುತ್ತಿದ್ದ ದೃಶ್ಯಕ್ಕೂ ಕ್ರೂರವಾದ ಸಾಮ್ಯಾಂಶವಿತ್ತು. ಆದಷ್ಟು ಬೇಗ ದೇವಸ್ಥಾನದೆಡೆ ಎಲ್ಲರೂ ನಡೆಯುವಾಗ ಕೋಪದೊಡನೆ ನಿಸ್ಸಹಾಯಕತೆಯ ಗೊಣಗಾಟ ಬಾಯಲ್ಲಿತ್ತು.ದೇವಾಲಯವನ್ನು ಪ್ರವೇಶಿಸುವ ಮುನ್ನ ಭಕ್ತಾದಿಗಳು ಸಾಲಾಗಿ ಬರಲೆಂದು ಮಾಡಿಸಿರುವ ಕಂಬಿಗಳು ಸಿಕ್ಕವು. ಇಂತಹ ಸಾಲುಗಳು ಪ್ರತಿಯೊಂದು ಪ್ರಸಿದ್ಧ “ಪುಣ್ಯಕ್ಷೇತ್ರ” ಗಳಲ್ಲೂ ಕಾಣಬಹುದು. ಪ್ರತಿ ಸಾಲಿಗೂ ಭಕ್ತಾದಿಗಳು ಸಂದಾಯ ಮಾಡುವ ಹಣದ ಆಧಾರದ ಮೇಲೆ ದರ್ಶನ ಅವಧಿ, ಗರ್ಭಗುಡಿಯ ಸಾಮಿಪ್ಯ , ವಿಶೇಷ ಪೂಜೆ ಮುಂತಾದುವುಗಳು ನಿರ್ಧಾರವಾಗುವುದು. ನಾವೆಲ್ಲರೂ ಇಂತಹ ಒಂದು ವಿಶೇಷವಾದ ಸಾಲುಗಳಲ್ಲಿ ನಿಂತು, ಬಹು ಬೇಗನೆ ದೇವಸ್ಥಾನದೊಳಕ್ಕೆ ಹೊಕ್ಕೆವು. Granite ನೆಲದ ಮೇಲೆ ಕುಳಿತಿದ್ದ ಭಕ್ತಾದಿಗಳನ್ನು ಗರ್ಭಗೃಹಕ್ಕೆ ಹೋಗುವ ದಾರಿಯ ಕಂಬಿಗಳು ಬೇರ್ಪಡಿಸುತ್ತಿದ್ದವು. ಗರ್ಭಗೃಹದ ಇಕ್ಕೆಲಗಳಲ್ಲಿ ಎರಡು ಲಕ್ಷ್ಮೀದೇವಿಯ ವಿಗ್ರಹಗಳಿದ್ದವು. ಗರ್ಭಗೃಹದೊಳಗೆ ಹೊಳೆಯಲ್ಲಿ ಸಿಕ್ಕ ಮೂರ್ತಿಯನ್ನು ಪ್ರತಿಷ್ಟಾಪಿಸಿದ್ದರು. ದೇವಸ್ಥಾನದ ಒಳಾಂಗಣದಲ್ಲಿ ಎಲೆಕ್ಟ್ರಾನಿಕ್ ಡೋಲುಗಳು, ಹುಂಡಿಗಳು ಹಾಗು ಒಂದು ಪ್ರಸಾದದ ಅಂಗಡಿ ಕೂಡ ಇತ್ತು. ಅರ್ಚನೆ ಹಾಗು ವಿಶೇಷ ಪೂಜೆಗಾಗಿ ಬಲವಂತವಾಗಿ ನಮಗೆ ಮಾರಲಾಗಿದ್ದ ಪೂಜಾ ಸಾಮಗ್ರಿಗಳನ್ನು ಪೂಜಾರಿಗೆ ಕೊಟ್ಟು ನಾವೂ ಭಕ್ತಾದಿಗಳ ಸಾಲಿನಲ್ಲಿ ಕುಳಿತೆವು.ಮಂಗಳಾರತಿ ಮುಗಿದು ತಟ್ಟೆಯನ್ನು ಒಳಾಂಗಣಕ್ಕೆ ತಂದಾಗ ಎಲ್ಲರೂ ಎದ್ದು ನಿಂತು , ಮಂಗಳಾರತಿ ತಟ್ಟೆ ಕೈಯೊಡ್ಡುವ ಸ್ಪರ್ಧೆ ಏರ್ಪಟ್ಟಿತು. ಜೊತೆಗೆ, ಸ್ಪರ್ಧೆಗೆಂಬಂತೆ ಹಾಕುತ್ತಿದ್ದ ಒಂದು –ಎರಡು ರೂಪಾಯಿ ನಾಣ್ಯಗಳು ತಟ್ಟೆಗೆ ಸೋಕಿ ಠಣ್ ಠಣ್ ಸದ್ದು ಮಾಡುತ್ತಿದ್ದವು. ನಂತರ ತೀರ್ಥಕ್ಕೂ, ಶಠಾರಿಗೂ ಇಂತಹ ಸ್ಪರ್ಧೆ ಗಳು ಏರ್ಪಟ್ಟವು.
