ಕವಿಸಮಯ

ಕಾಳನ್ನೆಲ್ಲವ ಪಡೆದು ಜಳ್ಳನ್ನೆಲ್ಲವ ತೂರಿಬಿಡಿ, ಎಲ್ಲವೂ ಜಳ್ಳಾದಲ್ಲಿ ಬರೆದವನ ಪೊಳ್ಳೆನ್ನದಿರಿ

Wednesday, February 22, 2006

ಪಾನಿಪಟ್

“ಹೆದರಿಕೊಳ್ಳಬೇಡಿ, ನಾನು ನಿಮಗೆ ಯಾವ ರೀತಿಯಲ್ಲೂ ತೊಂದರೆ ಕೊಡೊದಿಲ್ಲ”

( ಅಲ್ಲಿದ್ದವರು ಸುತ್ತಮುತ್ತ ತಿರುಗಿ, ಎಲ್ಲ ನೋಟಗಳು ಎಲ್ಲ ದಿಕ್ಕುಗಳನ್ನು ಸುತ್ತಿಬಂದು ಕೊನೆಗೆ ಒಂದೇ ಕಡೆ ಕೇಂದ್ರೀಕೃತವಾದವು. ಮತ್ತೆ ಅದೇ ವಿನಯಪೂರ್ಣ ಧ್ವನಿ ಮಾತನಾಡಿತು)

“ನಾನು ನಿಮ್ಮಂತೆ ಒಂದು ಸಾಧಾರಣ ಜೀವ,ನನ್ನ ಮಾತು ಕೇಳಿ ನಿಮಗೆ ಆಶ್ಚರ್ಯವಾಗ್ತಿರಬಹುದು.ಆದ್ರೆ ನನಗೆ ಇದೇನು ಹೊಸದಲ್ಲ.ನಿಮ್ಮೊಡನೆ ಮಾತನಾಡುವುದಕ್ಕಿಂತ ಮೊದಲು ಇಲ್ಲೇ ಇದ್ದನನ್ನ ಬಂಧುಗಳೊಡನೆ, ಸ್ನೇಹಿತರೊಡನೆ ಮಾತನಾಡುತ್ತಿದ್ದೆ.ಆದರೆ ಈಗ ಅವರ್ಯಾರು ಇಲ್ಲ.”

(ವಿನಯದಿಂದ ಧ್ವನಿಯ ಭಾವ ವಿಷಾದಕ್ಕೆ ತಿರುಗಿದರೂ, ಮಾತನಾಡುವುದನ್ನು ಮುಂದುವರೆಸುತ್ತದೆ)

“ನಿಮ್ಮಂಥವರೇ ಅವರನ್ನೆಲ್ಲ ನನ್ನ ಪಾಲಿಗೆ ಇಲ್ಲದಂತೆ ಮಾಡಿಬಿಟ್ರು. ಚೈತ್ರದಲ್ಲಿ ಕೊಬ್ಬಿ ಗ್ರೀಷ್ಮದಲ್ಲಿ ಸೊರಗುತ್ತಿದ್ದ ನಮಗೆ ಹೆಚ್ಚೇನೂ ಚಿಂತೆಗಳಿರಲಿಲ್ಲ.ಬೆಳಗ್ಗಿನಿಂದ ಸಂಜೆಯವರೆಗೆ ಊಟ ತಯಾರಿಸಿ,ಶೇಖರಿಸಿ, ರಾತ್ರಿ ಹರಟೆಹೊಡೆಯುತ್ತಾ, ನಿದ್ದೆ ಹೋಗುತ್ತಿದ್ದ ನಮಗೆ ಆಗೊಂದು, ಈಗೊಂದು ಕ್ಷಾಮ ಬಿಟ್ಟರೆ ಜೀವಕ್ಕೆ ಆಪತ್ತಾಗುವಂತಹ ಪರಿಸ್ಥಿತಿ ಒದಗೊದಿಲ್ಲ, ಅಂತಲೇ ಅಓದುಕೊಂಡಿದ್ದ.ಆದ್ರೆ ಒಂದು ದಿನ ಜನರ ಗುಂಪೊಂದು ಬಂದು ನನ್ನ ಬಂಧುಗಳನ್ನೂ , ಮಿತ್ರರನ್ನೂ ಕೊಂದು, ಅವರ ಅವಯವಗಳನ್ನು ಕೊಂಡೊಯ್ದರು. ಆ ಗುಂಪು ನಮ್ಮನ್ನೆಲ್ಲಾ ಕೊಲ್ಲಲು, ನಮ್ಮ ದೂರದ ಸಂಬಂಧಿಯೊಬ್ಬನ ಅಂಗವನ್ನೇ ಆಯುಧದ ಹಿಡಿಯಾಗಿ ಬಳಸುತ್ತಿದ್ದರು. ನಿಂತುಬಿಡು ಎಂದು ಅವನನ್ನು ಗೋಗರೆದೆವು, ಆದರೆ ಅವರು ಅವನ ಬಾಯಿ ಮುಚ್ಚಿಸಿಬಿಟ್ಟಿದ್ದರು. ನಮ್ಮ ಚೀರಾಟವೆಲ್ಲಾ ವ್ಯರ್ಥವಾಯಿತು. ಅಂದು ನಾನು ತಬ್ಬಲಿಯಾದೆ.

