ಕವಿಸಮಯ

ಕಾಳನ್ನೆಲ್ಲವ ಪಡೆದು ಜಳ್ಳನ್ನೆಲ್ಲವ ತೂರಿಬಿಡಿ, ಎಲ್ಲವೂ ಜಳ್ಳಾದಲ್ಲಿ ಬರೆದವನ ಪೊಳ್ಳೆನ್ನದಿರಿ

Wednesday, January 14, 2009

Life of Pi - A review

This isn't much of a review of a book, but personal ramblings about it. Sometimes you come across a book that makes your thoughts burst out, whose weight can only be relieved by expressing them. The problem is expressing them orally is hard labor considering that it requires a lot of empathy on the listener to bear them. So i channel my words through one of the most primitive forms of expression: writing.
I picked up this book, "life of Pi" quite accidentally and remained in cold storage for long time. Somehow everytime i saw the book, i said to myself reading an adventure tale was not the thing i needed at that time. I started reading the book, when i was "free" by that i mean i had nothing to do and could not think of anything to be done.

The book starts as an innocuous adventure tale where a zookeeper's son is a castaway in the pacific along with zebra with broken leg, hyaena, orangutan and a bengal tiger, but turns out to be much more than that. The reader is engaged by the writer in a tale of survival where he describes brilliantly the thoughts of solitude, grit and endurance, and ,also bored by the laborious details which describe the boat, the anatomy of various animals and the writer's personal thoughts on them.The encounters with the sea animals and their hunting, though initially very interesting become a bit boring and I at some stage ended up saying "Oh god, not another dorado". The taming of the tiger is a intriguing part of the story.The encounters continue to get incredulous by the day (btw the protagonist survives for 227 days on the pacific) with meerkats in a carnivorous island of algae . I guess you have to put up with it, as this is a story based on "magical realism" a.k.a. a genre where the writer requests the reader to put up with all the crap he has written, with a promise that there will be something good in the end. In that sense, "life of Pi" is indeed a "story of magic realism" where suddenly towards the end, the story comes alive with philosophical overtones. I guess the book isn't an authentic peek into the soul of the protagonist but a craftily knit story with a refreshing plot.
The book starts narrating the story with a promise that "it will make a believer out of you". Left to my conjecture the book is an elaborate statement of Kant's philosophy i.e. faith is the failsafe for reason. I am left with a line in my mind which is quite profound in the context of the book .
" So, you want a story with animals or without animals ?"
Well, if someone asked me "do you think this book was worth the Booker ?" i would shrug my shoulders and reply "was this the best they got at that time ?"

Thursday, June 22, 2006

ಪವಾಡ

ನೆತ್ತಿಯ ಮೇಲೆ ಕೈಯಿಟ್ಟು ದೂರ ದಿಗಂತದೆಡೆಗೆ ಕಣ್ಣು ಹಾಯಿಸಿದಾಗ , ನದಿಯ ಅಲೆಯೊಂದು ಮಂದಗತಿಯಲ್ಲಿ ಸಾಗಿಬರುತ್ತಿರುವಂತೆ ಕಾಣುತ್ತಿತ್ತು.ಸ್ವಲ್ಪ ಎತ್ತರಕ್ಕೆ ಏರಿ ಸೂಕ್ಷ್ಮವಾಗಿ ಗಮನಿಸಿದರೆ, ಆನೆಗಳು, ಕುದುರೆಗಳು ಮತ್ತು ಮನುಷ್ಯರು ಸಾಗರೋಪಾದಿಯಾಗಿ ಜೊತೆಗೂಡಿ ಬರುತ್ತಿರುವುದು ಕಾಣುತ್ತಿತ್ತು. ನಿಸ್ಸಂಶಯವಾಗಿ ಅದು ಮೌರ್ಯ ಸಾಮ್ರಾಜ್ಯದ ಸೈನ್ಯವಾಗಿತ್ತು.
ಆ ಅಲೆಯನ್ನು ಕಂಡ ಕಣ್ಣುಗಳು , ಅದರ ವಿರಾಠಸ್ವರೂಪವನ್ನು ಕಂಡು,ಬೆರಗಾಗಿ ಅದರ ವೈಶಾಲ್ಯತೆಗೆ ,ಶಕ್ತಿಗೆ, ತಲೆದೂಗಲಿಲ್ಲ.ಏಕೆಂದರೆ ಅದನ್ನು ನೋಡುತ್ತಿದ್ದ ಕಣ್ಣುಗಳು, ಸಾಗಿಬರುತ್ತಿರುವ ಮೃತ್ಯುವನ್ನು ಕಾಣುತ್ತಿರುವ ಕಳಿಂಗ ಸೈನ್ಯದ ಕಣ್ಣುಗಳಾಗಿದ್ದವು.
ಅಶೋಕನು ಕಳಿಂಗದ ಮೇಲೆ ದಂಡೆತ್ತಿ ಬಂದಿದ್ದ, ಮೌರ್ಯ ಸಮ್ರಾಜ್ಯ ಪಶ್ಚಿಮದ ಗಾಂಧಾರದ ಪರ್ವತಗಳಿಂದ , ಪೂರ್ವದ ಕರಾವಳಿಯವರೆಗೆ ಹಬ್ಬಿರಬೇಕೆಂಬ ಅವನ ಮಹತ್ವಾಕಾಂಕ್ಷೆ ಕೈಗೂಡುವುದರಲ್ಲಿತ್ತು.

ದೊಡ್ಡ ಅಲೆಯ ಮುಂದೆ ಬಿರುಕಿನ ಮಣ್ಣುಗೋಡೆಯಂತೆ ನಿಂತಿದ್ದ ಕಳಿಂಗ ಸೈನ್ಯದಲ್ಲಿ ಅಲ್ಲಲ್ಲಿ ಗದ್ದಲ ಕೇಳಿಬರುತ್ತಿತ್ತು.ಸುಮ್ಮನೆ ಅಶೋಕನಿಗೆ ಶರಣಾಗದೆ ತಮ್ಮನ್ನೆಲ್ಲಾ ಮೃತ್ಯುಕೂಪಕ್ಕೆ ತಳ್ಳಿರುವ ರಾಜನ ಬಗ್ಗೆ ಕೋಪಗೊಂಡು ಕೆಲವರು ಗೊಣಗಾಡುತ್ತಿದ್ದರು.ಅದು ದಂಡನಾಯಕರ ಕಿವಿಗೆ ಬಿದ್ದು , ಅವರನ್ನೆಲ್ಲಾ ಗದರಿಸತೊಡಗಿದರು. ಗೊಣಗುತ್ತಿದ್ದವರು ಸ್ವಲ್ಪ ಹೊತ್ತು ಸುಮ್ಮನ್ನಿದ್ದು , ಮತ್ತೆ ಗೊಣಗಾಟ ಪ್ರಾರಂಭಿಸುತ್ತಿದ್ದರು.
ಮತ್ತೊಂದೆಡೆ ರಣರಂಗದಲ್ಲಿ ತೋರಬೇಕಾದ ಶೌರ್ಯದ ಬಗ್ಗೆ, ತಾಯ್ನಾಡಿಗಾಗಿ ತಮ್ಮ ಪ್ರಾಣವನ್ನು ತೆತ್ತ ಯೋಧರ ಬಗ್ಗೆ ಹಾಡುಗಳನ್ನು ಹಾಡಿ ಸೈನ್ಯವನ್ನು ಹುರಿದುಂಬಿಸುವ ಪ್ರಯತ್ನ ನಡೆಯುತ್ತಿತ್ತು.ಕೆಲವರು ಅವುಗಳನ್ನು ಕೇಳಿದೊಡನೆ ಉದ್ರೇಕಗೊಂಡು, ವೀರರಸದ ಮತ್ತೇರಿ, ಕೂಗುತ್ತಿದ್ದ ಜಯಕಾರದ ಆರ್ಭಟ ದೂರಕ್ಕೆ ಕೇಳುತ್ತಿತ್ತು. ಇನ್ನು ಕೆಲವರಿಗೆ ಅವೆಲ್ಲಾ ಗಾಳಿಮಾತೆಂದೆನಿಸಿ , ಆ ಕವಿತೆಗಳನ್ನು ಬರೆದವರನ್ನು, ಅವುಗಳನ್ನು ಹಾಡುತ್ತಿರುವವರನ್ನು , ಸಾಗಿಬರುತ್ತಿರುವ ಸೈನ್ಯವು ಕಾಣುವಂತೆ ನಿಲ್ಲಿಸಿದಾಗಲೇ, ಅವರಿಗೆ ಯುದ್ಧದ ನಿಜ ಸಂಗತಿ ತಿಳಿಯುತ್ತದೆ.ಯುದ್ಧಮಾಡುವುದು ಎಲುಬಿಲ್ಲದ ನಾಲಿಗೆ ತಿರುಚಿದಷ್ಟು ಸುಲಭವಲ್ಲವೆಂದು ಆ ಮಂಕುದಿಣ್ಣೆಗಳಿಗೆ ಯಾರಾದರೂ ಹೇಳಬಾರದೇ ? ಎಂದು ಮನಸ್ಸಿನಲ್ಲೇ ಗುಡುಗುತಿದ್ದರು.
ಈ ಎಲ್ಲ ಗದ್ದಲಗಳ ನಡುವೆ ಕೆಲವರು ಬಾಣದಂತಹ ನೋಟವನ್ನು ಶತ್ರುವಿನೆಡೆಗೆ ನೆಟ್ಟು, ಅಕ್ಕಪಕ್ಕದವರ ಗಲಾಟೆಗಳ ಪರಿವಿಲ್ಲದೆ ಮೂಕರಾಗಿ, ಕಿವುಡರಾಗಿ ನಿಂತಿದ್ದರು. ಮೃತ್ಯುವಿನ ಭಯ ಶರೀರದ ಕಣಕಣವನ್ನಾವರಿಸಿತ್ತು. ಆದರೆ ರಣರಂಗದಿಂದ ಹಿಮ್ಮೆಟ್ಟಲು ಯಾರಿಗೂ ಮನಸ್ಸಿರಲಿಲ್ಲ.ಮನಸ್ಸಿನ ಮೂಲೆಯೊಂದರಲ್ಲಿ , ದಾಸ್ಯದ ಸಂಕೋಲೆ, ತಮ್ಮ ಮನೆ-ಸಂಸಾರಗಳ ಬಗ್ಗೆ ಶತ್ರುವಿನ ಧೋರಣೆಗಳು ನೆನಪಾದಾಗ, ಭಯವೆಲ್ಲ ಮಾಯವಾಗಿ ಮನಸ್ಸು ಸೆಟೆದು ನಿಲ್ಲುತ್ತಿತ್ತು. ಆದರೆ ವೈರಿಪಡೆಯನ್ನು ಮತ್ತೆ ಕಂಡೊಡನೆ ಅಳುಕಿನಿಂದ ತುಂಬಿಹೋಗುತ್ತಿತ್ತು.
ಹಲವರು ತಮ್ಮ ಜೀವಿತದಲ್ಲಿನ ಪಾಪ-ಪುಣ್ಯಗಳ ,ದಾನ-ಧರ್ಮಗಳ ಲೆಕ್ಕಾಚಾರಹಾಕತೊಡಗಿದರು.ತಮಗೆ ಸ್ವರ್ಗ ಸಿಕ್ಕುವುದೋ ? ಅಥವ ನರಕಕ್ಕೆ ದೂಡಲ್ಪಡುವೆವೋ ? ಎಂಬ ಚಿಂತೆ ಮನಸ್ಸನ್ನು ಕಾಡುತ್ತಿತ್ತು.ಪಾಪ ಪುಣ್ಯಗಳ ಎಣಿಕೆಮಾಡಲು ಶಕ್ತಿಯೇ ಇಲ್ಲದಂತಾಯಿತು. ನಾಸ್ತಿಕರೂ ಆಸ್ತಿಕರಾಗಿ ದೇವರನ್ನು ನೆನೆಯುತ್ತಿದ್ದರು.

ಸಾಗಿಬರುತ್ತಿರುವ ಮೌರ್ಯ ಸೈನ್ಯದಲ್ಲಿ ಬೇರೆ ತರಹದ ಗೊಣಗಾಟಗಳಿದ್ದವು.ಹಿಂದಿನ ಯುದ್ಧದಲ್ಲಿ ಉಳಿಯಿತೋ ಬಡಜೀವ ಎನ್ನುವಷ್ಟರಲ್ಲಿ ಮತ್ತೊಂದು ಎದುರಾಗಿದೆಯಲ್ಲಾ ಎಂಬ ಚಿಂತೆ ಅವರನ್ನೆಲ್ಲಾ ಕುಟುಕುತ್ತಿತ್ತು.ಅಶೋಕನಿಗೆ ಸಾಮ್ರಾಜ್ಯ ವಿಸ್ತರಣೆಯಿಂದ ಸಿಕ್ಕುವುದಾದರೂ ಏನು ? ಎಂಬ ಪ್ರಶ್ನೆ ಕೆಲವರಲ್ಲಿ ಉದ್ಭವಿಸಿದ್ದರೂ, ಅಶೋಕನನ್ನು ಬಹಿರಂಗವಾಗಿ ಕೇಳುವ ಧೈರ್ಯ ಯಾರಿಗೂ ಇರಲಿಲ್ಲ. ಸಿಂಹಾಸನದ ಆಸೆಗಾಗಿ ತನ್ನ ಅಣ್ಣತಮ್ಮಂದಿರನ್ನೇ ಕೊಲ್ಲಿಸಿದವನಿಗೆ ನಾವು ಯಾವ ಲೆಕ್ಕ ? ಎಂಬ ಯೊಚನೆ ಬುದ್ಧಿಗೆ ಎದುರಾಗಿ, ಹೇಳಬಯಸಿದ ಮಾತು ಗಂಟಲಿನಲ್ಲೇ ನಿಲ್ಲುತ್ತಿತ್ತು.
ದೇಹದ ಭಾರವಲ್ಲದೆ , ಯೋಚನೆಗಳ ಭಾರವನ್ನು ಹೊತ್ತ ಕಾಲುಗಳು ಮಂದಗತಿಯಲ್ಲಿ ಒಂದನ್ನೊಂದು ಹಿಂದೆಹಾಕುತ್ತಿದ್ದವು.ದೂರದಿಂದ ಮಣ್ಣಿನ ಗೋಡೆಯಂತೆ ಕಾಣುತ್ತಿದ್ದ ಕಳಿಂಗ ಸೈನ್ಯದಲ್ಲಿ ಈಗ ಮನುಷ್ಯರ ಆಕೃತಿಗಳು ಕಾಣತೊಡಗಿದವು. ಯುದ್ಧದ ಪ್ರಾರಂಭ ಸನ್ನಿಹಿತವಾಗಿತ್ತು.ಸ್ವಲ್ಪ ಹೊತ್ತು ಯುದ್ಧಭೂಮಿಯಲ್ಲಿ ಸ್ಮಶಾನ ಮೌನ ಆವರಿಸಿತು. ಅದು ಯುದ್ಧಭೂಮಿ ಸ್ಮಶಾನವಾಗುವ ಮುಂಚಿನ ಮೌನ.