ಅಮ್ಮ ನನ್ನ ಬಳಿ ಬಂದು “ನೋಡು ಚೀಕು, ನಿನಗೆ ಕೆಲಸ ಸಿಕ್ಕರೆ ಹುಂಡಿಗೆ ೧೦೦೦ ರೂಪಾಯಿ ಹಾಕ್ತೀನಿ ಅಂತ ಹರಸ್ಕೊಂಡಿದ್ದೆ “ ಎಂದಾಗ ದುಡ್ಡನ್ನು ಪರ್ಸಿನಿಂದ ತೆಗೆದು ಹಾಕಿಬಿಟ್ಟೆ. ನಾನೇನು “ಮಾತೃವಾಕ್ಯ ಪರಿಪಾಲಕ”ನಲ್ಲದಿದ್ದರೂ ಅವರ ಮಾತುಗಳಲ್ಲಿ ತರ್ಕಾತೀತವಾದ ನ್ಯಾಯ ಕಂಡಿತು. ಅದನ್ನು ಅರ್ಥೈಸಲು ನನಗೆ ಇಲ್ಲಿಯವರೆಗೆ ಸಾಧ್ಯವಾಗಿಲ್ಲ. ಅರ್ಚನೆ, ವಿಶೇಷಪೂಜೆಗಳೆಲ್ಲ ಮುಗಿದ ಮೇಲೆ ದೇವಸ್ಥಾನದಿಂದ ಹೊರಬಂದಾಗ ಒಬ್ಬ ಚಿಕ್ಕ ಹುಡುಗ ನನ್ನ ಬಳಿಬಂದು ಭಿಕ್ಷೆ ಬೇಡತೊಡಗಿದನು. ನನ್ನ ಬಳಿ ಚಿಲ್ಲರೆ ಇಲ್ಲದ್ದರಿಂದ ಅಮ್ಮನನ್ನು ಕೇಳಿದಾಗ “ಚೀಕು ಒಬ್ಬರಿಗೆ ಕೊಟ್ರೆ ಎಲ್ರೂ ಸುತ್ಕೋತಾರೆ, ನೀನು ಸುಮ್ನಿರು” ಎಂದರು. ಅದಕ್ಕೆ “ಹುಂಡಿಗೆ ಸಾವಿರ ರೂಪಾಯಿ ಹಾಕಲು ಮೀನಾಮೇಷ ನೋಡ್ಲಿಲ್ಲ , ಈಗ ಒಂದು ರೂಪಾಯಿ ಕೊಡೋಕ್ಕೆ ಯಾಕೆ ಸಂಕೋಚ ? “ ಎಂದು ಖಾರವಾಗಿ ನುಡಿದುಬಿಟ್ಟೆ. ಅಮ್ಮನ ಮನಸ್ಸಿಗೆ ನೋವಾಗಿ ಒಂದು ರೂಪಾಯಿ ತೆಗೆದುಕೊಟ್ಟರು. ಇದ್ದಕ್ಕಿದ್ದಂತೆ ಅಲ್ಲಿ ಹಲವರು ಭಿಕ್ಷೆಗಾಗಿ ಸುತ್ತುವರೆದರು. ಅಮ್ಮನನ್ನು ನೋಯಿಸಿದ್ದಕ್ಕೆ ಮತ್ತು ನನ್ನ ಮೂರ್ಖತನಕ್ಕೆ ನನ್ನನ್ನೇ ಬೈದುಕೊಂಡೆ, ಜೊತೆಗೆ ಅಲ್ಲಿ ಸೇರಿದ್ದವರನ್ನೆಲ್ಲಾ ಗದರಿಸಿ ಕಳುಹಿಸಿದೆ. ಇಂತಹ “ಪುಣ್ಯಕ್ಷೇತ್ರ”ಗಳಿಗೆ ಬರುವವರಲ್ಲಿ ಭಕ್ತರೂ, ಭಕ್ತಿ ಬಿಟ್ಟು ಬೇರೆ ಕಾರಣಗಳಿಗೆ ಬರುವ ಜನರನ್ನು ಸೇರಿರುವದರಿಂದಲೇನೋ “ಭಕ್ತಾದಿಗಳು” ಎಂಬ ಪದ ರೂಢಿಗೆ ಬಂದಿರುವುದು. ಆ “ಆದಿ” ಗಳ ಪಂಗಡಕ್ಕೆ ನಾನೂ ಸೇರಿರಬೇಕೆನ್ನಿಸಿಬಿಟ್ಟಿತು.