(ವಿಷಾದದಿಂದ ಶಾಂತಭಾವಕ್ಕೆ ಧ್ವನಿ ಮರಳಿತು.ಅಲ್ಲಿದ್ದ ದಾರಿಹೋಕರೆಲ್ಲ ತಬ್ಬಿಬ್ಬಾಗಿ , ತಮ್ಮ ಕಿವಿಗಳನ್ನೇ ನಂಬಲಾಗದೆ ಮೌನವಾಗಿದ್ದರು. ಸ್ವಲ್ಪ ಹೊತ್ತು ಮೌನವು ಅಲ್ಲಿನ ವಾತವರಣದಲ್ಲಿ ನೆಲೆಸಿತು )

“ನನ್ನನ್ನು ಯಾಕೆ ಕೊಲ್ಲದೇ ಬಿಟ್ಟು ಹೋದರು ಅಂತ ಒಮ್ಮೊಮ್ಮೆ ಯೋಚಿಸುತ್ತೇನೆ ? ಆದ್ರೆ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಬಹುಶಃ ಮನುಷ್ಯರು ತೊಂದರೆಯಿಂದ ಪಾರಾದಾಗಲೆಲ್ಲಾ “ತಮ್ಮ ಪೂರ್ವ ಜನ್ಮದ ಪುಣ್ಯ” ಎಂದು ಹೇಳುತ್ತಾರಲ್ಲ ಅದೇ ನನ್ನ ಉಳಿವಿಗೂ ಅದೇ ಕಾರಣವಿರಬಹುದೇನೋ ?” ಅಥವ ನನ್ನ ಅಂಗಾಂಗಗಳು ಅವರ ಪ್ರಯೋಜನಕ್ಕೆ ಬರುತ್ತಿರಲ್ಲಿಲ್ಲವೋ ? ಗೊತ್ತಿಲ್ಲ “
( ಮೆಲ್ಲನೆ ಚಿಕ್ಕ ನಗು ಕೇಳಿಬಂತು)

“ಅಂದಿನಿಂದ ಮನುಷ್ಯರ ಮೇಲೆ ನನಗೆ ತಡೆಯಲಾರದಷ್ಟು ಕೋಪ. ನನ್ನ ನೆರಳನ್ನರಸಿ ಬಂದ ದಾರಿಹೋಕರಿಗೆ, ಅದು ದೊರೆಯದಿರಲೆಂದು , ಹಿಂದಕ್ಕೆ ಬಾಗಲು ಪ್ರಯತ್ನಿಸುತ್ತಿದ್ದೆ, ಗಟ್ಟಿಯಾದ ನನ್ನ ಕಾಯಿಗಳನ್ನು ಅವರ ಮೇಲೆಲ್ಲಾಉದುರಿಸುತ್ತಿದ್ದೆ. ಆದರೆ ಆ ದಿನ ಒಂದು ಘಟನೆ ನೋಡಿದ ಮೇಲೆ ನಿಮ್ಮ ಮೇಲಿದ್ದ ಧೋರಣೆಯೇ ಬದಲಾಯಿತು. ಮತ್ತೆ ಅದೇ ಘಟನೆ ಸಂಭವಿಸುವ ಸೂಚನೆಗಳು ಸಿಕ್ಕಿದ್ದರಿಂದ, ನೀವೆಲ್ಲಾ ಇಲ್ಲಿಂದ ಹೋಗುವುದು ಒಳಿತೆಂದು ಎಚ್ಚರಿಸಲು ಮಾತನಾಡಬೇಕಾಯಿತು. ಆದ್ರೆ ಅಷ್ಟಕ್ಕೆ ಸುಮ್ಮನಾಗದೆ ನನ್ನ ಕಥೆಯನ್ನೆಲ್ಲಾ ಹೇಳಿಬಿಟ್ಟೆ”
( ಮರದ ಮಾತುಗಳನ್ನು ಕೇಳಿದ ನಂತರ ಅಲ್ಲಿದ್ದ ದಾರಿಹೋಕರ ಕುತೂಹಲ ಗಾಬರಿಗೆ ತಿರುಗುತ್ತದೆ. ಅವರಲ್ಲೊಬ್ಬ ಧೈರ್ಯಮಾಡಿ ನಡೆದ ಘಟನೆಯನ್ನು ವಿವರಿಸೆಂದು ಮರಕ್ಕೆ ಹೇಳುತ್ತಾನೆ)