ರಣಕಹಳೆಗಳು ಮೊಳಗಲ್ಲಿಲ್ಲ, ಕಳಿಂಗ ಸೈನ್ಯದ ಬಿಲ್ಲುಗಾರರ ಬಾಣಗಳು ಮೌರ್ಯ ಸೈನಿಕರ ಎದೆಯನ್ನು ಚೀರಿದಾಗಲೇ ಅವರಿಗೆ ಯುದ್ಧ ಪ್ರಾರಂಭವಾಗಿರುವ ಸೂಚನೆ ದೊರೆತದ್ದು. ಹಠಾತ್ ಧಾಳಿಯಿಂದ ಚೇತರಿಸಿಕೊಂಡ ಮೌರ್ಯ ಸೈನ್ಯದ ಪದಾತಿಗಳು ಮುನ್ನುಗ್ಗತೊಡಗಿದರು.
ಬಿಲ್ಲುಗಾರರು ಬಾಣಗಳ ಮಳೆಗರೆಸಲು ಪ್ರಾರಂಭಿಸಿದರು. ಎರಡೂ ಸೈನ್ಯದ ಬಿಲ್ಲುಗಾರರು ಗುರಿಯಿಡುವ ಬಗ್ಗೆ ಚಿಂತಿಸುತಿರಲಿಲ್ಲ, ಬದಲಿಗೆ ಬರಿದಾಗುತ್ತಿರುವ ತಮ್ಮ ಬತ್ತಳಿಕೆಯೆಡೆಗೆ ತಮ್ಮ ಗಮನವಿಟ್ಟಿದ್ದರು. ಬಿಲ್ಲಿನ ತಂತುವೆಳೆದು ಹಾರಿಬಿಟ್ಟ ಬಾಣವು ಒಬ್ಬ ಶತ್ರುವನ್ನು ಕೊಂದರೂ ಸಾಕು, ತಮ್ಮನ್ನು ಕೊಲ್ಲುವವನು ಒಬ್ಬ ಕಡಿಮೆಯಾಗುತ್ತಾನೆ ಎಂಬುದೇ ಅವರಿಗೆ ಸಾಕಾಗಿತ್ತು. ಮೌರ್ಯರ ಆಲಿಕಲ್ಲಿನ ಮಳೆಯಂತಹ ಶರವರ್ಷೆಯ ಮುಂದೆ ಕಳಿಂಗ ಬಿಲ್ಲುಗಾರರ ಬಾಣ ಮಳೆ ಸೋನೆ ಮಳೆಯಂತ್ತಿತ್ತು.

ಅಷ್ಟರವರೆಗೂ ತಮ್ಮ ಗುರಾಣಿಗಳಿಂದ ಬಾಣಗಳನ್ನುತಡೆಯುತ್ತಾ ನಿಂತಿದ್ದ ಕಳಿಂಗ ಸೈನ್ಯಾಧಿಕಾರಿಗಳು, ತಮ್ಮೆಡೆಗೆ ನುಗ್ಗುತ್ತಿರುವ ಮೌರ್ಯ ಪದಾತಿದಳವನ್ನು ಕಂಡೊಡನೆ, ಇನ್ನು ತಡಮಾಡಿದರೆ ಅಪಾರ ನಷ್ಟ ಸಂಭವಿಸಬಹುದೆಂದು ಊಹಿಸಿ, ಮುನ್ನುಗ್ಗಲು ಸೈನ್ಯಕ್ಕೆ ಆದೇಶಿಸಿದರು.ತಾವು ಕಂಡಿರದ ಯಾವುದೋ ಒಬ್ಬ ವ್ಯಕ್ತಿ ಹಾರಿಬಿಟ್ಟ ಬಾಣದಿಂದ ಸಾಯುವುದಕ್ಕಿಂತ, ತಮ್ಮೆಡೆಗೆ ಬರುತ್ತಿರುವ ಪದಾತಿಗಳೊಂದಿಗೆ ಕಾದಾಡಿ ಸಾಯುವುದೇ ಮೇಲೆಂದೆಣಿಸಿ, ಬಾಣದ ಮಳೆಯನ್ನು ಲೆಕ್ಕಿಸದೆ ಕಳಿಂಗ ಸೈನಿಕರು ಮುನ್ನುಗ್ಗತೊಡಗಿದರು.ಗುರಾಣಿಗಳ ರಕ್ಷಣೆಯಿಂದ ಹೊರಬಂದೊಡನೆ ಬಾಣಗಳು , ಹಲವರ ದೇಹವನ್ನು ಚೀರಿ ಪ್ರಾಣವನ್ನು ಅದರಿಂದ ಬೇರ್ಪಡಿಸಿತು. ಪದಾತಿಗಳ ಸೆಣೆಸಾಟ ಪ್ರಾರಂಭವಾದೊಡನೆ ಖಡ್ಗಗಳ ಝಣಝಣ ಸದ್ದು ಕೇಳತೊಡಗಿತು. ಕಾಸಿನ ಝಣಝಣಕ್ಕಿಂತ ಈಗ ಖಡ್ಗದ ಝಣಝಣ ಅಮೂಲ್ಯವಾಗಿತ್ತು. ಸೆಣೆಸುವಾಗ ಒಂದು ತಪ್ಪಾದರೂ ಪ್ರಾಣದ ಬೆಲೆ ತೆರಬೇಕಾಗಿತ್ತು.ಬಹುಕಾಲದಿಂದ ರಕ್ತ ಹೀರಲು ಕಾಯುತ್ತಿರುವ ಜಿಗಣೆಗಳಂತೆ ಖಡ್ಗಗಳು ವೈರಿಗಳ ರಕ್ತ ಹೀರತೊಡಗಿದವು.ಹಿಡಿಯಿಂದ ತುದಿಯವರೆಗೆ ರಕ್ತದಲ್ಲಿ ನೆನೆದರೂ ಅವು ನಿಲ್ಲುವಂತಿರಲ್ಲಿಲ್ಲ. ಸಾವು-ನೋವಿಗಳ ಕೂಗು ಹೆಚ್ಚಾಗತೊಡಗಿದರೂ ,ಯಾರು ಅದಕ್ಕೆ ಕಿವಿಗೊಡುತ್ತಿರಲಿಲ್ಲ.
ಮೌರ್ಯ ಪದಾತಿದಳ ಸ್ವಲ್ಪ ಹಿಂದೆ ಸರಿದಂತೆ ಕಳಿಂಗದ ದಂದನಾಯಕರಿಗೆ ಕಂಡಾಗ , ಅವರಿಗೆ ಅವರ ಕಣ್ಣುಗಳನ್ನೇ ನಂಬಲಾಗಲಿಲ್ಲ.ತಡಮಾಡದೆ ಅಶ್ವದಳವನ್ನು ಮುನ್ನುಗ್ಗಲು ಆದೇಶಿಸಿ, ಗಜಸೈನ್ಯದೊಂದಿಗೆ ಅಶ್ವದಳಕ್ಕೆ ಒತ್ತಾಸೆ ನೀಡುಲು ಮುಂದಾದರು.
ಇದ್ದಕ್ಕಿದ್ದಂತೆ ಮರೀಚಿಕೆಯೆನಿಸಿದ್ದ ಗೆಲುವು ನಿಜವೆನ್ನಿಸತೊಡಗಿ, ಇಡಿ ಸೈನ್ಯದಲ್ಲಿ ಆತ್ಮವಿಶ್ವಾಸ ಸಂಚಲನಗೊಂಡು ಮೌರ್ಯ ಸೈನ್ಯವನ್ನು ಹಿಂದೂಡತೊಡಗಿದರು. ಇಷ್ಟಾದರೂ ಮೌರ್ಯ ದಂಡನಾಯಕರು ದಿಗ್ಭ್ರಾಂತರಾಗಲಿಲ್ಲ. ಯುದ್ಧದ ಫಲಿತಾಂಶವನ್ನು ಮೊದಲೇ ತಿಳಿದವರಂತೆ ಶಾಂತಚಿತ್ತರಾಗಿದ್ದರು. ಇದ್ದಕ್ಕಿದ್ದಂತೆ ಆಗ್ನೇಯ ಮತ್ತು ವಾಯವ್ಯ ದಿಕ್ಕುಗಳಿಂದ ಅಡಗಿದ್ದ ಮೌರ್ಯ ಅಶ್ವದಳವು ಎರಗಿ ಬಂತು. ಈ ಹಠಾತ್ ಧಾಳಿಯು ಕಳಿಂಗ ಸೈನ್ಯದ ಆತ್ಮವಿಶ್ವಾಸವನ್ನು ಘಾಸಿಗೊಳಿಸಿತು.ಯುದ್ಧ ಪ್ರಾರಂಭವಾಗುವ ಮೊದಲು ,ಮೌರ್ಯರ ಸಣ್ಣ ಅಶ್ವದಳವನ್ನು ಕಂಡು ಕಳಿಂಗದ ದಂಡಾಧಿಕಾರಿಗಳಿಗೆ ಸಂಶಯ ಬಂದಿತ್ತು. ಆದರೆ ಮೌರ್ಯರ ಪದಾತಿದಳ ಹಾಗು ಗಜಸೈನ್ಯಗಳನ್ನೆ ಕೇಂದ್ರೀಕರಿಸಿ ತಮ್ಮ ಯುದ್ಧತಂತ್ರಗಳನ್ನು ರೂಪಿಸಿದ್ದರಿಂದ , ಅವರ ಸಂಶಯ ಸಮಾಧಾನದ ನಿಟ್ಟುಸಿರಿನಲ್ಲಿ ಮರೆಯಾಗಿತ್ತು. ಪದಾತಿದಳ ಹಾಗು ಗಜಸೈನ್ಯ ಮುನ್ನುಗಿದ್ದರಿಂದ , ಬಿಲ್ಲುಗಾರರಿಗೆ ಯಾವ ಆಸರೆಯೂ ಇರಲ್ಲಿಲ್ಲ. ಅವರು ಮೌರ್ಯರ ಅಶ್ವದಳಕ್ಕೆ ಸುಲಭವಾಗಿ ತುತ್ತಾದರು.
ಗಜಸೈನ್ಯವು ಮೌರ್ಯ ಬಿಲ್ಲುಗಾರರ ಬಣಗಳಿಗೆ ಸಿಕ್ಕಿ ನಲುಗಿತು. ಕ್ಷಣದಲ್ಲಿ ಯುದ್ಧದ ಗತಿ ಬದಲಿಸಿತ್ತು.
ಪಾದಾತಿದಳವನ್ನು ಮೌರ್ಯ ಸೈನ್ಯ ಸುತ್ತುವರೆದಿದ್ದರಿಂದ , ತಪ್ಪಿಸಿಕೊಂಡು ಓಡಲೂ ಸಾಧ್ಯವಗುತ್ತಿರಲಿಲ್ಲ.
ಬೆಂಕಿಗೆ ಸಿಕ್ಕಿ ಸಾಯುವ ಪತಂಗಗಳಂತೆ ಪದಾತಿದಳವು ಸಾಯತೊಡಗಿದರು. ಆ ಕಳಿಂಗ ಸೈನ್ಯದ ಮೋಟು ಗೋಡೆಯನ್ನು ಮೌರ್ಯ ಸೈನ್ಯದ ಅಲೆಯು ಛಿದ್ರಗೊಳಿಸಿತ್ತು.
ಪ್ರಾಣಭೀತಿಯಿಂದ ಕಳಿಂಗದ ಸೈನ್ಯವು ದಿಕ್ಕಾಪಾಲಾಗಿ ಓಡತೊಡಗಿತು. ಎಷ್ಟೋ ಸೈನಿಕರು ಶರಣಾದರೆ , ಮತ್ತೆ ಕೆಲವರ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಮೌರ್ಯ ಸೈನಿಕರಿಂದ ಕೊಲ್ಲಲ್ಪಟ್ಟರು. ಅಂತೂ ಅಶೋಕನ ಕನಸು ನನಸಾಗಿತ್ತು.
ವಿಜಯದ ಹರ್ಷೋದ್ಗಾರಗಳ ಕೂಗು ರಣರಂಗವನ್ನು ತುಂಬಿತು.ಸ್ವಲ್ಪ ಸಮಯದ ನಂತರ ಮೌನವು ಆವರಿಸಿತು.ಆದರೆ ಈ ಮೌನ ಯುದ್ಧಭೂಮಿ ಸ್ಮಶಾನವಾದ ನಂತರದ ಮೌನ.
ಕಳಿಂಗದ ಮೇಲಿನ ವಿಜಯದ ಸುದ್ದಿಯನ್ನು ಅಶೋಕನಿಗೆ ತಿಳಿಸಲು ಓಲೆಗಾರರು ಕುದುರೆಗಳಲ್ಲಿ ಹೊರಟರು. ಈ ಸುದ್ದಿಯನ್ನು ಮೊದಲು ತಿಳಿಸಿ ಬಹುಮಾನ ಪಡೆಯಬೇಕೆಂಬ ಹವಣಿಕೆಯಲ್ಲಿ ಸ್ಪರ್ಧೆಯೇ ಏರ್ಪಟ್ಟು ಅಶೋಕನಿಗೆ ಬೇಗ ವಿಜಯದ ಸುದ್ದಿ ತಲುಪಿತು.ಅದನ್ನು ಕೇಳಿದೊಡನೆ ಆಕಾಶದೆಡೆಗೆ ತಲೆಯೆತ್ತಿ ದೇವರನ್ನು ನೆನೆಯಲಿಲ್ಲ, ಬದಲಿಗೆ ಅದೇ ಶಾಂತ ಭಾವವು ಮುಂದುವರೆದು ಮುಖದಲ್ಲಿ ಸಣ್ಣ ನಗೆ ಹೊಮ್ಮಿತು. ಅಷ್ಟು ದೊಡ್ಡ ವಿಜಯ ಸಾಧಿಸಿದ ಸಂತೋಷವು, ಒಂದು ಸಣ್ಣ ನಗೆಯಲ್ಲಿ ವ್ಯಕ್ತವಾಗಿ , ಕ್ಷಣದಲ್ಲಿ ಮಾಯವಾದುದನ್ನು ಕಂಡ ಅಲ್ಲಿದ್ದವರು ಆಶ್ಚರ್ಯ ಪಡುತ್ತಿದ್ದರು. ಸಂಜೆ ಸೈನಿಕರನ್ನು ಸ್ವತಃ ಭೇಟಿ ಮಾಡುವುದಾಗಿ ತಿಳಿಸಿ , ಓಲೆಗಾರರಿಗೆ ಬಹುಮಾನ ಕೊಡುವಂತೆ ಆದೇಶಿಸಿ ಶಿಬಿರದೊಳಕ್ಕೆ ನಡೆದನು.

ಅಂದು ಸಂಜೆ ತನ್ನ ಸೈನ್ಯವನ್ನುದ್ದೇಶಿಸಿ ಮಾತನಾಡಿ , ಅವರ ಶೌರ್ಯವನ್ನೂ,ನಿಷ್ಠೆಯನ್ನು ಕೊಂಡಾಡಿದನು.ತಮ್ಮ ಮನೆಗಳಿಗೆ ಮರಳಬೇಕೆಂಬ ಆಸೆಯನ್ನು ಅವರ ಕಣ್ಣುಗಳಲ್ಲಿ ಕಂಡರೂ, ಅದಕ್ಕೆ ಬೆಲೆಕೊಡಲಿಲ್ಲ.ಆಗಲೇ ಮಿಕ್ಕ ಸಣ್ಣ ಪುಟ್ಟ ರಾಜ್ಯಗಳ ಮೇಲಿನ ದಂಡಯಾತ್ರೆಯ ಕಾರ್ಯಕ್ರಮ ನಿರೂಪಿಸಿದ್ದನು. ಯಾವ ಸೈನಿಕನಿಗೂ, ದಂಡನಾಯಕರಿಗೂ ಮನದಾಸೆಯನ್ನು ತಿಳಿಸುವ ಧೈರ್ಯವಿರಲ್ಲಿಲ್ಲ.
ಅಶೋಕನು ಮಾತು ಮುಗಿಸಿದಾಗ ಜಯಕಾರಗಳ ಕೂಗು ಮಾತ್ರ ಕೇಳಿಬಂತು. ಜಯಕಾರಗಳ ನಡುವೆ ಅಂಗರಕ್ಷಕರೊಡನೆ ಅಶೋಕನು ಯುದ್ಧಭೂಮಿಯನ್ನು ಒಮ್ಮೆ ಸುತ್ತಿಬರಲು ಹೊರಟನು.