ಪಕ್ಕದಲ್ಲೇ ಇದ್ದ ಕಮಲಮ್ಮನವರ ವೃಂದಾವನಕ್ಕೆ ಭೇಟಿಕೊಟ್ಟಾಗ , ಅಲ್ಲಿ ಮತ್ತೆ ಪೂಜಾಸಾಮಗ್ರಿಗಳನ್ನು ಎಲ್ಲರೂ ಕೊಳ್ಳತೊಡಗಿದರು. ಅಲ್ಲಿದ್ದ ಪೂಜಾರಿಯೊಬ್ಬ ವ್ರತದ ಸಾಮಗ್ರಿಗಳಾದ ಲಕ್ಷ್ಮೀ ದೇವಿಯ ಚಿತ್ರ, ಸ್ವಲ್ಪ ನಾಣ್ಯಗಳನ್ನು ಯಾರಿಗೂ ಅರ್ಥವಾಗದ ರೀತಿಯಲ್ಲಿ ಮಂತ್ರಿಸಿ, ಅದೇ ಸ್ಪಷ್ಟತೆಯೊಂದಿಗೆ ವ್ರತದ ವಿಧಿವಿಧಾನಗಳನ್ನು ವಿವರಿಸಿದನು. ಹತ್ತಿರದಲ್ಲೇ ಇನ್ನೊಬ್ಬ ಪೂಜಾರಿ “ಸರ್ವದುಃಖಪರಿಹಾರಕ, ಸರ್ವಸುಭೀಕ್ಷದಾಯಕ” ವಾದ ಮಂತ್ರಿಸಿದ ತಾಯತಗಳನ್ನು ಕೇವಲ ಹತ್ತು ರೂಪಾಯಿಗೆ ಮಾರುತ್ತಿದ್ದನು. “ಸಾಲದ ತೊಂದರೆ, ಹಣಕಾಸಿನ ಮುಗ್ಗಟ್ಟು, ಕಂಕಣಬಲ ಕೂಡಿಬರದಿರುವುದು ಮುಂತಾದ ತೊಂದರೆಗಳನ್ನು ನಿವಾರಿಸಲು ನಿನ್ನೆ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ತಾಯತಗಳನ್ನು ಮಂತ್ರಿಸಲಾಗಿದೆ, ಪ್ರತಿಯೊಂದಕ್ಕೆ ಕೇವಲ ಹತ್ತು ರೂಪಾಯಿ, ಕೆಲವೇ ಮಾತ್ರ ಉಳಿದಿವೆ” ಎಂದು ಸಾರಿ ಸಾರಿ ಹೇಳುತ್ತಿದ್ದನು. ಪಾಪ ಯಾರು ಅವನೆಡೆಗೆ ಗಮನಕೊಡುತ್ತಿರಲಿಲ್ಲ.
ವೃಂದಾವನದ ಭೇಟಿಯ ನಂತರ ಬೆಂಗಳೂರಿಗೆ ಹಿಂದಿರುಗಲು ನಿರ್ಧರಿಸಿ , ದಾರಿಯಲ್ಲಿ ಯಾವುದಾದರೊಂದು ಹೋಟಲ್ ನಲ್ಲಿ ಊಟಮಾಡುವ ಆಲೋಚನೆಯೊಂದಿಗೆ ಕಾರನ್ನು ಏರಿದೆವು. ಬಹಳ ಆಯಾಸವಾಗಿದ್ದರಿಂದ ಯಾರೂ ಹೆಚ್ಚು ಮಾತನಾಡುತ್ತಿರಲಿಲ್ಲ.ಕಾರು ಹೊರಟು ತಂಪು ಗಾಳಿ ಬೀಸತೊಡಗಿದಾಗ ಕಾರಿನಲ್ಲಿ ಹರಟೆಗಳು ಕೊನರತೊಡಗಿದವು. ಪಕ್ಕ ಕುಳಿತಿದ್ದ ವಿಜೇತ “ನೀನು ಇಂಡಿಯನ್ ಐಡಲ್ ನ ಫೈನಲ್ಸ್ ನೋಡಿದೆಯ ? ಗೆದ್ದವನು ಎಷ್ಟು ಸೊಗಸಾಗಿ ಹಾಡ್ದಾ ! “ ಎಂದು ಉತ್ಸಾಹಭರಿತ ಕೇಳಿದಳು.