“ ಈ ಘಟನೆ ನಡೆದು ಬಹಳ ಕಾಲವೇ ಆಗಿವೆ. ಆಗ ನಾನು ಘಮಘಮಿಸುವ ಹೂವುಗಳಿಂದ, ದಪ್ಪ ಕಾಯಿಗಳಿಂದ ಕೂಡಿ ವಿಜ್ರಂಭಿಸುತ್ತಿದ್ದೆ . ನಾಲ್ಕೈದು ಜೋಡಿಹಕ್ಕಿಗಳ ಗೂಡುಗಳು ಕೂಡ ಇದ್ದವು. ಹಕ್ಕಿಮರಿಗಳ ಚಿಲಿಪಿಲಿಯೊಂದಿಗೆ ನಾನು ಕೂಡ ಹಾಡುತ್ತಿದ್ದೆ. ನನ್ನ ಬಂಧು ಮಿತ್ರರೇ ಹಕ್ಕಿಮರಿಗಳಾಗಿ ಬಂದಿರಬೇಕೆನ್ನಿಸುತ್ತಿತ್ತು.ಒಂದು ದಿನ ಆಯುಧಗಳನ್ನು ಹಿಡಿದ ಜನರ ದೊಡ್ಡ ಗುಂಪು ನಾನಿದ್ದಲ್ಲಿಗೆಬರುತ್ತಿರುವುದು ಕಾಣಿಸಿತು.ಇಲ್ಲಿಗೆ ನನ್ನ ಜೀವಿತವು ಮುಗಿಯಿತೆಂದು ಅನ್ನಿಸತೊಡಗಿದರೂ, ಈ ಬಾರಿ ಸುಲಭವಾಗಿ ಶರಣಾಗದೆ,ಹೋರಡಬೇಕೆಂದು ನಿರ್ಧರಿಸಿ, ಅತ್ತಿತ್ತ ಅಲುಗಾಡಿ ಕಾಯಿಗಳ ಮಳೆಯನ್ನು ,ಬರುತ್ತಿರುವ ಗುಂಪಿನ ಮೇಲೆ ಸುರಿಸಲು ಸಜ್ಜಾದೆ. ಆದರೆ ಆ ಗುಂಪಿನ ಬಳಿ ನನ್ನ ಬಂಧುಗಳನ್ನು ಕೊಂದ ಆಯುಧವಿರಲಿಲ್ಲ , ಬದಲಿಗೆ ಹರಿತ ತುದಿಯ ಆಯುಧಗಳೇ ಇದ್ದವು. ಗುಂಪಿನಲ್ಲಿ ಕೆಲವರು ನಡೆದುಬರುತ್ತಿದ್ದರೆ, ಇನ್ನುಕೆಲವರು ಕುದುರೆಯ ಮೇಲೆ, ಆನೆಯ ಮೇಲೆ ಕುಳಿತು ಸಾಗಿ ಬರುತ್ತಿದ್ದರು. ಆನೆಯ ಮೇಲೆ ಕುಳಿತಿದ್ದವರಂತೂ ವಿಚಿತ್ರವಾದ ಬಟ್ಟೆಗಳನ್ನು ಧರಿಸಿದ್ದರು. ಆನೆಯ ಮೇಲೆ ಕುಳಿತಿದ್ದ ಒಬ್ಬನಂತೂ ಕಬ್ಬಿಣದ ಬಟ್ಟೆಯನ್ನೇ ಧರಿಸಿದ್ದನು. ಸೂರ್ಯನ ಬೆಳಕು ಅದರ ಮೇಲೆ ಬಿದ್ದು , ಹೊಳೆಯುವಂತೆ ಮಾಡುತ್ತಿತ್ತು. ಆ ಗುಂಪು “ಬಾಬರ್ ಚಕ್ರವರ್ತಿ ಜಿಂದಾಬಾದ್” “ಅಲ್ಲಾ-ಹು-ಅಕ್ಬರ್” ಎಂದೆಲ್ಲಾ ಕೂಗುತ್ತಾ ಹತ್ತಿರ ಬರುತ್ತಿತ್ತು. ಆ ಗಲಾಟೆಗೆ ಹೆದರಿ ಮರದಲ್ಲಿದ್ದ ಹಕ್ಕಿಗಳೆಲ್ಲಾ ಗೂಡುಗಳನ್ನು ಬಿಟ್ಟು ಹಾರಿಹೋಗಿ, ತಮ್ಮ ಗೂಡುಗಳತ್ತ ಆ ಗುಂಪು ಗಮನಹರಿಸದಿರಲೆಂದು ಅವುಗಳೂ ಗಲಾಟೆ ಮಾಡತೊಡಗಿದವು. ಅವರ ಗಲಾಟೆಯಲ್ಲೇ ಮಗ್ನವಾಗಿದ್ದ ಆ ಗುಂಪಿಗೆ ಹಕ್ಕಿಗಳ ಗುಂಪಿನ ಗಲಾಟೆ ಗಮನಕ್ಕೇ ಬರಲಿಲ್ಲ.

ಆನೆಯ ಮೇಲೆ ಕುಳಿತಿದ್ದವನು, ಆ “ಬಾಬರ್ ಚಕ್ರವರ್ತಿ” ಯೇ ಆಗಿರಬೇಕು. ಆತ ಮರದ ಬಳಿ ಬಂದಾಗ, ಆನೆಯಿಂದಿಳಿದು ಅವನಂತೆಯೇ ಬಟ್ಟೆ ಧರಿಸಿದ್ದ ಕೆಲವರೊಂದಿಗೆ ಸ್ವಲ್ಪ ಹೊತ್ತು ಮಾತನಾಡಿದನು. ನಾನು ಕೋಪದಿಂದ ಒಂದು ದಪ್ಪ ಕಾಯನ್ನು ಅವನ ತಲೆಯ ಮೇಲೆ ಬೀಳುವಂತೆ ಮಾಡಿದೆ. ಅವನು ಸಮಧಾನದಿಂದಿದ್ದರೂ “ಹಾಯ್ ಅಲ್ಲಾ ! “ ಎಂದು ಗುಂಪಿನಿಂದ ಹಲವು ಧ್ವನಿಗಳು ಬಿಡಿಬಿಡಿಯಾಗಿ ಕೇಳಿಬಂದವು. ಅವನು ಮಾತ್ರ ಬೆದರದೆ, ನನ್ನನ್ನು ದಿಟ್ಟಿಸಿ ನೋಡಿ “ಈ ದೇಶದಲ್ಲಿ ಎಲ್ಲರೂ ನಮ್ಮ ಶತ್ರುಗಳು, ಎಚ್ಚರದಿಂದಿರಿ, ಎಲ್ಲಿಂದ ಮುಂದಿನ ಪ್ರಹಾರ ಬರುತ್ತದೋ ಗೊತ್ತಿಲ್ಲ” ಎಂದು ನಕ್ಕನು. ಅವನ ಮಾತು ಆ ಗುಂಪಿನಲ್ಲಿ ನಗೆಯ ಅಲೆಯನ್ನು ತರಿಸಿತು. ಅವನ ಮಾತನ್ನು ಕೇಳಿದವರು, ಕೇಳದಿದ್ದವರು ಎಲ್ಲರೂ ನಗುತ್ತಿದ್ದರು. ಅವನ ಮಾತಿನಲ್ಲಿ ನಗುವಂತಹ ವಿಚಾರವೇನೆಂದು ನನಗೆ ತಿಳಿಯಲಿಲ್ಲ.
ಬಹುಶಃ ಅವರಿಗೆಲ್ಲಾ ಅವನಿಂದೇನೋ ಪ್ರಯೋಜನವಿರಬೇಕು. ಅಷ್ಟು ಜನ ಒಬ್ಬ ವ್ಯಕ್ತಿಯನ್ನು ಸಂತೋಷಪಡಿಸಲು ಹಾತೊರೆಯುತ್ತಿರುವುದನ್ನು ಕಂಡು ನನಗೆ ಅಸೂಯೆಯಾಯಿತು.
ಸ್ವಲ್ಪ ವಿರಾಮದ ನಂತರ ಆ ಗುಂಪು ಮುಂದುವರೆಯಿತು. ಎಷ್ಟೋ ಜನ ನಾನು ಬೀಳಿಸಿದ್ದ ಕಾಯಿಗಳನ್ನು ಆರಿಸಿಕೊಂಡು ತಿನ್ನುತ್ತಾ ಮುಂದುವರೆದರು “
“ನನ್ನ ಪ್ರಾಣಕ್ಕೊದಗಿದ ಸಂಚಕಾರದಿಂದ ಪಾರಾದೆನೆಂಬ ಸಮಾಧಾನ, ಜೊತೆಗೆ ಸಂತೋಷದಿಂದ ಆ ಗುಂಪು ದೂರಸರಿಯುತ್ತಿರುವುದನ್ನು ನೋಡುತ್ತಾ ನಿಂತೆ.ನೀರಿನ ಹನಿಗಳೆಲ್ಲಾ ತಮ್ಮ ಸ್ವಂತಿಕೆಯನ್ನು ಬಿಟ್ಟು ಒಡಗೂಡಿ ಮೋಡವಾಗುವಂತೆ, ಆ ಗುಂಪಿನ ಆನೆ, ಕುದುರೆ ಮತ್ತು ಮನುಷ್ಯರು ಒಡಗೂಡಿ, ಅವರ ಬಿಡಿಚಿತ್ರಗಳೆಲ್ಲ ಮಾಯವಾಗಿ ಆಯುಧಗಳ ಕಾಡೊಂದು ಸೃಷ್ಟಿಯಾಯಿತು. ಅದರಿಂದ ಸ್ವಲ್ಪ ದೂರದಲ್ಲೇ ಮತ್ತೊಂದು ಆಯುಧಗಳ ಕಾಡು ನಿಂತಿತ್ತು.