ಈ ನೋಟ ಅವನಿಗೆ ಹೊಸ ವಿಷಯವೇನಾಗಿರಲಿಲ್ಲ.ಹೆಣಗಳ ರಾಶಿ ಯುದ್ಧಭೂಮಿಯಲ್ಲಿ ಹರಡಿತ್ತು, ಮಡಿದ ಕಳಿಂಗ ಸೈನಿಕರ ಬಂಧುಗಳು ಅಲ್ಲಲ್ಲಿ ಗುಂಪು ಸೇರಿ ಚಿತೆಗಳನ್ನೂ, ಹೂಳಲು ಗುಂಡಿಗಳನ್ನು ಸಿದ್ಧಪಡಿಸುತ್ತಿದ್ದರು. ಅಶೋಕನನ್ನು ಕಂಡು ಕೋಪ ಉಕ್ಕಿಬಂದರು ನಿಸ್ಸಹಾಯಕ ನೋಟದೊಂದಿಗೆ ಮನಸ್ಸು ಶಾಂತವಾಗುತ್ತಿತ್ತು. ಕೆಲವರು ಸಾವಿನ ಆಘಾತದೊಡನೆ, ಭವಿಷ್ಯದ ಬಗೆಗಿನ ಚಿಂತೆಯಲ್ಲಿ ಅಳುವುದನ್ನು ಮರೆತು ಮೌನವಾಗಿದ್ದರು. ಆ ಅಘಾತದಿಂದ ಹೊರಬಂದೊಡನೆ ಕಣ್ಣೀರು ಧಾರಕಾರವಾಗಿ ಹರಿಯತೊಡಗಿತು. ಯುದ್ಧಭೂಮಿಯಲ್ಲಿ ಅಂದು ರಕ್ತದ ಕೋಡಿ ಹರಿದಾಗಿತ್ತು, ಈಗ ಕಣ್ಣೀರಿನ ಸರದಿಯಾಗಿತ್ತು.ಯುದ್ಧದ ಗಾಯಾಳುಗಳು, ಹತಾಶೆಯಿಂದ ಅಲ್ಲಲ್ಲಿ ಬಿದ್ದಿದ್ದರು.ಜೀವನವೆಲ್ಲ ಭಿಕ್ಷಾಟನೆ ಮಾಡಿಕೊಂಡು ಬದುಕುವುದಕ್ಕಿಂತ ಯುದ್ಧದಲ್ಲಿ ಸಾವುಬರಬಾರದೇ ಎಂದು ಹಲುಬುತ್ತಿದ್ದರು.

ಮಡಿದ ಮೌರ್ಯ ಸೈನಿಕರ ಶವಗಳು ಅಂತ್ಯ ಸಂಸ್ಕಾರ ಸಾಗುತ್ತಿತ್ತು. ಒಂದು ದೊಡ್ಡ ಚಿತೆಯನ್ನು ಸಿದ್ಧ ಮಾಡಿ ಸತ್ತವರನ್ನೆಲ್ಲಾ ಅದರಲ್ಲಿ ಎಸೆಯಲಾಗುತ್ತಿತ್ತು.ಶವಸಂಸ್ಕಾರದ ವಿಧಿಗಳಾಗಳಿಗೆ ಅಲ್ಲಿ ಅವಕಾಶವಿರಲಿಲ್ಲ. ಕೆಲವರು ಪ್ರಮುಖ ದಂಡನಾಯಕರ ಶವಗಳಿಗೆ ಮಾತ್ರ ಗೌರವ ಅರ್ಪಿಸಲಾಯಿತು.ಒಂದು ದೊಡ್ಡ ಸಾಮ್ರಾಜ್ಯದ ಪ್ರಜೆಯಾದರೂ, ಗೌರಪೂರ್ಣ ದಹನವು ದೊರೆಯದೇ, ಶರೀರವು ಮಣ್ಣಿನಲ್ಲಿ ಬೆರೆತುಹೋಗುತ್ತಿತ್ತು.

ಅಶೋಕನು ನಡೆಯುತ್ತಾ ಮುಂದುವರೆದ,ಎಷ್ಟು ದೂರ ನಡೆದರೂ ಹೆಣಗಳ ರಾಶಿ ಕೊನೆಗೊಳ್ಳುತ್ತಿರಲಿಲ್ಲ.ಇದ್ದಕ್ಕಿದ್ದಂತೆ ತಕ್ಷಶಿಲೆಯ ದಂಗೆಯನ್ನು ಹತ್ತಿಕ್ಕಿದ ನೆನಪು ಮರುಕಳಿಸಿ ಬಂತು. ಅಲ್ಲಿಯೂ ಇಂತಹ ದೃಶ್ಯವನ್ನು ಕಂಡಿದ್ದರೂ, ಮನಸ್ಸು ವಿಚಲಿತವಾಗಿರಲಿಲ್ಲ.ಆದರೆ ಇಂದು ,ಕನಸು ನೆರವೇರಿದ ಸಮಾಧಾನ ಭಾವವು ಮಾಯವಾಗಿ,ಚಿಂತೆ ಮನಸ್ಸನ್ನು ಆಕ್ರಮಿಸಿತು.ಕಳಿಂಗವನ್ನು ಗೆದ್ದ ಸಾಮಾಧಾನವನ್ನು ಚಿಂತೆ ಗೆದ್ದಿತು.ಹಲವು ವರ್ಷಗಳ ಹಿಂದೆ ವಿಶ್ವವನ್ನೇ ತನ್ನದಾಗಿಸಿಕೊಳ್ಳಬೇಕೆಂಬ ಮಹತ್ವಾಕಾಂಕ್ಷೆಯಿಂದ ಅಲಕ್ಷೇಂದ್ರ(Alexander) ಎಂಬ ಯವನ ಚಕ್ರವರ್ತಿಯು ಭಾರತದ ವರೆಗೆ ದಂಡೆತ್ತಿ ಬಂದಿದ್ದನ್ನು ಕೇಳಿದ್ದನು. ಈಗ ಅವನ ಸಾಮ್ರಾಜ್ಯ ಹೇಳ ಹೆಸರಿಲ್ಲದ್ದಂತಾಗಿತ್ತು. ಅವನ ಸಾಮ್ರಾಜ್ಯದ
ವಾಯವ್ಯ ಪ್ರದೇಶಗಳನ್ನು ತನ್ನ ಅಜ್ಜನೇ ಕಸಿದುಕೊಂಡದ್ದು ಅಶೋಕನಿಗೆ ತಿಳಿದಿತ್ತು. ಜೊತೆಗೆ ಯಾರೋ ಒಬ್ಬ ವ್ಯಕ್ತಿ ಎಲ್ಲವನ್ನೂ ತ್ಯಜಿಸಿ , ಅರಳಿಮರದಡಿ ಧ್ಯಾನಿಸಿ ಜೀವನದ ರಹಸ್ಯವನ್ನು ತಿಳಿದ ಬಗ್ಗೆ ಕೇಳಿದ್ದು,ನೆನಪಿಗೆ ಬಂತು.ಯೋಚನಾಮಗ್ನನಾಗಿ ಅಶೋಕನು ಶಿಬಿರಕ್ಕೆ ಮರಳಿದನು.

ಯುದ್ಧಭೂಮಿಯ ದೃಶ್ಯವು ಲೋಕವನ್ನು ಅವನು ಕಾಣುತ್ತಿದ್ದ ಧೋರಣೆಯನ್ನು ಬಲವಾಗಿ ಪ್ರಶ್ನಿಸುತ್ತಿತ್ತು.ಆಕಾಶದಲ್ಲಿ ಅರ್ಧಚಂದ್ರನು ತನ್ನನ್ನು ನೋಡಿ ನಗುತ್ತಿರುವಂತೆ ಭಾಸವಾಗುತ್ತಿತ್ತು. ಮನದಲ್ಲಿ ಹಿಂದೆಂದೂ ಕಂಡಿರದ ವಿಚಿತ್ರ ಭಾವನೆ ಮೂಡಿತ್ತು, ಕರುಣೆಯೋ ? ಪಶ್ಚಾತ್ತವವೋ ? ತಿಳಿಯಲಿಲ್ಲ.ಆದರೆ ಅಲಕ್ಷೇಂದ್ರ ವಿಜಯಮಾಲೆಗಳು ಹಗುರವಾಗಿ ಕಾಣತೊಡಗಿದವು, ಅರಳಿಮರದಡಿ ಕುಳಿತ ವ್ಯಕ್ತಿಯ ಬಗ್ಗೆ ಕುತೂಹಲ ತುಂಬಿತ್ತು. ಶಿಬಿರದೊಳಕ್ಕೆ ಹೊಕ್ಕು ನಿದ್ರಿಸಲು ಪ್ರಯತ್ನಿಸಿದ, ನಿದ್ರೆ ಬರಲಿಲ್ಲ.

ಸೂರ್ಯೋದಯವಾಯಿತು, ಅದರೆ ಈ ಉದಯ ಒಂದು ವಿಶಿಷ್ಟ ದಿನದ ಉದಯವಾಗಿತ್ತು. ಅಶೋಕನ ಜೀವವನದ ಜೊತೆಗೆ ಚರಿತ್ರೆಯನ್ನು ಬದಲಿಸುವ ದಿನ.ಅಶೋಕನು ತನ್ನ ಸೈನ್ಯದ ದಂಡನಾಯಕರಿಗೆ ಪಾಟಲೀಪುತ್ರಕ್ಕೆ ಮರಳಲು ಆದೇಶಿಸಿದನು. ಭರತಖಂಡವು ಹಿಂದೆಂದೂ ಕಂಡಿರದ ಪವಾಡವೊಂದು ನಡೆದಿತ್ತು. ಅಂದು ಅಶೋಕನು “ದೇವಾನಾಂಪ್ರಿಯ” ನಾದನು.