“ಆ ಪ್ರೊಗ್ರಾಮ್ ಬರಿ ಮೋಸ, ಯುವ ಸಂಗೀತಗಾರರಿಗೆ ಪ್ರೋತ್ಸಾಹ ಕೊಡುವುದು ಅದರ ಉದ್ದೇಶವಲ್ಲ,ಆ ಸ್ಪರ್ಧೆಯಲ್ಲಿ ಭಾಗವಹಿಸಿಸುವವರ ಅಳು, ನಗು , ಭಯಗಳಂತಹ ಭಾವನೆಗಳನ್ನು ಸೆರೆಹಿಡಿದು ಟಿವಿಯಲ್ಲಿ ಬಿತ್ತರಿಸಿ ಕಾಸುಮಾಡಿಕೊಳ್ಳುವುದೇ ಒಳ ಉದ್ದೇಶ” ಎಂದು ತಿರಸ್ಕಾರದ ದನಿಯಿಂದ ಉತ್ತರಿಸಿದೆ. ನನ್ನ ಪ್ರಲಾಪವನ್ನು ಕೇಳಿ ವಿಜೇತಾಳ ಮುಖದಲ್ಲಿದ್ದ ಉತ್ಸಾಹವೆಲ್ಲ ಇಳಿದುಹೋಗಿ “ನೀನು ಹೇಳುವುದು ನೀಜ” ಎಂದು ತಲೆಯಾಡಿಸುತ್ತಾ ಬಲವಂತದ ನಗೆ ಬೀರಿದಳು. ಹೈವೇ ಬದಿಯಲ್ಲಿ ಹೋಟಲ್ ಗಳನ್ನು ಹುಡುಕುವ ಕೆಲಸವನ್ನು ಕಣ್ಣುಗಳಿಗೆ ಕೊಟ್ಟಿದ್ದರಿಂದ ಮುಂದೆ ಹೆಚ್ಚು ಮಾತು ಬೆಳೆಯಲಿಲ್ಲ. ಜಾಲಹಳ್ಳಿಯ ಬಳಿ ಹೊಟೆಲ್ಲೊಂದು ಕಂಡೊಡನೆ, ಬೇಗನೆ ಒಳಹೊಕ್ಕು ಹೊಟ್ಟೆಯ ಹಸಿವಿನ ಆರ್ಭಟಗಳನ್ನು ತಣಿಸಿದ ಮೇಲೆ ಮತ್ತ ಅದೇ ಲವಲವಿಕೆಯಿಂದ ಕೂಡಿದ ಹರಟೆ ಪ್ರಾರಂಭವಾಯಿತು. ನನ್ನ ದೊಡ್ಡಮ್ಮ ಅಂದು ತಮ್ಮ ಪರಿಚಯದವರ ಮನೆಯ ಗೃಹಪ್ರವೇಶಕ್ಕೆ ಹೋಗಬೇಕೆಂದು ಹೊರಡುವಾಗಲೇ ಹೇಳಿದ್ದರಿಂದ ದಾರಿಯಲ್ಲೇ ಇದ್ದ ಆ ಮನೆಗೆ ಹೋಗಲು ಎಲ್ಲರೂ ನಿರ್ಧರಿಸಿದೆವು. ಆ ಮನೆಗೆ ತಲುಪುವ ದಾರಿ ತಿಳಿಯದೇ ಸುತ್ತಾಡಿ , ನಂತರ ಸರಿದಾರಿಯಲ್ಲಿ ಸಾಗುವಾಗ ಕಾಡಿನಂತಹ ವೃಕ್ಷಸಮೂಹ ರಸ್ತೆಯ ಇಕ್ಕೆಲಗಳನ್ನು ಆವರಿಸಿತ್ತು. ಬಹುಶಃ ಪು.ಚಂ.