ಇದ್ದಕ್ಕಿದ್ದಂತೆ, ಎರಡೂ ಕಾಡುಗಳಿಂದ ಬಿಡಿ,ಬಿಡಿಯಾಗಿ ಮನುಷ್ಯರು, ಕುದುರೆಗಳು ಹೊಮ್ಮತೊಡಗಿದರು. ಅವರೆಲ್ಲರೂ ಮತ್ತೊಂದು ಗುಂಪಿನ ಜನರೊಂದಿಗೆ ಹೊಡೆದಾಡತೊಡಗಿದರು. ನನ್ನ ಬಂಧುಗಳ ಅಂಗಗಳನ್ನು ಕತ್ತರಿಸಿದಂತೆ, ಅವರು ಮತ್ತೊಬ್ಬರ ಅಂಗಗಳನ್ನು ಕತ್ತರಿಸತೊಡಗಿದರು. ಕೆಂಪು ನೀರು ದೂರಕ್ಕೆ ಕಾಣುತ್ತಿತ್ತು.
ಮನುಷ್ಯರ ಆವೇಷದ ಕೂಗಾಟ, ಕುದುರೆಗಳ ಕೆನೆತ, ಆನೆಗಳ ಘೀಳಾಟ ದೂರದಲ್ಲಿದ್ದ ನನಗೇ ಕೇಳುತ್ತಿತ್ತು.
ಬಹಳ ಹೊತ್ತಿನ ಹೊಡೆದಾಟದ ನಂತರ ಒಂದು ಗುಂಪು ಅಲ್ಲಿಂದ ಓಡತೊಡಗಿತು.ನಾನು ಮೊದಲೇ ನೋಡಿದ್ದ ಗುಂಪಿನ ಜನರು, ಅವರ ಬೆನ್ನಟ್ಟಿ,ಎಷ್ಟೋ ಜನರನ್ನು ಹಿಡಿದು ಕತ್ತರಿಸಿದರು. ಕೆಲವರು ಮಾತ್ರ ತಪ್ಪಿಸಿಕೊಂಡರು . ಅವರೆಲ್ಲಾ ” ಪೂರ್ವಜನ್ಮದಲ್ಲಿ ಪುಣ್ಯ” ಮಾಡಿದ್ದ ವರಿರಬೇಕು. ಅವರ ಹಿಂಬಾಲಿಕೆಯನ್ನು ನಿಲ್ಲಿಸಿ ಆ ಗುಂಪು , ಮತ್ತೆ ಆಯುಧಗಳ ಕಾಡಾಯಿತು. ಮತ್ತೆ “ ಬಾಬರ್ ಚಕ್ರವರ್ತಿ ಜಿಂದಾಬಾದ್” ,” ಅಲ್ಲಾ-ಹು- ಅಕ್ಬರ್” ಎಂದು ಕೂಗತೊಡಗಿದರು.