Tuesday, May 30, 2006

ಪ್ರವಾಸ

(ಈ ಪ್ರವಾಸಕಥನ ಬರೆದು ಸುಮಾರು ಒಂದು ವರ್ಷವೇ ಆಗಿದೆ. ಆದರೂ ಕೀಲಿಮಣೆಯಲ್ಲಿ ಕುಟ್ಟಿಟ್ಟಿಲ್ಲವಾದ್ದರಿಂದ ಕಳೆದು ಹೋಗುವುದರಲ್ಲಿತ್ತು. ಈಗ ಸ್ವಲ್ಪ ನಿರಾಳ)
“ಶ್ರೀಮತ್ವೆಕಟನಾಥಾರ್ಯ ಕವಿತಾಲಯಃ ಕೇಸರಿ” ಎಂದು ಧ್ಯಾನ ಶ್ಲೋಕವನ್ನು ಹೇಳಿ , ಉಪಾಕರ್ಮದ ಮಾರನೇ ದಿನ ಗಾಯತ್ರಿ ಜಪವನ್ನು ಮಾಡಲು ಕುಳಿತಾಗ, ಅಷ್ಟೋತ್ತರ ಸಹಸ್ರ ಬಾರಿ ಮಂತ್ರವನ್ನು ಜಪಿಸಬೇಕಿದ್ದರೂ, ಸಮಯದ ಅಭಾವದಿಂದ, ಜೊತೆಗೆ ಸೋಮಾರಿತನದಿಂದ ಅಷ್ಟೋತ್ತರ ಶತಕ್ಕೆ ಇಳಿಸಿದೆ.ಸಂಕಲ್ಪದಲ್ಲಿ ಆ ದಿನ ನಾನಿದ್ದ ಸ್ಥಳ ಹಾಗು ಸಮಯದ ಸಂಪೂರ್ಣ ಪರಿಚಯಕೊಟ್ಟು (ಅಂದ್ರೆ ಶ್ವೇತವರಾಹಕಲ್ಪದ, ಕಲಿಯುಗದ,ಪಾರ್ಥಿವ ಸಂವತ್ಸರದ, ದಕ್ಷಿಣಾಯನದ, ವರ್ಷಋತುವಿನ, ಸಿಂಹಮಾಸದ, ಪೌರ್ಣಮಿಯಂದು, ಭರತಖಂಡದ ಬೆಂಗಳೂರಿನಲ್ಲಿ…..) ಜಪ ಮಾಡಲು ಪ್ರಾರಂಭಿಸಿದೆ.
(ಆ ಸಂಕಲ್ಪ ಹೇಳುವುದೇ ಪ್ರಯಾಸದ ಕೆಲಸವಾದರೂ ಭಾರತೀಯರ ಗಣಿತ ಪ್ರೌಢಿಮೆಗೆ ಈ ಕಾಲ ವಿಂಗಡಣೆ ಒಂದು ಉದಾಹರಣೆ ಎನ್ನಿಸಿಬಿಟ್ಟಿತು.)
ಅಲ್ಲಿಯವರೆಗೆ ಎಲ್ಲ ಮಂತ್ರಗಳನ್ನು ಕಾಟಾಚಾರಕ್ಕೆಂಬಂತೆ ಉಚ್ಚರಿಸುತ್ತಿದ್ದವನು “ಧಿಯೋ ಯೋನಃ ಪ್ರಚೋದಯಾತ್” ಕೂಡಿರುವ ಗಾಯತ್ರಿ ಮಂತ್ರ ಉಚ್ಚರಿಸುವಾಗ , ಎಲ್ಲೆಲ್ಲೊ ಹರಿದಾಡುತ್ತಿದ್ದ ಮನಸ್ಸು ಒಂದೆಡೆ ಕೇಂದ್ರೀಕೃತವಾದಂತಾಯಿತು.ಜೀವನೋಪಾಯಕ್ಕೆ ಬುದ್ಧಿಯನ್ನು ಅವಲಂಬಿಸಿರುವುದರಿಂದಲೇನೋ, ಆ ಮಂತ್ರದ ಬಗ್ಗೆ ವಿಶೇಷ ಗೌರವವಿರುವುದು. ದೇವಸ್ಥಾನದ ಪೂಜಾರಿಗಳಂತೆ “ನಮಃ” ಮಾತ್ರ ಕೇಳುವಂತೆ ಉಚ್ಛರಿಸದೇ , ಪೂರ್ಣವಾಗಿ ನೂರೆಂಟು ಬಾರಿ ಮಂತ್ರ ಜಪ ಮಾಡುವುದು ಪ್ರಯಾಸವೇ ಆಯಿತು.
ಅಮ್ಮ ಅಂದು ಗೊರವನಹಳ್ಳಿಗೆ ಹೋಗುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಅಲ್ಲಿಗೆ ಮೊದಲ ಬಾರಿ ಹೋಗಿ ಬಂದ ಮಾರನೇ ದಿನವೇ ನನಗೆ ಕೆಲಸ ಸಿಕ್ಕಿದ್ದರಿಂದ ಅಲ್ಲಿನ ಲಕ್ಷ್ಮೀದೇವಿಯ ಮಹಿಮೆಯಲ್ಲಿ ಅಮ್ಮನಲ್ಲಿ ನಂಬಿಕೆ ವಜ್ರವಾಗಿತ್ತು. ಅಮ್ಮನ ಜೊತೆಗೆ ಅವರ ಅಕ್ಕಂದಿರು ಹಾಗು ಮಕ್ಕಳು ಹೊರಟಿದ್ದರು.”ತನಗೆ ದೊರೆತ ಸತ್ಫಲಗಳು ಅವರ ಕುಟುಂಬಗಳಿಗೂ ದೊರೆಯಲಿ “ ಎಂಬುದು ಅಮ್ಮನ ಆಶೆಯಾಗಿತ್ತು.ನಾನೂ ಅರೆಮನಸ್ಸಿನಿಂದ ಅವರೊಂದಿಗೆ ಹೊರಡಲು ನಿರ್ಧರಿಸಿದೆ.
ಮನೆಮುಂದೆ ಬಂದು ನಿಂತ ಟಾಟಾ ಸುಮೋವನ್ನೇರಿ ತುಮಕೂರಿನ ಕಡೆಗೆ ಸಾಗಿದೆವು. ನಾನು ಚಾಲಕನ ಪಕ್ಕದಲ್ಲಿ ಕುಳಿತಿದ್ದರಿಂದ ಗಾಡಿ ಹೊರಟ ಕೂಡಲೇ FM91 ಹಾಕಲೇಬೇಕೆಂಬ ಒತ್ತಾಯಪೂರ್ವ ದನಿಯಲ್ಲಿ ಬೇಡಿಕೆ ಕಾರಿನ ಹಿಂಬದಿಯಲ್ಲಿ ಕುಳಿತಿದ್ದ ಸಿಂಧುವಿನಿಂದ ಬಂತು. ಅದುವರೆಗೂ ಜೋಗಿ ಚಿತ್ರದ ಹಾಡುಗಳನ್ನು ಕೇಳುತ್ತಿದ್ದ ವಾಹನಚಾಲಕ ಸಪ್ಪಗಾಗಿ cassette ತೆಗೆದು, ರೇಡಿಯೊ ಟ್ಯೂನ್ ಮಾಡತೊಡಗಿದ. FM91 ಬದಲು ಯಾವುದೋ ಕಂಪನಾಂಕದಲ್ಲಿ ನಿಲ್ಲಿಸಿ, ಕನ್ನಡ ಚಲನಚಿತ್ರದ ಹಾಡುಗಳು ಚಾಲಕನು ಕೇಳತೊಡಗಿದ. ಬಹಳ ಸಮಯವಾದರೂ FM91ನ ಪಟಪಟನೆ ಮಾತನಾಡುವ ರೇಡಿಯೋ ಜಾಕಿಗಳ (RJ) ಸದ್ದು ಕೇಳದಿದ್ದರಿಂದ ಮತ್ತೆ ಸಿಂಧು ಅಷ್ಟೇ ಒತ್ತಾಯಪೂರ್ವಕವಾಗಿ ತನ್ನ ಹಳೆ ಬೇಡಿಕೆಯನ್ನು ಸಲ್ಲಿಸಿದಳು. ಅಂತೂ ಕೊನೆಗೆ ಆ ಕಂಪನಾಂಕ ಸಿಕ್ಕಿ ಹರಕು ಮುರುಕು ಕನ್ನಡವನ್ನು ಆಂಗ್ಲ ಭಾಷೆಯೊಡನೆ ಬೆರೆಸಿ ಮಾತನಾಡುವ RJಗಳ ಧ್ವನಿ ಕೇಳತೊಡಗಿದಾಗಲೆ ಸಿಂಧುವಿಗೆ ಸಮಾಧಾನವಾಯಿತು. ಪ್ರಯಾಣದುದ್ದಕ್ಕೂ ಹಿಂದಿ ಚಲನಚಿತ್ರಗಳ ಹಾಡುಗಳನ್ನು ಗುನುಗುತ್ತಾ , ಕೇಳುತ್ತಾ ಹೋಗುವಂತಾಯಿತು.
ಐಶ್ವರ್ಯ ರೈಳ ಕೆನ್ನೆಯಷ್ಟೇ ನುಣುಪಾಗಿದ್ದ ತುಮಕೂರಿನೆಡೆಗಿರುವ NH4 ಹೈವೇಯಲ್ಲಿ ಗಾಳಿಯಲ್ಲಿ ತೇಲಿದಂತೆ ಸಾಗುವಾಗ , ಆಶ್ಚರ್ಯ ಬೆರೆತ ಸಂತೋಷ ಕಾರಿನಲ್ಲಿ ತುಂಬಿತ್ತು. ಅಂದು “ಅಹಿಂದ” ಸಮಾವೇಶಕ್ಕೆ ಹೊರಡುತ್ತಿದ್ದ ಹಲವಾರು ಸರ್ಕಾರಿ ಹಾಗು ಖಾಸಗಿ ಬಸ್ಸುಗಳನ್ನೂ, ಲಾರಿಗಳಲ್ಲಿ ಜೋತಾಡುತ್ತಾ ಹೋಗುತ್ತಿರುವ ಜನರನ್ನು ನೋಡುತ್ತಿರುವಾಗ “ ಆ ಬಸ್ಸುಗಳನ್ನೂ, ಲಾರಿಗಳಿಗೆ ಅಲ್ಪಸಂಖ್ಯಾತರ, ಹಿಂದುಳಿದವರ ಹಾಗು ದಲಿತರ ಏಳಿಗೆಗೆಂದು ಸರ್ಕಾರ ಬಿಡುಗಡೆ ಮಾಡಿರುವ ಹಣದಿಂದಲೇ ಬಾಡಿಗೆ ನೀಡಿರಬಹುದು” ಎಂದೆನ್ನಿಸಿ ಆ ಸಮಾವೇಶದ ಅರ್ಥಹೀನತೆ ಬಗ್ಗೆ ನಗುಬಂತು.
ಚಾಲಕನನ್ನು ಮಾತನಾಡಿಸುತ್ತಿರುವಾಗ ಅವನ ಮಣಿಕಟ್ಟಿನ ಸುತ್ತ ಮಿನುಗುತ್ತಿದ್ದ ೮ ರಾಖಿಗಳನ್ನು ಗಮನಿಸಿ “ ಇಷ್ಟೊಂದು ಜನ ಸಹೋದರಿದ್ದಾರಾ ? ಹಾಗಾದ್ರೆ ನಿಮಗೆ ಜವಾಬ್ದಾರಿ ತುಂಬಾ ಜಾಸ್ತಿಯಲ್ವೆ ? “ ಎಂದು ಛೇಡಿಸಿದೆ. “ಏನ್ಮಾಡೋದು ಸಾರ್ ಸಂಬಂಧಿಕರ ಮಕ್ಕಳು ಎಲ್ಲರೂ ರಾಖಿ ಕಟ್ತಿನಿ ಅಂದ್ರು , ಎಲ್ಲರಿಗೂ ಹತ್ತು ರುಪಾಯಿ ಕೊಡಬೇಕಾಯ್ತು” ಎಂದಾಗ, ಕಾಲೇಜಿನ ಹುಡುಗಿಯರು ರಾಖಿ ಕಟ್ಟುಬಿಡುವರೆಂಬ ಭಯದಿಂದ, ರಕ್ಷಾ ಬಂಧನದ ದಿನ ಕಾಲೇಜಿಗೆ ಗೈರುಹಾಜರಾಗುತ್ತಿದ್ದ ನನ್ನ ಮಿತ್ರನ ನೆನಪು ಬಂತು. ಕಾರಿನ ಹಿಂಬದಿಯಲ್ಲಿ ಕುಳಿತಿದ್ದ ನನ್ನ ಅಕ್ಕ ತಂಗಿಯರು ಇಂದು ರಾಖಿ ಕಟ್ಟಿದ್ದಿದ್ದರೆ ಹತ್ತು ರೂಪಾಯಿಯ ಹತ್ತು ಪಟ್ಟಾದರೂ ಕೊಡಬೇಕಾಗುತ್ತಿತ್ತೇನೋ ? ಅವರ ರಾಖಿಯ ಬೆಲೆ ದುಬಾರಿಯೇ ಸರಿ.ಇದ್ದಕ್ಕಿದ್ದಂತೆ “ಗೊರವನಹಳ್ಳಿ ಕ್ಷೇತ್ರಕ್ಕೆ ದಾರಿ” ಎಂದು ಬರೆದಿದ್ದ ತಿರುವೊಂದನ್ನು ಅಲಕ್ಷಿಸಿ ಚಾಲಕನು ಮುಂದೆ ಹೋಗಿದ್ದರಿಂದ , ಮತ್ತೆ ಕಾರ ಹಿಂದಿರುಗಿ ಗೊರವನಹಳ್ಳಿಯ ರಸ್ತೆಯೆಡೆಗೆ ತಿರುಗಿತು.
ಐಶ್ವರ್ಯ ರೈ ಮುದುಕಿಯಾಗಿ, ಯಾವುದೇ ರೀತಿಯ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳದಿದ್ದರೆ ಅವರ ಮುಖದಲ್ಲಿ ಕಾಣಬಹುದಾದ ಉಬ್ಬುತಗ್ಗು ಗಳು ಈ ರಸ್ತೆಯಲ್ಲಿದ್ದು, ಇಂತಹ ರಸ್ತೆಯಲ್ಲಿ ೨೦ ಕಿಲೋಮೀಟರ್ ಪ್ರಯಾಣ ಮಾಡಬೇಕಿತ್ತು. ವಾಹನದಲ್ಲಿದ್ದವರೆಲ್ಲಾ ರಸ್ತೆಯನ್ನು ಶಪಿಸುತ್ತಿರುವಾಗ “ ಮತ್ತೆ ಸಿದ್ಧರಾಮಯ್ಯನವರ ನೆನಪು ಬಂತು. ಅಹಿಂದ ಸಮಾವೇಷಕ್ಕೆ ಸಿದ್ಧರಾಮಯ್ಯನವರು ಇಂತಹ ರಸ್ತೆಯಲ್ಲಿ ಸಂಚರಿಸಬೇಕಿದ್ದರೆ ರಸ್ತೆ ಸರಿಪಡಿಸಬೇಕೆಂದು ಅವರಿಗೆ ಬಹುಶಃ ಅನ್ನಿಸದಿದ್ದರೂ, ಮುಂದೆ ಯಾವ ಸಮಾವೇಶಗಳನ್ನೂ ಈ ಪ್ರದೇಶದಲ್ಲಿ ಆಯೋಜಿಸಬಾರದೆಂದು ನಿರ್ಧರಿಸುತ್ತಿದ್ದರೇನೋ ?” ಎನ್ನಿಸಿತು. ಹೈವೇಯಲ್ಲಿ ತೇಲಿಬಂದ ಕಾರು ಈಗ ತಡೆಗೋಡೆಗಳನ್ನು ಹಾರುವ ಓಟಗಾರನಂತೆ ಉಬ್ಬುತಗ್ಗುಗಳನ್ನು ದಾಟುತ್ತಾ ಮುಂದೆ ಸಾಗಿತು. ಆ ರಸ್ತೆಯ ಸುತ್ತ ಹಲವಾರು ಗುಡ್ಡಗಳಿದ್ದು, ಕೆಲವಂತೂ ಬೆಟ್ಟಗಳೆನ್ನುವಷ್ಟು ಎತ್ತರವಾಗಿದ್ದವು. ಚಾರಣರಿಯರಿಗೆ ಸೊಗಸಾದ ತಾಣಗಳಾಗಿ ತೋರುತ್ತಿದ್ದವು. ಮಳೆಗಾಲವು ಪ್ರಾರಂಭವಾಗಿ ಎರಡು ತಿಂಗಳಾಗಿದ್ದರಿಂದ ಬೆಟ್ಟಗಳಲ್ಲಿ ಹಸಿರು ಸೊಂಪಾಗಿ ಬೆಳೆದಿತ್ತು.ತಿಳಿಹಸಿರು, ಹಚ್ಚಹಸಿರು, ಹಳದಿ ಮಿಶ್ರಿತ ಹಸಿರು ಹೀಗೆ ಬಗೆಬಗೆಯ ಹಸಿರು ಕಾಣುವಾಗ ಮನಸ್ಸಿನಲ್ಲಿ ಆಹ್ಲಾದಭಾವ ಮೂಡುತ್ತಿತ್ತು.ಸ್ವಲ್ಪ ದೂರ ಸಾಗಿದ ನಂತರ ಹಸಿರು ಹೊಲಗಳು ಸಿಕ್ಕತೊಡಗಿದವು. ಒಳ್ಳೆ ಮಳೆಯಾಗಿದ್ದರಿಂದ ಕಳೆ ಕೀಳಿಸಿ, ಉತ್ತು,ಬಿತ್ತು ,ಈಗ ಸಸಿಗಳು ತಿಳಿಹಸಿರಾಗಿದ್ದವು. ಹೀಗೆ ಹಸಿರಿನ ಮಧ್ಯ ಸಾಗುತ್ತಿರುವಾಗ ಮಂಗಳಾರತಿಯ ತಟ್ಟೆ ಹಾಗು ತೀರ್ಥದ ಬಟ್ಟಲಿನಲ್ಲಿ ಅದ್ದಿರುವ ಉದ್ಧರಣೆಯನ್ನು ಹಿಡಿದ ವ್ಯಕ್ತಿಯೊಬ್ಬ ರಸ್ತೆ ಬದಿಗೆ ನಿಂತಿರುವುದು ಕಂಡಿತು. ತಿರುವುವಿನಲ್ಲಿ ಒಂದು ಶನಿದೇವನ ದೇವಸ್ಥಾನವನ್ನು ಕಂಡಾಗ ಆ ವ್ಯಕ್ತಿ ಅಲ್ಲಿನ ಪೂಜಾರಿಯೆಂದು ತಿಳಿಯಿತು. ದಾರಿಹೋಕರು, ಅದರಲ್ಲೂ ಕಾರಿನಲ್ಲಿ ಸಾಗಿಬರುವ ದೈವಭಕ್ತ ದಾರಿಹೋಕರಿಂದ ಅಲ್ಪಸ್ವಲ್ಪ ಮಂಗಳಾರತಿ ತಟ್ಟೆ ದುಡ್ಡು ಸಿಕ್ಕುವ ಆಸೆಯಿಂದ ಕಾರುಗಳನ್ನು ಕಂಡಾಕ್ಷಣ ರಸ್ತೆ ಬದಿಗೆ ಬರುತ್ತಿದ್ದನು. ಆದರೆ ಗಾಡಿಯನ್ನು ನಿಲ್ಲಿಸದೇ ಮುಂದೆ ಹೋಗಿದ್ದರಿಂದ ಪೆಚ್ಚಾಗಿ ಮರಳಿದನು. ಶನಿದೇವನ ದೇವಸ್ಥಾನದಿಂದ ಸ್ವಲ್ಪ ಮುಂದೆ , ಅದಕ್ಕೆ ಸ್ಪರ್ಧಿಯಾಗಿ ಒಂದು ಮಾರುತಿ ದೇವಾಲಯವಿತ್ತು. ಅಲ್ಲಿಯೂ ಕಾರು ನಿಲ್ಲಿಸದಿದ್ದರಿಂದ ಅಲ್ಲಿನ ಪೂಜಾರಿಯೂ ನಿರಾಶನಾಗಿ ಮರಳಿದ. ಭೂಲೋಕದ ಜನರಿಗೆ ಏಳುವರ್ಷ ಕಾಟಕೊಟ್ಟು ಭಯಪಡಿಸುವ ಶನಿದೇವ ಹಾಗು ರಾಮಭಕ್ತ ಹನುಮನ ಈ ವಿಚಿತ್ರ ಸ್ಪರ್ಧೆಯಲ್ಲಿ ಯಾರು ಹೆಚ್ಚಾಗಿ ಗೆಲ್ಲುತ್ತಿದ್ದರೆಂದು ತಿಳಿಯಲಿಲ್ಲ.ಮುಂದೆ ಒಂದು ಸೂರ್ಯಕಾಂತಿಯ ಹೊಲವನ್ನು ಕಂಡಾಗ, ಸೂರ್ಯಕಂತಿಯನ್ನು ನೋಡಿ ವರ್ಷಗಳೇ ಕಳೆದಿವೆಯೆಂಬ ವಿಚಾರ ಗಮನಕ್ಕೆ ಬಂದಿತು. ನನ್ನ ತಾತನ ಹೊಲದಲ್ಲಿ ಸೂರ್ಯಕಾಂತಿಯನ್ನು ಒಮ್ಮೆ ಬಿತ್ತನೆ ಮಾಡಿದ್ದರು. ಸರಿಯಾದ ಇಳುವರಿ ಸಿಕ್ಕದಿದ್ದರಿಂದ, ಮತ್ತೆ ಅಕ್ಕಿಗೆ ಮರಳಿದರು. ಬಹುಶಃ ಅದೇ ಕೊನೆಯ ಬಾರಿ ಸೂರ್ಯಕಾಂತಿಯನ್ನು ನೋಡಿದ್ದು.ಹೆಸರಿಗೆ ತಕ್ಕಂತೆ ಸೂರ್ಯನೆಡೆಗೆ ಮುಖಮಾಡಿದ್ದ ನಿಂತಿದ್ದ, ಹಳದಿ ಮಿಶ್ರಿತ ಅರಿಸಿನ ಬಣ್ಣದ ಸೂರ್ಯಕಾಂತಿಗಳ ನೆನಪು ಒಂದೆರಡು ದಿನ ಹಸಿರಾಗಿಯೇ (ಕ್ಷಮಿಸಿ ಹಳದಿಯಾಗಿಯೇ) ನಿಂತಿತ್ತು.