ತೇಜಸ್ವಿ ಯವರ “ಜಾಲಹಳ್ಳಿಯ ಕುರ್ಕ” ಕಥೆಯಲ್ಲಿ ಅವರು ಪ್ರಸ್ತಾಪ ಮಾಡುವ ಜಾಲಹಳ್ಳಿ ಬಳಿಯಿರುವ ಕೃತಕ ಸರ್ಕಾರಿ ಕಾಡು ಇದೇ ಆಗಿರಬೇಕೆನ್ನಿಸಿತು. ಅಲ್ಲೇ ಇದ್ದ ಅರಣ್ಯ ಇಲಾಖೆ ಬೋರ್ಡ್ ನನ್ನ ಅನುಮಾನಕ್ಕೆ ಪುಷ್ಟಿಕೊಡುವಂತಿತ್ತು. ಆದರೆ ಅದರಿಂದ ಸ್ವಲ್ಪ ದೂರದಲ್ಲೇ ಲೇಔಟ್ ಒಂದು ನಿರ್ಮಾಣವಾಗುತ್ತಿದ್ದುದ್ದನ್ನು ಆಶ್ಚರ್ಯವಾಯಿತು.ನಾವು ಹೋಗಬೇಕಿದ್ದ ಮನೆ ತಲುಪಿದಾಗ ಅಲ್ಲಿ ಮನೆ ಮಾಲೀಕರಿರಲಿಲ್ಲ. ಅವರಿಗೆ ಫೋನಾಯಿಸಿದಾಗ “ಇನ್ನೇನು ಹತ್ತು ನಿಮಿಷದಲ್ಲಿ ಬಂದುಬಿಡುವೆವು “ ಎಂದು ಹೇಳಿದರು. ಮನೆಮಾಲೀಕರ ಸಮಯಪಾಲನೆಯ ಪ್ರಾಮಾಣಿಕತೆಯನ್ನು ನೋಡಿಯೇ IST ಎಂಬುದಕ್ಕೆ “Indian Streachable Time” ಎಂಬ ವಿಸ್ತೀರ್ಣ , ತುಂಬಾ ಅರ್ಥಪೂರ್ಣವಾಗಿ ತೋರುತ್ತಿತ್ತು. ಅವರು ಎಷ್ಟುಹೊತ್ತಾದರೂ ಬಾರದಿದ್ದ ರಿಂದ ಎದುರಿಗೆ ಇದ್ದ ಮೈದಾನದಲ್ಲಿ ಕ್ರಿಕೆಟ್ ಆಡುವುದನ್ನು ನೋಡುತ್ತಾ ನಿಂತೆ.ಪಕ್ಕದಲ್ಲೆ ಒಂದು ಸ್ಮಶಾನವನ್ನು ನೋಡಿದಾಗ, ಮೈದಾನ ಹಾಗು ಸ್ಮಶಾನ ಎರಡೂ ಮನೆಯ ಎದುರು ಇರುವ ವಿಚಾರ ಗಮನಕ್ಕೆ ಬಂತು. ಸ್ಮಶಾನದಲ್ಲಿ ಮೃತದ ಸಂಭಂಧಿಕರ ಗೋಳಾಟ ಹಾಗು ಮೈದಾನದಲ್ಲಿ ಆಡುತ್ತಿರುವ ಹುಡುಗರ ನಗು, ಕೇಕೆಗಳನ್ನು ಒಟ್ಟಿಗೆ ಕೇಳಿ-ಕಾಣುವ ವಿಚಿತ್ರ ಪ್ರಸಂಗ ಆ ಮನೆಯಲ್ಲಿ ವಾಸಿಸುವವರಿಗೆ ಎದುರಾಗಬಹುದೆಂಬ ಯೋಚನೆ ಬಂದು ನಗು ಬಂತು. ಅಷ್ಟರಲ್ಲಿ ಮನೆಮಾಲೀಕರು ಬಂದು ಸ್ವಾಗತ, ಗೌರವ, ಬೀಳ್ಕೊಡುವ ಶಿಷ್ಟಾಚಾರಗಳೆಲ್ಲ ಮುಗಿದಮೇಲೆ ಬೆಂಗಳೂರಿನ ಹಾದಿ ಹಿಡಿದೆವು. ಮನೆಗೆ ಬಂದು ಹಾಸಿಗೆ ಮೇಲೆ ಧೊಪ್ಪನೆ ಬಿದ್ದು ಮಲಗಿದಾಗ ನಿದ್ದೆ ಸರಾಗವಾಗಿ ಬಂದಿತು.

0 Comments:

Post a Comment

<< Home