“ ಕೆಲವರನ್ನು ಗಾಯಾಳುಗಳ ಶುಶ್ರೂಷೆಗೆ ಬಿಟ್ಟು , ಪೂರ್ವ ಜನ್ಮದಲ್ಲಿ ಪುಣ್ಯಮಾಡಿದ್ದವರು ಓಡಿಹೋದ ದಿಕ್ಕಿನಲ್ಲಿ ಆ ಗುಂಪು ಮುಂದುವರೆಯಿತು. ಅಲ್ಲೆ ಉಳಿದವರು ಒಂದು ದೊಡ್ಡ ಗುಂಡಿಯನ್ನು ತೆಗೆದು, ತಮ್ಮ ಗುಂಪಿನ ಸತ್ತವರನ್ನು ಮಾತ್ರ ಹೂಳತೊಡಗಿದರು. ಪ್ರಾಣ ಉಳಿಸುವಷ್ಟು ಸಮಯವಿಲ್ಲದವರನ್ನು ಅಲ್ಲೆ ಕೊಂದು ಹೂಳಿಬಿಡುತ್ತಿದ್ದರು. ಇದಾದ ನಂತರ ಸಾಧ್ಯವಾದಷ್ಟು ಗಾಯಾಳುಗಳನ್ನು ಹೊತ್ತು ಮಾಯವಾದರು. ತುಂಡರಿಸಿದ್ದ ಮನುಷ್ಯರ ದೇಹಗಳು ರಣಹದ್ದುಗಳಿಗೆ ಹೇರಳವಾಗಿ ಆಹಾರವಾದವು.ಅವುಗಳು ನನ್ನಲ್ಲೆ ತಂಗತೊಡಗಿದ್ದರಿಂದ , ಜೋಡಿಹಕ್ಕಿಗಳೆಲ್ಲ ಹೆದರಿ ದೂರವಾದವು. ಎರಡನೇ ಬಾರಿ, ಸಿಕ್ಕ ಅಲ್ಪ ಸಂತೋಷವು , ಮನುಷ್ಯರ ದೆಸೆಯಿಂದ ದೂರವಾಯಿತು. ಆದರೂ ಆ ಹೊಡೆದಾಟ ಕಂಡ ಮೇಲೆ ನನಗೆ ಮನುಷ್ಯರ ಮೇಲಿದ್ದ ಕೋಪವೆಲ್ಲ ತಣ್ಣಗಾಯಿತು. ತಮ್ಮ ಕುಲದವರನ್ನೇ ಹೀಗೆ ಕೊಲ್ಲುವಾಗ ಮರಗಳನ್ನು ಉಳಿಸಿಯಾರೆ ? ನಾನು ಹೂಬಿಡೂವುದನ್ನು ಹೇಗೆ ತಡೆಯಲಾಗುವುದಿಲ್ಲವೋ ಅಂತೆಯೆ ಮನುಷ್ಯರು ಹೊಡೆದಾಡುವುದನ್ನು ತಡೆಯಲಾಗುವುದಿಲ್ಲವೆನ್ನಿಸಿಬಿಟ್ಟಿತು. ಈಗಲೂ ನಿಮ್ಮ ಮೇಲೆ ಅದೇ ಧೋರಣೆಯಿದೆ.
ಎಷ್ಟೋ ದಾರಿಹೋಕರು ಆ ಘಟನೆಯನ್ನು “ಯುದ್ಧ” ವೆಂದು ಕರೆಯುವುದುಂಟು “ ಎಂದು ಹೇಳಿ ಸುಮ್ಮನಾಯಿತು.

(ಯುದ್ಧದ ವಿಚಾರವನ್ನು ಕೇಳಿದೊಡನೆ ಅಲ್ಲಿದ್ದ ಬಹುತೇಕ ಮಂದಿ ಮರದ ಮಾತುಗಳು ಮುಗಿಯುವ ಮುನ್ನವೇ ಮಾಯವಾಗಿದ್ದರು. ಒಬ್ಬ ಮಾತ್ರ ಅದರ ಮಾತುಗಳಲ್ಲಿ ಉತ್ಸುಕನಾಗಿ ನಿಂತಿದ್ದನು.)

ಆ ದಾರಿಹೋಕನು “ಯುದ್ಧ ಆರಂಭವಾದ ಸುದ್ದಿ ಕೇಳಿದ್ದೇನೆ. ಇಂದು ಇಲ್ಲಿ ಕಾದಡುತ್ತಿರುವುದು, ಇನ್ಯಾರೂ ಅಲ್ಲ , ಅಂದು ನೀನು ನೋಡಿದ ಆ ಬಾಬರ್ ಚಕ್ರವರ್ತಿಯ ಮೊಮ್ಮಗನ ಸೈನ್ಯ ? ಗೊತ್ತಾ? “ ಎಂದನು

(ಮರದ ಉತ್ತರಕ್ಕೆ ಕಾಯದೆ, ಮಾತು ಮುಂದುವರೆಸುತ್ತಾ)

“ ಹುಮಾಯೂನನ ಹಠಾತ್ ಮರಣದ ನಂತರ ಆ ಹಸುಗೂಸನ್ನು ಸಿಂಹಾಸನದ ಮೇಲೆ ಕೂರಿಸಿ, ರಾಜ್ಯಭಾರವನ್ನೆಲ್ಲಾ ಅವನ ಮಾವ ಬೈರಾಮ್ ಖಾನನು ನೋಡಿಕೊಳ್ತಾ ಇದ್ದಾನೆ. ಮೊಗಲರ ಹುಟ್ಟಡಗಿಸಬೇಕೆಂದು ಕಾಯುತ್ತಿದ್ದ ಹೇಮುವಿಗೆ ಇದು ಸರಿಯಾದ ಸಮಯವೆನ್ನಿಸಿ ಅವರ ಮೇಲೆ ದಂಡೆತ್ತಿ ಬಂದಿದ್ದಾನೆ. ಆದ್ರೆ ಪಾಣಿಪಟ್ ನಲ್ಲಿ ಕಾದಾಡುವಷ್ಟು ಧೈರ್ಯ ಮೊಗಲರಿಗೆ ಹೇಗೆ ಬಂತು ? ಸ್ವಲ್ಪ ಆಶ್ಚರ್ಯವೇ ಆಗ್ತಾಯಿದೆ ! ಹೇಮುವಿನ ಸೈನ್ಯದಲ್ಲಿ ೧೫೦೦ ಆನೆಗಳಿವೆ, ಜೊತೆಗೆ ಅವನ ಸೈನ್ಯವು ಮೊಗಲರಿಗಿಂತ ದುಪ್ಪಟ್ಟಿದೆ ಎಂಬ ಸುದ್ದಿ ಕೇಳಿದ್ದೇನೆ. “ ಎಂದು ದೂರದ ಯುದ್ಧಭೂಮಿಯನ್ನು ದಿಟ್ಟಿಸುತ್ತಾ ನುಡಿದನು.