ಅಂತೂ ಗೊರವನಹಳ್ಳಿಗೆ ತಲುಪಿದಾಗ , ಆ ದೇವಸ್ಥಾನ ಹಳ್ಳಿಯಿಂದ ೨-೩ ಕಿಲೋಮೀಟರ್ ದೂರವಿರುವ ವಿಚಾರ ತಿಳಿದು, ಮುಂದೆ ಸಾಗಿದೆವು. ೧೯೭೨ರಲ್ಲಿ ಕಮಲಮ್ಮ ಎಂಬುವರಿಗೆ ಈಗಿರುವ ದೇವಸ್ಥಾನದ ಹತ್ತಿರದಲ್ಲೇ ಹರಿಯುವ ಹೊಳೆಯಲ್ಲಿ ಲಕ್ಷ್ಮೀ ವಿಗ್ರಹ ಸಿಕ್ಕಿತೆಂದೂ, ಅದನ್ನು ಇಲ್ಲಿ ಪ್ರತಿಷ್ಟಾಪಿಸಿ ಸಣ್ಣ ದೇಗುಲವೊಂದನ್ನು ನಿರ್ಮಿಸಿದರಂತೆ.ಮೂವತ್ತು ವರ್ಷಗಳಲ್ಲಿ ದಾರಿಯಲ್ಲಿ ಸಿಕ್ಕ ಬಿರುಕುಗೋಡೆಯ ದೇವಸ್ಥಾನಗಳಂತಿದ್ದ ಈ ದೇವಸ್ಥಾನವು ಈಗ granite ನೆಲವಿರುವ ಕಾಂಕ್ರೀಟ್ ಕಟ್ಟಡವಾಗಿದೆ.ಕಾರಿನಿಂದಿಳಿದೊಡನೆ ಪೂಜಾ ಸಾಮಗ್ರಿಗಳನ್ನು ಮಾರುವವರು ನಮ್ಮನ್ನು ಸುತ್ತುವರೆದರು. “ಬೇಕಿದ್ದರೆ ಕೊಳ್ಳುತ್ತೇವೆ, ಒತ್ತಾಯ ಮಾಡಬೇಡಿ” ಎಂದು ನಾನು ಗದರಿಸಿದರೂ, ಮತ್ತೆ-ಮತ್ತೆ ಕಾರಿನಲ್ಲಿದ್ದವರನ್ನು ಸುತ್ತುವರೆದು ಪೀಡಿಸುತ್ತಿದ್ದರು. ಡಿಸ್ಕವರಿ ಚಾನಲ್ ನಲ್ಲಿ ಬೇಟೆಯ ಪಳೆಯುಳಿಕೆಗೆ ರಣಹದ್ದುಗಳು ಕಚ್ಚಾಡುವಾಗ ನಿರ್ಮಾಣವಾಗುವ ದೃಶ್ಯಕ್ಕೂ, ಇಲ್ಲಿ ನಿರ್ಮಾಣವಾಗುತ್ತಿದ್ದ ದೃಶ್ಯಕ್ಕೂ ಕ್ರೂರವಾದ ಸಾಮ್ಯಾಂಶವಿತ್ತು. ಆದಷ್ಟು ಬೇಗ ದೇವಸ್ಥಾನದೆಡೆ ಎಲ್ಲರೂ ನಡೆಯುವಾಗ ಕೋಪದೊಡನೆ ನಿಸ್ಸಹಾಯಕತೆಯ ಗೊಣಗಾಟ ಬಾಯಲ್ಲಿತ್ತು.ದೇವಾಲಯವನ್ನು ಪ್ರವೇಶಿಸುವ ಮುನ್ನ ಭಕ್ತಾದಿಗಳು ಸಾಲಾಗಿ ಬರಲೆಂದು ಮಾಡಿಸಿರುವ ಕಂಬಿಗಳು ಸಿಕ್ಕವು. ಇಂತಹ ಸಾಲುಗಳು ಪ್ರತಿಯೊಂದು ಪ್ರಸಿದ್ಧ “ಪುಣ್ಯಕ್ಷೇತ್ರ” ಗಳಲ್ಲೂ ಕಾಣಬಹುದು. ಪ್ರತಿ ಸಾಲಿಗೂ ಭಕ್ತಾದಿಗಳು ಸಂದಾಯ ಮಾಡುವ ಹಣದ ಆಧಾರದ ಮೇಲೆ ದರ್ಶನ ಅವಧಿ, ಗರ್ಭಗುಡಿಯ ಸಾಮಿಪ್ಯ , ವಿಶೇಷ ಪೂಜೆ ಮುಂತಾದುವುಗಳು ನಿರ್ಧಾರವಾಗುವುದು. ನಾವೆಲ್ಲರೂ ಇಂತಹ ಒಂದು ವಿಶೇಷವಾದ ಸಾಲುಗಳಲ್ಲಿ ನಿಂತು, ಬಹು ಬೇಗನೆ ದೇವಸ್ಥಾನದೊಳಕ್ಕೆ ಹೊಕ್ಕೆವು. Granite ನೆಲದ ಮೇಲೆ ಕುಳಿತಿದ್ದ ಭಕ್ತಾದಿಗಳನ್ನು ಗರ್ಭಗೃಹಕ್ಕೆ ಹೋಗುವ ದಾರಿಯ ಕಂಬಿಗಳು ಬೇರ್ಪಡಿಸುತ್ತಿದ್ದವು. ಗರ್ಭಗೃಹದ ಇಕ್ಕೆಲಗಳಲ್ಲಿ ಎರಡು ಲಕ್ಷ್ಮೀದೇವಿಯ ವಿಗ್ರಹಗಳಿದ್ದವು. ಗರ್ಭಗೃಹದೊಳಗೆ ಹೊಳೆಯಲ್ಲಿ ಸಿಕ್ಕ ಮೂರ್ತಿಯನ್ನು ಪ್ರತಿಷ್ಟಾಪಿಸಿದ್ದರು. ದೇವಸ್ಥಾನದ ಒಳಾಂಗಣದಲ್ಲಿ ಎಲೆಕ್ಟ್ರಾನಿಕ್ ಡೋಲುಗಳು, ಹುಂಡಿಗಳು ಹಾಗು ಒಂದು ಪ್ರಸಾದದ ಅಂಗಡಿ ಕೂಡ ಇತ್ತು. ಅರ್ಚನೆ ಹಾಗು ವಿಶೇಷ ಪೂಜೆಗಾಗಿ ಬಲವಂತವಾಗಿ ನಮಗೆ ಮಾರಲಾಗಿದ್ದ ಪೂಜಾ ಸಾಮಗ್ರಿಗಳನ್ನು ಪೂಜಾರಿಗೆ ಕೊಟ್ಟು ನಾವೂ ಭಕ್ತಾದಿಗಳ ಸಾಲಿನಲ್ಲಿ ಕುಳಿತೆವು.ಮಂಗಳಾರತಿ ಮುಗಿದು ತಟ್ಟೆಯನ್ನು ಒಳಾಂಗಣಕ್ಕೆ ತಂದಾಗ ಎಲ್ಲರೂ ಎದ್ದು ನಿಂತು , ಮಂಗಳಾರತಿ ತಟ್ಟೆ ಕೈಯೊಡ್ಡುವ ಸ್ಪರ್ಧೆ ಏರ್ಪಟ್ಟಿತು. ಜೊತೆಗೆ, ಸ್ಪರ್ಧೆಗೆಂಬಂತೆ ಹಾಕುತ್ತಿದ್ದ ಒಂದು –ಎರಡು ರೂಪಾಯಿ ನಾಣ್ಯಗಳು ತಟ್ಟೆಗೆ ಸೋಕಿ ಠಣ್ ಠಣ್ ಸದ್ದು ಮಾಡುತ್ತಿದ್ದವು. ನಂತರ ತೀರ್ಥಕ್ಕೂ, ಶಠಾರಿಗೂ ಇಂತಹ ಸ್ಪರ್ಧೆ ಗಳು ಏರ್ಪಟ್ಟವು.
ಅಮ್ಮ ನನ್ನ ಬಳಿ ಬಂದು “ನೋಡು ಚೀಕು, ನಿನಗೆ ಕೆಲಸ ಸಿಕ್ಕರೆ ಹುಂಡಿಗೆ ೧೦೦೦ ರೂಪಾಯಿ ಹಾಕ್ತೀನಿ ಅಂತ ಹರಸ್ಕೊಂಡಿದ್ದೆ “ ಎಂದಾಗ ದುಡ್ಡನ್ನು ಪರ್ಸಿನಿಂದ ತೆಗೆದು ಹಾಕಿಬಿಟ್ಟೆ. ನಾನೇನು “ಮಾತೃವಾಕ್ಯ ಪರಿಪಾಲಕ”ನಲ್ಲದಿದ್ದರೂ ಅವರ ಮಾತುಗಳಲ್ಲಿ ತರ್ಕಾತೀತವಾದ ನ್ಯಾಯ ಕಂಡಿತು. ಅದನ್ನು ಅರ್ಥೈಸಲು ನನಗೆ ಇಲ್ಲಿಯವರೆಗೆ ಸಾಧ್ಯವಾಗಿಲ್ಲ. ಅರ್ಚನೆ, ವಿಶೇಷಪೂಜೆಗಳೆಲ್ಲ ಮುಗಿದ ಮೇಲೆ ದೇವಸ್ಥಾನದಿಂದ ಹೊರಬಂದಾಗ ಒಬ್ಬ ಚಿಕ್ಕ ಹುಡುಗ ನನ್ನ ಬಳಿಬಂದು ಭಿಕ್ಷೆ ಬೇಡತೊಡಗಿದನು. ನನ್ನ ಬಳಿ ಚಿಲ್ಲರೆ ಇಲ್ಲದ್ದರಿಂದ ಅಮ್ಮನನ್ನು ಕೇಳಿದಾಗ “ಚೀಕು ಒಬ್ಬರಿಗೆ ಕೊಟ್ರೆ ಎಲ್ರೂ ಸುತ್ಕೋತಾರೆ, ನೀನು ಸುಮ್ನಿರು” ಎಂದರು. ಅದಕ್ಕೆ “ಹುಂಡಿಗೆ ಸಾವಿರ ರೂಪಾಯಿ ಹಾಕಲು ಮೀನಾಮೇಷ ನೋಡ್ಲಿಲ್ಲ , ಈಗ ಒಂದು ರೂಪಾಯಿ ಕೊಡೋಕ್ಕೆ ಯಾಕೆ ಸಂಕೋಚ ? “ ಎಂದು ಖಾರವಾಗಿ ನುಡಿದುಬಿಟ್ಟೆ. ಅಮ್ಮನ ಮನಸ್ಸಿಗೆ ನೋವಾಗಿ ಒಂದು ರೂಪಾಯಿ ತೆಗೆದುಕೊಟ್ಟರು. ಇದ್ದಕ್ಕಿದ್ದಂತೆ ಅಲ್ಲಿ ಹಲವರು ಭಿಕ್ಷೆಗಾಗಿ ಸುತ್ತುವರೆದರು. ಅಮ್ಮನನ್ನು ನೋಯಿಸಿದ್ದಕ್ಕೆ ಮತ್ತು ನನ್ನ ಮೂರ್ಖತನಕ್ಕೆ ನನ್ನನ್ನೇ ಬೈದುಕೊಂಡೆ, ಜೊತೆಗೆ ಅಲ್ಲಿ ಸೇರಿದ್ದವರನ್ನೆಲ್ಲಾ ಗದರಿಸಿ ಕಳುಹಿಸಿದೆ. ಇಂತಹ “ಪುಣ್ಯಕ್ಷೇತ್ರ”ಗಳಿಗೆ ಬರುವವರಲ್ಲಿ ಭಕ್ತರೂ, ಭಕ್ತಿ ಬಿಟ್ಟು ಬೇರೆ ಕಾರಣಗಳಿಗೆ ಬರುವ ಜನರನ್ನು ಸೇರಿರುವದರಿಂದಲೇನೋ “ಭಕ್ತಾದಿಗಳು” ಎಂಬ ಪದ ರೂಢಿಗೆ ಬಂದಿರುವುದು. ಆ “ಆದಿ” ಗಳ ಪಂಗಡಕ್ಕೆ ನಾನೂ ಸೇರಿರಬೇಕೆನ್ನಿಸಿಬಿಟ್ಟಿತು.
ಪಕ್ಕದಲ್ಲೇ ಇದ್ದ ಕಮಲಮ್ಮನವರ ವೃಂದಾವನಕ್ಕೆ ಭೇಟಿಕೊಟ್ಟಾಗ , ಅಲ್ಲಿ ಮತ್ತೆ ಪೂಜಾಸಾಮಗ್ರಿಗಳನ್ನು ಎಲ್ಲರೂ ಕೊಳ್ಳತೊಡಗಿದರು. ಅಲ್ಲಿದ್ದ ಪೂಜಾರಿಯೊಬ್ಬ ವ್ರತದ ಸಾಮಗ್ರಿಗಳಾದ ಲಕ್ಷ್ಮೀ ದೇವಿಯ ಚಿತ್ರ, ಸ್ವಲ್ಪ ನಾಣ್ಯಗಳನ್ನು ಯಾರಿಗೂ ಅರ್ಥವಾಗದ ರೀತಿಯಲ್ಲಿ ಮಂತ್ರಿಸಿ, ಅದೇ ಸ್ಪಷ್ಟತೆಯೊಂದಿಗೆ ವ್ರತದ ವಿಧಿವಿಧಾನಗಳನ್ನು ವಿವರಿಸಿದನು. ಹತ್ತಿರದಲ್ಲೇ ಇನ್ನೊಬ್ಬ ಪೂಜಾರಿ “ಸರ್ವದುಃಖಪರಿಹಾರಕ, ಸರ್ವಸುಭೀಕ್ಷದಾಯಕ” ವಾದ ಮಂತ್ರಿಸಿದ ತಾಯತಗಳನ್ನು ಕೇವಲ ಹತ್ತು ರೂಪಾಯಿಗೆ ಮಾರುತ್ತಿದ್ದನು. “ಸಾಲದ ತೊಂದರೆ, ಹಣಕಾಸಿನ ಮುಗ್ಗಟ್ಟು, ಕಂಕಣಬಲ ಕೂಡಿಬರದಿರುವುದು ಮುಂತಾದ ತೊಂದರೆಗಳನ್ನು ನಿವಾರಿಸಲು ನಿನ್ನೆ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ತಾಯತಗಳನ್ನು ಮಂತ್ರಿಸಲಾಗಿದೆ, ಪ್ರತಿಯೊಂದಕ್ಕೆ ಕೇವಲ ಹತ್ತು ರೂಪಾಯಿ, ಕೆಲವೇ ಮಾತ್ರ ಉಳಿದಿವೆ” ಎಂದು ಸಾರಿ ಸಾರಿ ಹೇಳುತ್ತಿದ್ದನು. ಪಾಪ ಯಾರು ಅವನೆಡೆಗೆ ಗಮನಕೊಡುತ್ತಿರಲಿಲ್ಲ.
ವೃಂದಾವನದ ಭೇಟಿಯ ನಂತರ ಬೆಂಗಳೂರಿಗೆ ಹಿಂದಿರುಗಲು ನಿರ್ಧರಿಸಿ , ದಾರಿಯಲ್ಲಿ ಯಾವುದಾದರೊಂದು ಹೋಟಲ್ ನಲ್ಲಿ ಊಟಮಾಡುವ ಆಲೋಚನೆಯೊಂದಿಗೆ ಕಾರನ್ನು ಏರಿದೆವು. ಬಹಳ ಆಯಾಸವಾಗಿದ್ದರಿಂದ ಯಾರೂ ಹೆಚ್ಚು ಮಾತನಾಡುತ್ತಿರಲಿಲ್ಲ.ಕಾರು ಹೊರಟು ತಂಪು ಗಾಳಿ ಬೀಸತೊಡಗಿದಾಗ ಕಾರಿನಲ್ಲಿ ಹರಟೆಗಳು ಕೊನರತೊಡಗಿದವು. ಪಕ್ಕ ಕುಳಿತಿದ್ದ ವಿಜೇತ “ನೀನು ಇಂಡಿಯನ್ ಐಡಲ್ ನ ಫೈನಲ್ಸ್ ನೋಡಿದೆಯ ? ಗೆದ್ದವನು ಎಷ್ಟು ಸೊಗಸಾಗಿ ಹಾಡ್ದಾ ! “ ಎಂದು ಉತ್ಸಾಹಭರಿತ ಕೇಳಿದಳು.
“ಆ ಪ್ರೊಗ್ರಾಮ್ ಬರಿ ಮೋಸ, ಯುವ ಸಂಗೀತಗಾರರಿಗೆ ಪ್ರೋತ್ಸಾಹ ಕೊಡುವುದು ಅದರ ಉದ್ದೇಶವಲ್ಲ,ಆ ಸ್ಪರ್ಧೆಯಲ್ಲಿ ಭಾಗವಹಿಸಿಸುವವರ ಅಳು, ನಗು , ಭಯಗಳಂತಹ ಭಾವನೆಗಳನ್ನು ಸೆರೆಹಿಡಿದು ಟಿವಿಯಲ್ಲಿ ಬಿತ್ತರಿಸಿ ಕಾಸುಮಾಡಿಕೊಳ್ಳುವುದೇ ಒಳ ಉದ್ದೇಶ” ಎಂದು ತಿರಸ್ಕಾರದ ದನಿಯಿಂದ ಉತ್ತರಿಸಿದೆ. ನನ್ನ ಪ್ರಲಾಪವನ್ನು ಕೇಳಿ ವಿಜೇತಾಳ ಮುಖದಲ್ಲಿದ್ದ ಉತ್ಸಾಹವೆಲ್ಲ ಇಳಿದುಹೋಗಿ “ನೀನು ಹೇಳುವುದು ನೀಜ” ಎಂದು ತಲೆಯಾಡಿಸುತ್ತಾ ಬಲವಂತದ ನಗೆ ಬೀರಿದಳು. ಹೈವೇ ಬದಿಯಲ್ಲಿ ಹೋಟಲ್ ಗಳನ್ನು ಹುಡುಕುವ ಕೆಲಸವನ್ನು ಕಣ್ಣುಗಳಿಗೆ ಕೊಟ್ಟಿದ್ದರಿಂದ ಮುಂದೆ ಹೆಚ್ಚು ಮಾತು ಬೆಳೆಯಲಿಲ್ಲ. ಜಾಲಹಳ್ಳಿಯ ಬಳಿ ಹೊಟೆಲ್ಲೊಂದು ಕಂಡೊಡನೆ, ಬೇಗನೆ ಒಳಹೊಕ್ಕು ಹೊಟ್ಟೆಯ ಹಸಿವಿನ ಆರ್ಭಟಗಳನ್ನು ತಣಿಸಿದ ಮೇಲೆ ಮತ್ತ ಅದೇ ಲವಲವಿಕೆಯಿಂದ ಕೂಡಿದ ಹರಟೆ ಪ್ರಾರಂಭವಾಯಿತು. ನನ್ನ ದೊಡ್ಡಮ್ಮ ಅಂದು ತಮ್ಮ ಪರಿಚಯದವರ ಮನೆಯ ಗೃಹಪ್ರವೇಶಕ್ಕೆ ಹೋಗಬೇಕೆಂದು ಹೊರಡುವಾಗಲೇ ಹೇಳಿದ್ದರಿಂದ ದಾರಿಯಲ್ಲೇ ಇದ್ದ ಆ ಮನೆಗೆ ಹೋಗಲು ಎಲ್ಲರೂ ನಿರ್ಧರಿಸಿದೆವು. ಆ ಮನೆಗೆ ತಲುಪುವ ದಾರಿ ತಿಳಿಯದೇ ಸುತ್ತಾಡಿ , ನಂತರ ಸರಿದಾರಿಯಲ್ಲಿ ಸಾಗುವಾಗ ಕಾಡಿನಂತಹ ವೃಕ್ಷಸಮೂಹ ರಸ್ತೆಯ ಇಕ್ಕೆಲಗಳನ್ನು ಆವರಿಸಿತ್ತು. ಬಹುಶಃ ಪು.ಚಂ.ತೇಜಸ್ವಿ ಯವರ “ಜಾಲಹಳ್ಳಿಯ ಕುರ್ಕ” ಕಥೆಯಲ್ಲಿ ಅವರು ಪ್ರಸ್ತಾಪ ಮಾಡುವ ಜಾಲಹಳ್ಳಿ ಬಳಿಯಿರುವ ಕೃತಕ ಸರ್ಕಾರಿ ಕಾಡು ಇದೇ ಆಗಿರಬೇಕೆನ್ನಿಸಿತು. ಅಲ್ಲೇ ಇದ್ದ ಅರಣ್ಯ ಇಲಾಖೆ ಬೋರ್ಡ್ ನನ್ನ ಅನುಮಾನಕ್ಕೆ ಪುಷ್ಟಿಕೊಡುವಂತಿತ್ತು. ಆದರೆ ಅದರಿಂದ ಸ್ವಲ್ಪ ದೂರದಲ್ಲೇ ಲೇಔಟ್ ಒಂದು ನಿರ್ಮಾಣವಾಗುತ್ತಿದ್ದುದ್ದನ್ನು ಆಶ್ಚರ್ಯವಾಯಿತು.ನಾವು ಹೋಗಬೇಕಿದ್ದ ಮನೆ ತಲುಪಿದಾಗ ಅಲ್ಲಿ ಮನೆ ಮಾಲೀಕರಿರಲಿಲ್ಲ. ಅವರಿಗೆ ಫೋನಾಯಿಸಿದಾಗ “ಇನ್ನೇನು ಹತ್ತು ನಿಮಿಷದಲ್ಲಿ ಬಂದುಬಿಡುವೆವು “ ಎಂದು ಹೇಳಿದರು. ಮನೆಮಾಲೀಕರ ಸಮಯಪಾಲನೆಯ ಪ್ರಾಮಾಣಿಕತೆಯನ್ನು ನೋಡಿಯೇ IST ಎಂಬುದಕ್ಕೆ “Indian Streachable Time” ಎಂಬ ವಿಸ್ತೀರ್ಣ , ತುಂಬಾ ಅರ್ಥಪೂರ್ಣವಾಗಿ ತೋರುತ್ತಿತ್ತು. ಅವರು ಎಷ್ಟುಹೊತ್ತಾದರೂ ಬಾರದಿದ್ದ ರಿಂದ ಎದುರಿಗೆ ಇದ್ದ ಮೈದಾನದಲ್ಲಿ ಕ್ರಿಕೆಟ್ ಆಡುವುದನ್ನು ನೋಡುತ್ತಾ ನಿಂತೆ.ಪಕ್ಕದಲ್ಲೆ ಒಂದು ಸ್ಮಶಾನವನ್ನು ನೋಡಿದಾಗ, ಮೈದಾನ ಹಾಗು ಸ್ಮಶಾನ ಎರಡೂ ಮನೆಯ ಎದುರು ಇರುವ ವಿಚಾರ ಗಮನಕ್ಕೆ ಬಂತು. ಸ್ಮಶಾನದಲ್ಲಿ ಮೃತದ ಸಂಭಂಧಿಕರ ಗೋಳಾಟ ಹಾಗು ಮೈದಾನದಲ್ಲಿ ಆಡುತ್ತಿರುವ ಹುಡುಗರ ನಗು, ಕೇಕೆಗಳನ್ನು ಒಟ್ಟಿಗೆ ಕೇಳಿ-ಕಾಣುವ ವಿಚಿತ್ರ ಪ್ರಸಂಗ ಆ ಮನೆಯಲ್ಲಿ ವಾಸಿಸುವವರಿಗೆ ಎದುರಾಗಬಹುದೆಂಬ ಯೋಚನೆ ಬಂದು ನಗು ಬಂತು. ಅಷ್ಟರಲ್ಲಿ ಮನೆಮಾಲೀಕರು ಬಂದು ಸ್ವಾಗತ, ಗೌರವ, ಬೀಳ್ಕೊಡುವ ಶಿಷ್ಟಾಚಾರಗಳೆಲ್ಲ ಮುಗಿದಮೇಲೆ ಬೆಂಗಳೂರಿನ ಹಾದಿ ಹಿಡಿದೆವು. ಮನೆಗೆ ಬಂದು ಹಾಸಿಗೆ ಮೇಲೆ ಧೊಪ್ಪನೆ ಬಿದ್ದು ಮಲಗಿದಾಗ ನಿದ್ದೆ ಸರಾಗವಾಗಿ ಬಂದಿತು.