“ ಏನು ? ಯುದ್ಧ ಪ್ರಾರಂಭವಾಗಿದೆಯೇ ? ಮತ್ತೆ ಜನರ ಗುಂಪುಗಳೇ ಕಾಣಿಸುತ್ತಿಲ್ಲ ? “ ಎಂದು ಮರವು ಪ್ರಶ್ನಿಸಿತು.
(ದಾರಿಹೋಕನು ಒಮ್ಮೆ ನಕ್ಕನು)
“ ಹೇಮು ಆಗಲೇ ಮೊಗಲ್ ಸೈನ್ಯವನ್ನು ಎಷ್ಟೋ ಕಡೆ ಹಿಮ್ಮೆಟ್ಟಿಸಿದ್ದಾನೆ, ಈಗ ನಡೆಯುವುದೇನಿದ್ದರೂ ಕೊನೆಯ ಯುದ್ಧ , ಮೊಗಲ ಸಂತತಿಯ ಅಳಿವು-ಉಳಿವುಗಳನ್ನು ನಿರ್ಧರಿಸುವ ಯುದ್ಧ. ನಾನು ಇಲ್ಲಿಯವರೆಗೆ ಯುದ್ಧವನ್ನು ಕಣ್ಣಾರೆ ನೋಡಿಲ್ಲ, ನೀನು ಅವಕಾಶಕೊಟ್ಟರೆ ಕೊಂಬೆಯೊಂದರ ಮೇಲೆ ಕುಳಿತು, ಎಲೆಮರೆಯಿಂದ ಯುದ್ಧವನ್ನು ನೋಡುತ್ತೇನೆ”
(ಮರದ ಸಮ್ಮತಿ ಪಡೆದು , ದಾರಿಹೋಕನು ಮರವೇರಿ ಎಲೆಮರೆಯಲ್ಲಿ ಕುಳಿತು, ಯುದ್ಧಭೂಮಿಯೆಡೆಗೆ ನೋಟ ಬೀರುತ್ತಾ ಮೌನವಾಗುತ್ತಾನೆ. ಸ್ವಲ್ಪ ಹೊತ್ತಿಗೆ ಆಯಾಸದಿಂದ ನಿದ್ದೆಹೋಗುತ್ತಾನೆ)

“ಏಳು, ಏಳು, ಅಲ್ಲಿ ನೋಡು , ಆಗಲೇ ಒಂದು ಗುಂಪು ಬಂದಾಗಿದೆ ”

(ಕೊಂಬೆಗಳನ್ನು ಅಲ್ಲಾಡಿಸುತ್ತಾ ಮರವು ದಾರಿಹೋಕನನ್ನು ಎಬ್ಬಿಸುತ್ತದೆ)

“ಕುದುರೆಯ ಮೇಲೆ ಕುಳಿತ ಒಬ್ಬ ವ್ಯಕ್ತಿ ಬೊಬ್ಬೆಹೊಡೆಯುತ್ತಾ ಎಡಬಿಡದೆ ಒಂದು ತುದಿಯಿಂದ, ಇನ್ನೊಂದೆಡೆಗೆ ಓಡಾಡುತ್ತಿದ್ದಾನೆ. ಆಗಲೇ ನಾಲ್ಕು ಬಾರಿ ಗುಂಪಿನ ರಚನೆ ಬದಲಿಸಿದ್ದಾಯಿತು”

(ದಾರಿಹೋಕನು ಎಚ್ಚರವಾಗುತ್ತಾನೆ)

“ ಓ ! ಆಗಲೇ ಮೊಗಲ್ ಸೈನ್ಯ ಬಂದುಬಿಟ್ಟಿದೆ.ಅವರ ಕುದುರೆಗಳನ್ನು ಎಲ್ಲಿಬೇಕಾದರೂ, ಎಷ್ಟು ದೂರಿದಿಂದಾದರೂ ಪತ್ತೆ ಹಚ್ಚಬಹುದು. ಅವರ ಸೈನ್ಯದಲ್ಲಿ ಬೇರೆಯವರ ಸೈನ್ಯಕ್ಕಿಂತ ವಿಭಿನ್ನ. ಆನೆಗಳ ಮೇಲೆ ಅವರಿಗೆ ಹೆಚ್ಚಾಗಿ ನಂಬಿಕೆಯಿಲ್ಲ, ಕುದುರೆಗಳು, ಬಿಲ್ಲುಗಾರರೇ ಹೆಚ್ಚಾಗಿ ಕಂಡುಬರೋದು”

(ಬೈರಾಮ ಖಾನನ ಹುರುಪನ್ನೂ , ಚಾಕಚಕ್ಯತೆಯನ್ನು ಮರವು ತೀಕ್ಷ್ಣ ವಾಗಿ ಗಮನಿಸುತ್ತಿತ್ತು)
“ಇಂಥವನೊಬ್ಬ ನಮ್ಮಲ್ಲೊಬ್ಬನಿದ್ದಿದ್ದರೆ ನಮ್ಮನ್ನು ಕೊಲ್ಲಲು ಬಂದ ಗುಂಪಿಗೆ ಒಳ್ಳೆ ಪ್ರತಿರೋಧವನ್ನೇ ಒಡುತ್ತಿದ್ದೆವು” ಎಂದು ಅವನನ್ನು ಪ್ರಶಂಸಿಸುತ್ತಾ ಮರವು ಹೇಳಿತು.

“ಅಲ್ಲಿ ನೋಡು ಹೇಮುವಿನ ಸೈನ್ಯ ನಡೆದು ಬರುತ್ತಿದೆ. ಅಬ್ಬ ! ಹೇಮು ಕುಳಿತಿರುವ ಆನೆ ಎಷ್ಟು ಎತ್ತರವಾಗಿದೆ. ಆನೆಗಳ ಗುಂಪಿನ ಮಧ್ಯದಲ್ಲಿದ್ದರೂ ಅವನು ಎದ್ದು ತೋರುತ್ತಿದ್ದಾನೆ. ಗೆಲ್ಲುವೆನೆಂಬ ಆತ್ಮವಿಶ್ವಾಸ , ಅವನ ದೇಹವನ್ನು ಕಂಬದಂತೆ ನೆಟ್ಟಗೆ ನಿಲ್ಲುವಂತೆ ಮಾಡಿದೆ” ಎಂದು ಹೇಮುವಿದ್ದ ಆನೆಗಳ ಗುಂಪಿನೆಡೆಗೆ ಕೈಮಾಡಿ ತೋರಿಸಿದನು.

“ ಈ ಆತ್ಮವಿಶ್ವಾಸ ಅಂದರೇನು ?” ಎಂದು ಮರವು ದಾರಿಹೋಕನನ್ನು ಪ್ರಶ್ನಿಸಿತು.

“ಸ್ವಲ್ಪ ಸೂಕ್ಷ್ಮವಾಗಿ ಗಮನಿಸು, ಬೈರಾಮ್ ಖಾನನು ಮುಖದಲ್ಲಿ ಸಮಾಧಾನ ಭಾವವಿದ್ದರೂ, ಅವನ ಕೈಗಳು ಅದುರುತ್ತಿವೆ. ಜೀನಿನ ಹಿಡಿತ ಆಗ್ಗಿಂದಾಗ್ಗೆ ತಪ್ಪಿ, ಕುದುರೆಯು ಸೊಟ್ಟ ಸೊಟ್ಟ ಹಾದಿಯಲ್ಲಿ ನಡೆದಾಡುತ್ತಿದೆ. ಸೋಲಿನ ಅಳುಕು ಅವನನ್ನು ಕಾಡುತ್ತಿದೆ. ಅದೇ ಹೇಮುವನ್ನು ನೋಡು , ಶರೀರವು ಅಲುಗಾಡುತ್ತಿಲ್ಲ , ಗೆಲುವು ನಿಶ್ಚಿತವೆಂದು, ಒಮ್ಮೊಮ್ಮೆ ನಗುತ್ತಿದ್ದಾನೆ. “

( ಸೈನ್ಯಗಳೆರಡೂ ಮತ್ತೆ ಆಯುಧಗಳ ಕಾಡಾಗಿ, ಮತ್ತೆ ಬಿಡಿಬಿಡಿಯಾಗಿ, ಕಾದಾಟ ಆರಂಭವಾಗುತ್ತದೆ. ಎದುರು ನಡೆಯುತ್ತಿದ್ದ ಕಾಳಗವನ್ನು ನೋಡುತ್ತಾ ಮರ ಮತ್ತು ದಾರಿಹೋಕನು ಬಾಯಿಗೆ ಬೀಗಹಾಕಿದವರಂತೆ ಸೊಲ್ಲೆತ್ತದೆ ನೋಡುತ್ತಿರುತ್ತಾರೆ. ಅದೆ ರಕ್ತದೋಕುಳಿ, ಅದೇ ಆವೇಷದ ಕೂಗಾಟ. )

ಹೇಮುವಿನ ಸೈನ್ಯ ಮೊಗಲ್ ಸೈನ್ಯವನ್ನು ಹಿಂದೂಡಲು ಪ್ರಾರಂಭಿಸಿದಾಗ “ಇನ್ನು ಮೊಗಲರ ಕಥೆ ಮುಗಿಯಿತು.ಆನೆಗಳು ಮುನ್ನುಗ್ಗಿದರೆ ಬೈರಾಮ್ ಖಾನನು ಹೆದರಿ ಓಡುತ್ತಾನೆ” ಎಂದು ದಾರಿಹೋಕನು ತನ್ನ ಯುದ್ಧಪಾಂಡಿತ್ಯ ಪ್ರದರ್ಶಿಸತೊಡಗಿದನು. ಆದರೆ ಮರವು ಅದಕ್ಕೆ ಬೆಲೆಕೊಡದೇ ಯುದ್ಧವನ್ನು ನೋಡುತ್ತಿತ್ತು.

ಯುದ್ಧದಲ್ಲಿ, ಗುರಿಯಿಲ್ಲದೆ ಹಾರಿಬಿಟ್ಟ ಬಾಣವೊಂದು ಆನೆಯ ಮೇಲಿದ್ದ ಹೇಮುವಿನ ಕಣ್ಣಿಗೆ ತಾಗಿ, ರಕ್ತದ ಧಾರೆ ಹರಿಯತೊಡಗಿ, ಮೂರ್ಛೆಹೋಗುತ್ತಾನೆ. ದಂಡನಾಯಕರು ತಮ್ಮ ಯುದ್ಧ ರಚನೆಗಳನ್ನೆಲ್ಲ ಮರೆತು ಹೇಮು ರಕ್ಷಣೆಗೆ ನಿಲ್ಲುತ್ತಾರೆ.

“ ಅಬ್ಬಾ ! ಯುದ್ಧ ಎಷ್ಟು ಬೇಗ ತಿರುಗಿಬಿಟ್ಟಿತು. ಹೇಮುವಿನ ಸೈನ್ಯ ಹೆದರಿದಂತಿದೆ. ಅವನು ಸತ್ತನೆಂದು ಸೈನ್ಯದಲ್ಲಿ ಗುಲ್ಲೆದ್ದಿರಬೇಕು.ಆ ದಂಡನಾಯಕರೋ ದಡ್ಡ ಶಿಖಾಮಣಿಗಳು, ಸೈನ್ಯವನ್ನು ಸಾಂತ್ವನಗೊಳಿಸದೇ ಹೇಮುವಿನ ಬಳಿ ನಿಂತಿದ್ದಾರೆ “ ಎಂದು ಎತ್ತರದ ಧ್ವನಿಯಲ್ಲಿ ಮಾತನಾಡುವಾಗ ಅವನ ಮಾತುಗಳು ಯುಕ್ತಿಯ ಗೋಡೆಗಳನ್ನು ಲೆಕ್ಕಿಸದೇ, ಸ್ವಚ್ಛಂದವಾಗಿ ಹರಿದಾಡುತ್ತಿರುತ್ತದೆ.