Tuesday, March 14, 2006

ರಂಗಸ್ಥಳ

ನಿಸರ್ಗವೇ ಹೀಗೆ. ಮನುಷ್ಯನು ಯೋಚಿಸಲು ಪ್ರಾರಂಭಿಸಿದಾಗಿನಿಂದಲೂ, ತನ್ನ ಸೌಂದರ್ಯದಿಂದ ಅವನನ್ನು ಆಕರ್ಷಿಸಿ ತನ್ನ ಆರಾಧಕನನ್ನಾಗಿಸುವುದು. ನಿಸರ್ಗದ ಸೌಂದರ್ಯವನ್ನು ವರ್ಣಿಸುವ ಕವಿಗಳ ಕೊನೆಯಿಲ್ಲದ ಸಾಲು ಇದಕ್ಕೆ ಸಾಕ್ಷಿ.ಆದರೆ ಅದೇ ಸೌಂದರ್ಯದೊಳಗೆ ಅಡಗಿರುವ ಭೀಕರತೆ ಕಂಡವರು ಕೆಲವೇ ಮಂದಿ. ಆ ಭೀಕರತೆಯನ್ನು ಕಂಡವರು ನಿಸರ್ಗದ ನಿಷ್ಕರುಣ ವ್ಯವಸ್ಥೆಗೆ ತಲೆದೂಗಿ ಗೌರವಿಸುವುದುಂಟು. ಇದು ಎಲ್ಲರಿಗೂ ಸಾಧ್ಯವಾಗದ ಕೆಲಸ. ನಿಸರ್ಗವನ್ನು ಹತ್ತಿರದಿಂದ ನೋಡಿರದಿದ್ದರೆ ಅದನ್ನು “ಕವಿಗಣ್ಣಿ”ನಿಂದ ನೋಡಿದಾಗಲೇ ಅದನ್ನು ಗೌರವದಿಂದ ಕಾಣಲು ಸಾಧ್ಯ. ಬಹುಶಃ ಇದು ನಿಸರ್ಗದ ಭೀಕರತೆಯ ಮುಖವನ್ನು ಬದಿಗಿಟ್ಟು, ಅದರ ಸೌಂದರ್ಯವನ್ನು ಹೊಗಳುವ,ಗೌರವಿಸುವ ಪ್ರಯತ್ನ. ಹೀಗೆ ನೋಡಿದಾಗಲೇ ನಿಸರ್ಗವನ್ನು ಕಾಪಾಡಬೇಕೆಂಬ ಮನಸ್ಸಾಗುವುದು.

ಅಂದು ನಿಸರ್ಗವನ್ನು ರಂಗಸ್ಥಳವಾಗಿ ಕಂಡಾಗ, ಅದರ ಸ್ತಬ್ಧಚಿತ್ರವನ್ನು ಮನಸ್ಸಿನಲ್ಲೇ ಹಿಡಿದಿಡಬೇಕೆಂಬ ಪ್ರಯತ್ನವೇ ಇಲ್ಲಿನ ಕಥನವಸ್ತು. ಈ ಕಥನವು ನಿಸರ್ಗ ವರ್ಣನೆ ಮಾಡುವ ಕಥನಗಳ ಅನಂತ ಸಾಲಿನಲ್ಲಿ ಕರಗಿಹೋದರೂ, ಮನಸ್ಸಿನಲ್ಲಿ ಕರಗದಿರಲಿ ಎಂಬ ಆಶಯ.

ಕಾರಿನೊಳಗಿಂದ ಹೊರಗೆ ಇಣುಕಿ ನೋಡಿದಾಗ ಮೋಡಗಳ ಗುಂಪುಗಳು ಆಕಾಶದಲ್ಲೆಲ್ಲಾ ಚದುರಿತ್ತು.ಕೆಲವೆಡೆ ಪುಟ್ಟ ಪುಟ್ಟ ಬಿಡಿ ಮೋಡಗಳಿದ್ದರೆ, ಮತ್ತೆ ಕೆಲವೆಡೆ ಬೃಹದಾಕಾರದ ಒಂದೇ ಮೋಡ ಆಕಾಶವನ್ನು ನುಂಗುವ ವ್ಯರ್ಥ ಪ್ರಯತ್ನದಲ್ಲಿ ನಿರತವಾಗಿತ್ತು. ಇಂತಹ ಪ್ರಯತ್ನದಲ್ಲೇ ತೊಡಗಿದ್ದ ಅದೆಷ್ಟು ಮೋಡಗಳನ್ನು ಆಗ ನೋಡಲಿಲ್ಲ ? ಬಿಳಿ ಮೋಡ, ಕರಿ ಮೋಡ, ಚಪ್ಪಟೆ ಮೋಡ ಹೀಗೆ ವಿವಿಧ ಸಾಮನ್ಯ ವರ್ಣವಿನ್ಯಾಸಗಳ ಮೋಡಗಳಿಂದ ಪ್ರಾರಂಭವಾಗಿ , ವರ್ಣಶಿಲ್ಪಿಯ ಅರೆಬರೆ ಚಿತ್ರಗಳನ್ನು ಹೋಲುವ ಕ್ಲಿಷ್ಟ ವಿನ್ಯಾಸಗಳ ಮೋಡಗಳನ್ನು ನೋಡಿದ್ದಾಯಿತು. ಅಂದು ಆ ಮೋಡಗಳು ವಾತಾವರಣದಲ್ಲಿನ ತುಂಟತನವನ್ನೇ ಅನುಕರಿಸಿತ್ತಿದ್ದವೆನ್ನಿಸುತ್ತಿತ್ತು.ದೂರದಿಂದ ಕಂಡಾಗ, ಮಳೆಗರೆಯುವ ಕಾರ್ಮೋಡಗಳಂತೆ ತೋರಿ, ಹತ್ತಿರವಾದೊಡನೆ ಶಾಂತ ತೇಲುವ ಮೋಡಗಳಂತೆ ಮಾರ್ಪಾಡಾಗುತ್ತಿತ್ತು. ಈ ತುಂಟತನಕ್ಕೆ ಪಾಪ ಅವುಗಳು ಹೊಣೆಗಾರರಲ್ಲವೇ ಅಲ್ಲ. ಆ ಮೋಡಗಳ ಹೊಳೆಯುತ್ತಿರುವ ಅಂಚನ್ನು ಕಂಡಾಗ ನಿಜವಾದ ತುಂಟನನ್ನು ಪತ್ತೆ ಹಚ್ಚಬಹುದಿತ್ತು. ಅವನು ಆಗಾಗ್ಗೆ ಹೊರಬಂದು ಮುಖವನ್ನು ತೋರಿ ಮತ್ತೆ ಮೋಡಗಳೊಳಗೆ ಬಚ್ಚಿಟ್ಟುಕೊಳ್ಳುವ ಕಳ್ಳಾಟವಾಡುತ್ತಿದ್ದನು.ಆ ಮೋಡಗಳೂ ಸಹ ಅವನ ಈ ಕಳ್ಳಾಟದಲ್ಲಿ ಸಹಕರಿಸಿ, ಅವನ ಕಾಂತಿಯನ್ನು ತಡೆಯುವ ಶತಪ್ರಯತ್ನ ಮಾಡುತ್ತಿದ್ದವು.ಆದರೆ ಗಾಳಿಯ ರಭಸಕ್ಕೆ ಸಿಲುಕಿ ದಿಕ್ಕಾಪಾಲಾಗಿ ಚದುರಿದಾಗ ನಿರ್ವಾಹವಿಲ್ಲದೆ, ಅವಿತ ರವಿಯು ಹೊರಬಂದು, ಮತ್ತೊಮ್ಮೆ ಮೋಡಗಳ ಮರೆಯಲ್ಲಿ ಮರೆಯಾಗುವವರೆಗೆ ಬೆಳಕಿನ ಕಣಗಳನ್ನು ಧರೆಗಿಳಿಸಬೇಕಾಗುತ್ತಿತ್ತು.ತನ್ನ ಸೌಂದರ್ಯವನ್ನು ಪ್ರದರ್ಶಿಸಲು ಕಾತರಳಾಗಿದ್ದ ಧರಿತ್ರಿ,ಬೆಳಕಿನ ಮಳೆಯಲ್ಲಿ ಕುಣಿದಾಡತೊಡಗಿದಳು. ರಸ್ತೆಯನ್ನು ಸಾಲುಗಟ್ಟಿದ್ದ ಸಾಸಿವೆ ಗಿಡಗಳ ಹಳದಿ ಹೂಗಳಿಗೆ ಗಾಳಿಯು ಮೆಲ್ಲನೆ ಸೋಕಿ ಅವುಗಳನ್ನು ಅತ್ತಿತ್ತ ಬಾಗುವಂತೆ ಮಾಡುತ್ತಿತ್ತು.ಮೋಡಗಳನ್ನು ತನ್ನ ಶಕ್ತಿಯಿಂದ ಚದುರುವಂತೆ ಮಾಡಿದ್ದ ಅದೇ ಗಾಳಿಯು ಈಗ ಸಾಸಿವೆ ಹೂಗಳನ್ನು ಕೋಮಲವಾಗಿ ಅಲುಗಾಡುವಂತೆ ಮಾಡಿ ತನ್ನ ಸೌಮ್ಯತೆಯ ಪ್ರದರ್ಶನ ಮಾಡುತ್ತಿತ್ತು.ಅಂದು ಅಲ್ಲಿ ಎಲ್ಲರೂ ಪ್ರದರ್ಶಕರೇ. ಬಹುಶಃ ಬೆಟ್ಟದ ಮೇಲೆ ಮೇಯುತ್ತಿರುವ ಮೊದ್ದು ದನಗಳು, ತಮ್ಮಲ್ಲೇ ಕಿತ್ತಾಡುತ್ತಾ ಗಲಾಟೆ ಮಾಡುತ್ತಿದ್ದ ಗುಬ್ಬಿಗಳು ಮಾತ್ರ ಅಪವಾದವೆನ್ನಬಹುದು.

ಅಂದು ಮುಂಜಾನೆ ತೆರೆಸರಿದಾಗಿನಿಂದ ಆ ಪ್ರದರ್ಶನ ಎಡಬಿಡದೆ ಸಾಗಿತ್ತು.ಮೋಡಗಳು ಆಗಿಂದ್ದಾಗ್ಗೆ ಮಂಕು ಕವಿಯುವಂತೆ ಮಾಡುತ್ತಿದ್ದುದು ಅವುಗಳ ಶಕ್ತಿ ಪ್ರದರ್ಶನವೇ ಆಗಿರಬಹುದು.ಆದರೂ ಆ ಪ್ರದರ್ಶನ ಅದೆಷ್ಟು ಮನಸ್ಸುಗಳನ್ನು ಕಲಕಿತ್ತೋ ? ಅದೆಷ್ಟು ಪ್ರಶಂಸಕರನ್ನು ಗಳಿಸಿತ್ತೋ ?

ಇಲ್ಲಿಯವರೆಗೂ ತಮ್ಮ ಶಕ್ತಿಯ ಮದದಲ್ಲಿ ಮುಳುಗಿದ್ದ ಮೋಡಗಳು ಕರಗಿ ಹನಿಯಾಗುವ ಸಮಯ ಬಂದಾಗ, ಅವುಗಳ ಮದವೂ ಕರಗಿ ಗಂಭೀರವಾಗಿ ಭೂಮಿಗೆ ಸೇರುತ್ತಿದ್ದವು.ಆ ಸೋನೆ ಮಳೆಯೇ ಬಹು ಹೊತ್ತು ಸುರಿದು ಆಗಸವನ್ನೆಲ್ಲಾ ಸ್ವಚ್ಛಗೊಳಿಸಿತು. ಆಕಾಶದಲ್ಲಿ ಮಿಕ್ಕ ಮೋಡಗಳು ತಮ್ಮ ಅದೃಷ್ಟವನ್ನು ನೆನೆಸುತ್ತಾ, ಸಂತೋಷದಿಂದ ಇನ್ನೂ ಮೇಲಕ್ಕೆ ಸರಿದವು. ಮಳೆ ಹನಿಯಾದ ಮೋಡಗಳಿಗೆ ಕೆಳಗಿಳಿವ ಭಯವು ಪೊಳ್ಳೆಂದೆನಿಸಿ, ನೆಲಕ್ಕೆ ಬಿದ್ದು ಸಾರ್ಥಕತೆಯಲ್ಲಿ ಸಂತೋಷವನ್ನು ಕಾಣುತ್ತಿದ್ದವು. ಈಗ ತಪ್ಪಿಸಿಕೊಳ್ಳುವ ಸ್ಥಳವಿಲ್ಲದೇ, ಸೂರ್ಯನೂ ಮಂಕಾಗಿ ನಿಲ್ಲಬೇಕಾಯಿತು.ಬಹು ಹೊತ್ತಿನಿಂದ ಈ ಆಟವಾಡಿ ದಣಿದಿದ್ದರಿಂದ ಆ ಪ್ರದರ್ಶನಕ್ಕೆ ತೆರೆ ಎಳೆಯತೊಡಗಿದನು.
ತೆರೆ ಇಳಿಯುವಾಗಲೂ, ಅಲ್ಲಿದ್ದ ಎಲ್ಲ ಪ್ರದರ್ಶಕರೂ ತಮ್ಮ ಸೌಂದರ್ಯ, ಶಕ್ತಿಗಳ ಕೊನೆಯ ನೋಟವನ್ನು ತೋರಿಸಬೇಕೆಂಬ ಶತಾಯಗತಾಯ ಪ್ರಯತ್ನ ಮಾಡುತ್ತಿದ್ದವು.ಹುಲ್ಲಿನ ಮೇಲಿನ ಮಳೆಹನಿ, ಮೋಡಗಳ ವಿವಿಧ ವಿನ್ಯಾಸ, ತಂಗಾಳಿಯ ಶಾಂತತೆಗಳೊಡನೆ ಅಂದು ಆ ರಂಗಸ್ಥಳಕ್ಕೆ ತೆರೆಬಿತ್ತು. ಆದರೂ ಅಲ್ಲಿನ ಕಲಾವಿದರ ಕಲಾ ಪ್ರದರ್ಶನದ ಕಾತರ ತಣಿಯಲಿಲ್ಲ.ನಾಳೆ ಖಂಡಿತ ತೆರೆ ಮೇಲೇರುತ್ತದೆ ಎಂಬ ನಂಬಿಕೆಯೊಂದೇ ಅವುಗಳಲ್ಲಿ ಸಮಾಧಾನ ಮೂಡಿಸಿರಬೇಕು. ಅದೇ ಸಮಾಧಾನವು ರಾತ್ರಿಯ ವಾತಾವರಣದಲ್ಲಿ ಪಸರಿಸಿ ನನ್ನಲ್ಲಿಯೂ ಅದೇ ಸಮಾಧಾನ ಭಾವ ಮೂಡಿ ಮುಂದೆ ಸಾಗಿದೆ.

Monday, February 27, 2006

ಕೊಕ್ಕರೆಗಳ ಕುಣಿತ

ಆ ರಸ್ತೆಯ ಕೆಂಪು ಗುಲ್ಮೋಹರ್ ಸಾಲುಗಳ ನೆರಳಿನಲ್ಲಿ , ಕೆಂಪಿನ ಹಬ್ಬವನ್ನು ಕಣ್ಣುಗಳು ಆಸ್ವಾದಿಸುತ್ತಾ ನಡೆದರೆ, ಕೆಲವು ದಿನಗಳಲ್ಲಿ ಗುಲ್ಮೋಹರ್ ಗಳೆಲ್ಲ ಬೋಳಾಗಿ , ಬಣ್ಣವೆಲ್ಲಾ ಮಾಯವಾಗುವ ಕೊರಗು ಕಾಡುವ ಮುನ್ನ ಎರಡು ಜೋಡಿಮನೆಗಳು ಕಾಣಸಿಗುತ್ತಿತ್ತು. ಆ ಎರಡು ಮನೆಗಳನ್ನು ಕೈತೋಟವೊಂದು ಬೇರ್ಪಡಿಸುತ್ತಿತ್ತು .
( ಹೆಸರಿಗೆ ಕೈತೋಟವಾದರೂ, ಅದನ್ನು ಎರಡೂ ಮನೆಗಳ ಯಾವ ಕೈಗಳೂ ನೀರೆರೆದು ಬೆಳೆಸಿರಲಿಲ್ಲ. ಸಂಬಳಕ್ಕಿದ್ದ ಮಾಲಿಯೊಬ್ಬನ ಬೆವರಿನ ನೀರನ್ನುಂಡು ತೋಟವು ಹೂವುಗಳಿಂದ ಕಂಗೊಳಿಸುತ್ತಿತ್ತು ).
ಒಂದು ಮನೆಯಾದರೋ, ಕೆಂಪು ಗುಲ್ಮೋಹರ್ ಗಳಂತೆ ಕೆಂಪಾಗಿ ಕಂಗೊಳಿಸುತ್ತಿತ್ತು. ಮನೆ ಮುಂದೆ ನಿಂತ ಅದೇ ಗುಲ್ಮೋಹರ್ ಕೆಂಪಿನ ಕಾರಿನೊಳಗಿಂದ ೨೮ರ ಹರೆಯದ ಯುವಕನೊಬ್ಬ ಅಗಲವಾದ ಹಾಳೆಯೊಂದನ್ನು ಓದುತ್ತಿದ್ದನು.ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದರೆ ಅದೊಂದು ಗ್ರೀಟಿಂಗ್ ಕಾರ್ಡ್ ಎಂದು, ”ಆರ್ಚೀಸ್” ಎಂಬ ಆ ಕಾರ್ಡನ್ನಿಟ್ಟ ಚೀಲದ ಮೇಲಿನ ಬರವಣಿಗೆಯಿಂದ ತಿಳಿಯುತ್ತಿತ್ತು. ಆ ವ್ಯಕ್ತಿಯ ಮುಖದಲ್ಲಿರುವ ತುಂಟತನದ ನಗುವು, ಅದು ಪ್ರಥಮ ವಿವಾಹ ವಾರ್ಷಿಕೋತ್ಸವದ ಸಂಭ್ರಮದಿಂದ ಉಂಟಾದ ನಗುವೆಂದು ತಿಳಿಸುತ್ತಿತ್ತು. ಅವನು “ಪ್ರಿಯಾ, come on, Its getting late“ ಎಂದು ನಾಲ್ಕನೇ ಬಾರಿ ಕರೆದ. ಪ್ರತಿ ಬಾರಿಯೂ “ just five minutes, ಸ್ವಲ್ಪ wait ಮಾಡು ಪ್ರತಾಪ್ “ ಎಂಬ ಅದೇ ಉತ್ತರ ಅವನಿಗೆ ದೊರೆಯುತ್ತಿತ್ತು. ಅದರಿಂದ ಬೇಸತ್ತು ಅವನು ಸುಮ್ಮನಾಗಿ , ಬೋಳು ಗುಲ್ಮೋಹರ್ ಗಳಂತೆ ಕಳೆಗುಂದಿದ ಪಕ್ಕದ ಮನೆಯನ್ನು ಒಮ್ಮೆ ನೋಡಿದರೆ, ಮತ್ತೊಮ್ಮೆ ಹೂವುಗಳಿಂದ ತುಂಬಿರುವ ಕೈತೋಟವನ್ನು ನೋಡುತ್ತಾ ಸುಮ್ಮನಾಗುತ್ತಿದ್ದನು. ಸ್ವಲ್ಪ ಹೊತ್ತಿನ ನಂತರ ಮತ್ತದೇ ಪ್ರಶ್ನೆ, ಮತ್ತದೇ ಉತ್ತರ, ಮತ್ತದೇ ನೋಟ.