ಹಿಂದೂಡಲ್ಪಡುತ್ತಿದ್ದ ಮೊಗಲ್ ಸೈನ್ಯ ಆತ್ಮವಿಶ್ವಾಸದ ಸಂಚಾಲನವಾಗಿ, ಹೇಮುವಿನ ಪದಾತಿದಳದತ್ತ ವೇಗವಾಗಿ ಮುನ್ನುಗ್ಗಿ ಅವರನ್ನು ಚಂಡಾಡತೊಡಗಿದರು.ಹೆದರಿದರ ಪದಾತಿಸೈನ್ಯ ಕಂಗೆಟ್ಟು ಓಡತೊಡಗಿತು.

“ಇನ್ನು ಹೇಮು ಕಥೆ ಮುಗಿಯಿತು.ಆ ಚುರುಕಾದ ಕುದುರೆ ಸೈನ್ಯವನ್ನು ಆನೆ ಮೇಲಿರುವವರು ಹೇಗೆ ತಾನೆ ಎದುರಿಸಿಯಾರು ?” ಎನ್ನುತ್ತಾ ಕೊಂಬೆಯ ಮೇಲೆ ಸರಿದಾಡಿದ್ದರಿಂದ ಇನ್ನೇನು ಆಯತಪ್ಪಿ ಬೀಳುವಂತಾದರೂ, ಪ್ರಾಣಭೀತಿಯ ಅರಿವಾದೊಡನೆ, ತಾರಕಕ್ಕೇರಿದ ಅವನ ಧ್ವನಿಯಲ್ಲಿ ಸಂಯಮ ಕಾಣಿಸಿಕೊಂಡು ಮರದಂತೆ ಮತ್ತೆ ಮೂಕಪ್ರೇಕ್ಷಕನಗುತ್ತಾನೆ.

ದಾರಿಹೋಕನು ಊಹಿಸಿದಂತೆ ಮಿಂಚಿನ ವೇಗದಲ್ಲಿ ಸಂಚರಿಸುವ ಅಶ್ವದಳದ ಮುಂದೆ ಗಜಸೈನ್ಯವು ಅಶಕ್ತವಾಯಿತು. ಹೇಮುವನ್ನು ಕಾಪಾಡಲು ಪಟ್ಟಪ್ರಯತ್ನಗಳೆಲ್ಲ ವ್ಯರ್ಥವಾಗಿ, ಮೊಗಲರು ಅವನ ಶವವು ಸಿಕ್ಕಿ ಅದನ್ನು ಅಕ್ಬರ್ ಆಸ್ಥನಕ್ಕೆ ಎಳೆದೊಯ್ಯುತ್ತಾರೆ.

ವೈರಿ ಪಡೆ ಪಲಾಯನದ ನಂತರ “ ಅಲ್ಲಾ-ಹು-ಅಕ್ಬರ್” ಘೋಷಣೆಗಳ ತೆರೆಮರೆಯಲ್ಲಿ “ ಜೈ ಭಜರಂಗ ಬಲಿ”
ಘೋಷಣೆಗಳೂ ಕೇಳಿಬರುತ್ತವೆ.

“ನೋಡಲ್ಲಿ ಮತ-ಧರ್ಮದ ಹೆಸರಲ್ಲಿ ಕಚ್ಚಾಡುವ ಜನರು ಇಂದು ಒಡಗೂಡಿ ಘೋಷಣೆಗಳನ್ನು ಕೂಗುತ್ತಿದ್ದಾರೆ. ಎಂತಹ ವಿಚಿತ್ರ ?” ಎಂದು ದಾರಿಹೋಕನು ನುಡಿದನು.

“ ಮತವೆಂದರೇನು ? ಧರ್ಮ ವೆಂದರೇನು ?” ಎಂದು ಮರವು ಪ್ರಶ್ನಿಸಿತು.

“ಈ ಪ್ರಶ್ನೆಗೆ ನನ್ನ ಬಳಿ ಉತ್ತರವಿಲ್ಲ, ಜೊತೆಗೆ ಸಮಯವೂ ಇಲ್ಲ. ಕತ್ತಲಾಗುತ್ತಿದೆ. ಆದರೆ ಹೋಗುವ ಮುನ್ನ ಒಂದು ಮಾತು, ಮನುಷ್ಯರೆಲ್ಲಾ ಹೊಡೆದಾಡುತ್ತಾರೆ ನಿಜ, ಇನ್ನೂ ನಿನ್ನ ಜೀವಿತದಲ್ಲಿ ಇದೇ ಭೂಮಿಯಲ್ಲಿ ಸಾಕಷ್ಟು ಹೊಡೆದಾಟವನ್ನು ನೋಡಬಹುದು, ಅದಕ್ಕೆ ದುರಾಸೆ ಕಾರಣವಾಗಿರಬಹುದು , ಒಮ್ಮೊಮ್ಮೆ ಶಾಂತಿ ನೆಲೆಸಲು ಹೊಡೆದಾಡಬೇಕಾಗುವುದು. ಆದರೆ ಹೊಡೆದಾಟ ಮನುಷ್ಯನ ಮನೋಧರ್ಮವಲ್ಲ “. ಎಂದು ಹೇಳಿ ಕೊಂಬೆಯಿಂದ ಜಾಗರೂಕನಾಗಿ ಇಳಿದು ನಡೆದುಹೋದನು.

ಮತ್ತೊಂದು ಯುದ್ಧಕ್ಕೆ ಕಾಯುತ್ತಾ ಮರವು ಅಲ್ಲಿ ಉಳಿಯಿತು. ಪಾಣಿಪಟ್ ರಣರಂಗವನ್ನು ಒಂಟಿತನ ಮತ್ತು ರಣಹದ್ದುಗಳು ಮತ್ತೆ ಆವರಿಸಿದವು.

0 Comments:

Post a Comment

<< Home