ಹೀಗೆ ಪ್ರಶ್ನೆ-ಉತ್ತರ-ನೋಟ ಶೃಂಖಲೆಯ ಅದೆಷ್ಟೋ ಪುನರಾವರ್ತನಗಳ ನಂತರ ಅಂತೂ ಸಮೃದ್ಧವಾಗಿ ಅಲಂಕೃತಳಾದ ೨೬ರ ತರುಣಿಯೊಬ್ಬಳು ಹೊರಗೆ ಬಂದು ಕೈತೋಟ ದಾಟಿ ಆ ಕಳೆಗುಂದಿದ ಮನೆಯೆಡೆಗೆ ನಡೆದು ,ಕರೆಗಂಟೆಯನ್ನು ಒತ್ತಿದಳು. ಬಾಗಿಲನ್ನು ತೆರೆಯುವ ಕ್ಷೀಣ ಸದ್ದು ಸುತ್ತಲಿನ ಮೌನವನ್ನು ಭೇದಿಸಿ ಬಂದು, ಮಧ್ಯವಯಸ್ಸಿನ ಹೆಂಗಸೊಬ್ಬಳು ಹೊರಬಂದಳು.
“Aunty, ನಾವಿಬ್ಬರೂ planet Dಗೆ ಹೋಗ್ತಿದೀವಿ, ಯಾರಾದರೂ ಮನೆ ಕಡೆ ಬಂದರೆ ನನ್ನ ಮೊಬೈಲ್ ಗೆ ಫೋನ್ ಮಾಡಲು ಹೇಳಿಬಿಡಿ “ ಎಂದು ಹೇಳಿ ಉತ್ತರಕ್ಕೆ ಕಾಯದೇ ಕಾರಿನೆಡೆಗೆ ಪ್ರಿಯಾ ಮರಳಿದಳು. ಬಾಗಿಲಲ್ಲಿ ನಿಂತಿದ್ದ ಶಾಂತಿ ಕಾರಿನೆಡೆಗೆ ಕೈ ಬೀಸಿ ,ಅದು ನೋಟದಿಂದ ಮರೆಯಾಗುವ ತನಕ ಅಲ್ಲೇ ನಿಂತು, ನಂತರ ಮನೆಯೊಳಹೊಕ್ಕಾಗ ಮತ್ತೆ ಕ್ಷೀಣ ಧ್ವನಿಯಲ್ಲಿ ಬಾಗಿಲ ಚಿಲಕಹಾಕುವ ಸದ್ದು ಕೇಳಿಬಂತು.
ಆ ಮನೆಯೊಳಕ್ಕೆ ಹೊಕ್ಕರೆ ಯಾವುದೋ ಒಂದು ಹೊಸ ಲೋಕಕ್ಕೆ ಬಂದಂತೆನಿಸುತ್ತಿತ್ತು ಮನೆಯೊಳಗೆ ಮರಳುಗಾಡಿನಂತಹ ಮೌನ, ಸಂಜೆಯ ತಂಗಾಳಿಯಲ್ಲಿ ತೇಲಾಡಲು ಅಡ್ಡಿಯಾಗಿರುವ ಮುಚ್ಚಿರುವ ಕಿಟಕಿಗಳನ್ನು ಪರದೆಗಳು ಕೋಪಗೊಂಡು ನೋಡುತ್ತಿದ್ದವು.
ಪರದೆಗಳಂತೆ ಆ ಮನೆಯಲ್ಲಿದ್ದ ಮಿಕ್ಕೆಲ್ಲ ವಸ್ತುಗಳೂ ಮೌನವಹಿಸಿದ್ದವು. ಶಾಂತಿ ಸೋಫ ಮೇಲೆ ಕುಳಿತು ಸಾಪ್ತಾಹಿಕವೊಂದನ್ನು ಹಿಡಿದಿದ್ದಳು. ಆಗಲೇ ಪ್ರತಾಪನ " It's getting late" ನಿವೇದನೆಯಂತೆ ಹಲವು ಬಾರಿ ಅದರ ಪುಟಗಳನ್ನು ತಿರುವಿದ್ದರೂ ಮತ್ತೆ ಅದೇ ಪುಟಗಳನ್ನು ಅವಳ ಬೆರಳುಗಳು ತಿರುವುತ್ತಾ ಆಸಕ್ತಿಯಿಂದ ಓದುತ್ತಿರುವಂತೆ ಕಣ್ಣುಗಳು ನಟಿಸುತ್ತಿದ್ದವು.ಪತ್ನಿಯ ನಟನಾ ಕೌಶಲ್ಯದ ಪರಿವೇ ಇಲ್ಲದೆ ಮನೋಹರ ಚಾಪೆಯ ಮೇಲೆ ಮಲಗಿದ್ದ. ಶಾಂತಿಯನ್ನು ಬೈಯುತ್ತಿರುವ ಕನಸುಗಳು ಆಗಾಗ ಬಿದ್ದು " ಏನಕ್ಕೂ ಪ್ರಯೋಜನವಿರದ ಮೂದೇವಿ" "ಗೂಬೆ" ಎಂದೆಲ್ಲಾ ನಿದ್ದೆಯಲ್ಲೇ ಆಗಾಗ್ಗೆ ಕನವರಿಸುತ್ತಿದ್ದ. ನಾಲ್ಕು ಘಂಟೆಗೆ
" ಕಾಫಿ ವೇಳೆ" ಸಮೀಪಿಸುತ್ತಿದ್ದರಿಂದ ಗಾಢ ನಿದ್ದೆಯಿಂದ ಸಹಜವೆಂಬಂತೆ ಮನೋಹರನು ಎದ್ದು ಸ್ವಲ್ಪಹೊತ್ತು ಅತ್ತಿತ್ತ ನೋಡಿ, ತನ್ನ ಒಂದೇ ಹವ್ಯಾಸವಾಗಿರುವ ಟಿವಿ ವೀಕ್ಷಣೆಯಲ್ಲಿ ತೊಡಗಿದ. ಟಿವಿಯ ಚಾನೆಲ್ ಗಳನ್ನು ತಿರುವುತ್ತಾ ತನ್ನ ಅಚ್ಚುಮೆಚ್ಚಿನ " ಚಿರತೆ ಜಿಂಕೆಯನ್ನು ಬೇಟೆಯಾಡುವ ದೃಶ್ಯಾವಳಿ" ಯನ್ನು ತೋರಿಸುವ ಚಾನೆಲ್ ನನ್ನು ಹುಡುಕತೊಡಗಿದ. ಇಬ್ಬರೂ ಮತ್ತೊಬ್ಬರ ಇರುವಿಕೆಯನ್ನು ಗಮನಿಸದೆ ತಮ್ಮ -ತಮ್ಮ ಲೋಕಗಳಲ್ಲಿ ಮುಳುಗಿದ್ದರು. ಮದುವೆಯಾದ ಹಲವು ವರ್ಷಗಳ ನಂತರ ಅವರ ಮಧ್ಯೆ ಮಾತನಾಡಲು ಏನೂ ಉಳಿದಿಲ್ಲದಂತಾಗಿತ್ತು. ನಿದ್ದೆಯು ಮನೋಹರನನ್ನು ಬಿಟ್ಟು ಶಾಂತಿಯನ್ನು ಬೇಟೆಯಾಡತೊಡಗಿ,ಅವಳು ಅದಕ್ಕೆ ಸುಲಭ ತುತ್ತಾದಳು.

ಸ್ವಲ್ಪ ಹೊತ್ತಿನ ಬಳಿಕ ಪಕ್ಕದಲ್ಲಿ ಯಾರೋ ಬಂದು ಕುಳಿತಂತೆನ್ನಿಸಿ ಶಾಂತಿ ತಿರುಗಿ ನೋಡಿದಳು
ಕಿರುನಗೆ ಬೀರುತ್ತಾ ಪಕ್ಕದಲ್ಲಿ ಕುಳಿತಿದ್ದ ಮನೋಹರನನ್ನು ಕಂಡು ಆಶ್ಚರ್ಯವಾಯಿತು.
" ನಾವು planet Dಗೆ ಹೋಗಿ ಡ್ಯಾನ್ಸ್ ಮಾಡಿಬರೋಣ ಬಾ" ಎಂದು ಮನೋಹರನೆಂದಾಗ ಶಾಂತಿಗೆ ಅವನ ಮಾತುಗಳನ್ನು ನಂಬಲಾಗಲ್ಲಿಲ್ಲ.

ಹುಷಾರಗಿದ್ದೀರಿ ತಾನೆ ? " ಎಂದು ಆಶ್ಚರ್ಯಚಕಿತ ದನಿಯಲ್ಲೇ ಕೇಳಿದಳು
"ಈಗ ಹೊರಡ್ತಿಯೋ ಇಲ್ವೋ ?" ಎಂದು ಹುಸಿಕೋಪ ತೋರಿಸುತ್ತಾ ಮನೋಹರ ಕೇಳಿದ.
" ಇದ್ದಕ್ಕಿದ್ದಂತೆ ಈ ಖಯಾಲಿ ಏನಕ್ಕೆ ..... ?" ಎಂದು ಶಾಂತಿಯು ಕೇಳಲು ಹೊರಟಾಗ, ಅವಳ ಪ್ರಶ್ನೆಯನ್ನು ಅರ್ಧದಲ್ಲೆ ತಡೆದು "ಮೊನ್ನೆ ಅನಿಮಲ್ ಪ್ಲಾನೆಟ್ ನಲ್ಲಿ ಕೊಕ್ಕರೆಗಳ ಬಗ್ಗೆ ಡಾಕ್ಯೂಮೆಂಟ್ರಿಯೊಂದನ್ನು ತೊರಿಸ್ತಿದ್ರು , ಜೋಡಿ ಕೊಕ್ಕರೆಗಳು ಜೀವನವಿಡಿ ಒಟ್ಟಿಗೆ ಇರುತ್ವಂತೆ, ಅವುಗಳ ಮಧ್ಯವಿರುವ ಅನುಬಂಧವನ್ನು ಗಟ್ಟಿಮಾಡಿಕೊಳ್ಳೋಕ್ಕೆ ಆಗಾಗ್ಗೆ ಕುಣಿಯುತ್ವಂತೆ. ಅವುಗಳ ಕುಣಿತ ಎಷ್ಟು ಚೆನ್ನಾಗಿತ್ತು ಗೊತ್ತಾ !" ಎಂದು ಉತ್ಸಾಹಭರಿತವಾಗಿ ಹೇಳುವಾಗ ಅವನ ಕಣ್ಣುಗಳಲ್ಲಿ ಹೊಳಪು ಕಾಣುತ್ತಿತ್ತು.
"ಹಾಗಂತ ನಾವು ಕುಣಿಯೋದ ?" ಅಂತ ಹೇಳಬೇಕೆನ್ನಿಸಿದರೂ ಶಾಂತಿಗೆ ಮನಸ್ಸಾಗಲಿಲ್ಲ
ಶಾಂತಿ ಸ್ವಲ್ಪ ಹೊತ್ತು ಯೋಚಿಸಿ " ನನಗೆ ಅಲ್ಲೆಲ್ಲಾ ಬರೋಕ್ಕಾಗೊಲ್ಲ, ಅಷ್ಟಕ್ಕೂ rock-n-roll ವಯಸ್ಸೇ ನಮ್ಮದು ?" ಎಂದಳು.
ಮನೋಹರ ಕೊಂಚ ಬೇಸರಗೊಂಡರೂ ಸಮಾಧಾನದಿಂದ "ಸರಿ ಹಾಗಾದ್ರೆ, ಇಲ್ಲೆ ಡಾನ್ಸ್ ಮಾಡೋಣ " ಎಂದಾಗ ಅರೆಮನಸ್ಸಿನಿಂದ ಶಾಂತಿ ಒಪ್ಪಿದಳು.

ball-room ಡಾನ್ಸಿನಂತೆ ನಿಧಾನವಾಗಿ ಆ ನರ್ತನ ಪ್ರಾರಂಭವಾಗಿ ಇಬ್ಬರು ಗಿರಿ-ಗಿರಿ ಸುತ್ತತೊಡಗಿದರು.ಹತ್ತಿರದಲ್ಲೇ ಇದ್ದ ಹೂದಾನಿಗಳ ಬಗ್ಗೆ ಗಮನವಿಟ್ಟಿದ್ದರಿಂದ ಮನೋಹರನ ಕಾಲುಗಳು ಶಾಂತಿಯ ಕಾಲುಗಳಿಗೆ ತಾಗಿ ಅವಳು ಆಯತಪ್ಪಿ ಬೀಳುವಂತಾದಾಗ ಮನೋಹರನು ಅವಳನ್ನು ತನ್ನ ಕೈಚಾಚಿ ಹಿಡಿದುಕೊಂಡನು. ಎಷ್ಟೋ ಕಾಲದ ಹಿಂದೆ ಇಂತಹ ಅಕ್ಕರೆಯ ಆಸರೆಯನ್ನು ಅನುಭವಿಸಿದ ನೆನಪು ಶಾಂತಿಗೆ ಮರುಕಳಿಸಿ, ಜೀವನದ ಸಪ್ಪೆತನವನ್ನೆಲ್ಲಾ ಹೋಗಳಾಡಿಸಿ ಸಂತೋಷವನ್ನುಂಟು ಮಾಡಿತು. ಕೊನೆಯಿಲ್ಲದ ಗುಂಡಿಯೊಳಕ್ಕೆ ಬೀಳುತ್ತಿದ್ದ ತನ್ನ ಬಾಳನ್ನು ಕೊಕ್ಕರೆ ಜೋಡಿಯೊಂದು ಮತ್ತೆ ಹಿಡಿದೆತ್ತಿ , ಹೊಸ ಪ್ರಾಣಶಕ್ತಿಯ ಸಂಚಲನ ಮಾಡಿ, ಮರುಹುಟ್ಟು ನೀಡಿದೆಯೆಂದೆನ್ನಿಸಿ. ಸಿಕ್ಕಿರುವ ಎರಡನೇ ಅವಕಾಶವನ್ನು ಕಳೆದುಕೊಳ್ಳಬಾರದೆಂದು ನಿರ್ಧರಿಸಿ ಶಾಂತಿ ಮನಸ್ಸು ತುಂಬಿ ನರ್ತಿಸುತ್ತಿದ್ದಳು.

"ಎದ್ದೇಳೇ ಮೂದೇವಿ ! ,ನಾಲ್ಕು ಗಂಟೆಯಾದ್ರೂ ಕಿಸಿತಾ ಮಲ್ಗಿದ್ದೀಯಾ ? ಕಾಫಿ ಮಾಡು ಹೋಗೆ " ಎಂದು ಮನೋಹರನು ಅರಚಿದಾಗ ತನ್ನ ಕನಸಿನ ಲೋಕದ ವಿಹಾರದಿಂದ ಶಾಂತಿ ಎಚ್ಚೆತ್ತು , ಏನೂ ತೋಚದಂತವಳಾಗಿ ಅಡುಗೆಮನೆಗೆ ಓಡಿದಳು.
ಕಾಫಿ ಮಾಡುವಾಗ ಪಕ್ಕದ ಮನೆಗೆ ಕಾರು ಬಂದ ಸದ್ದಾಗಿ ಪ್ರಿಯಾ " ಮಾತಾಡ್ಬೇಡಾ ನನ್ನ್ ಜೊತೆ ,ಯಾರವಳು ಪ್ರತಿಮಾ ? " ಎಂದು ಕೂಗಾಡುತ್ತಾ ಮನೆಯೊಳಕ್ಕೆ ಹೋಗುತ್ತಿರುವುದು ಶಾಂತಿಗೆ ಕೇಳಿಸಿತು.
ಅಪ್ರಿಯಳಾಗಿದ್ದ ಪ್ರಿಯಾಳ ಮುಂದೆ ಪ್ರತಾಪನ ಪ್ರತಾಪ ಮಾಯವಾಗಿ ಅವಳನ್ನು ಸಂತೈಸಲು ಹೆಣಗಾಡುತ್ತಿದ್ದ.ಮನೋಹರ ಜಿಂಕೆಬೇಟೆಯಲ್ಲಿ ತಲ್ಲೀನನಾಗಿದ್ದನು. ಶಾಂತಿ ಕಾಫಿ ಮಾಡುತ್ತಾ ತನ್ನ ಕನಸಿನ ಗುಂಗಿನಲ್ಲೇ ನಿಂತುಬಿಟ್ಟಳು.

Wednesday, February 22, 2006

ಟೈಮ್ ಪಾಸ್

ನೀನು ದುರುಗುಟ್ಟಿ ನೋಡುತ್ತಿರುವುದನ್ನು ಅನಿತಾ ತೋರಿಸಿದಾಗಲೂ, ನಿನ್ನ ನಾಚಿಕೆಯಿಲ್ಲದ ನೆಟ್ಟ ನೋಟ ಹಾಗೆಯೇ ಇತ್ತು. ಇಷ್ಟು ಸುಂದರವಾಗಿರುವ ನಿನ್ನನ್ನು ತಾನಾಗಿದ್ದರೆ ಹೋಗಿ ಖಂಡಿತ ಮಾತನಾಡಿಸಿಬರುತ್ತಿದ್ದೆ ಎಂದು ಗೇಲಿಮಾಡಿದಳು.ನೀನು ಹಾಗೆ ದುರುಗುಟ್ಟಿ ನೋಡುತ್ತಿದ್ದರೂ ನನ್ನ ಬಳಿ ಬರಲು ಭಯವೇ ? ಛೇ ನಾಚಿಕೆ ಇರಬಹುದು ಎಂಬ ಕಾರಣ ಬರಿ ಪೊಳ್ಳು. ಅದೇನಾದರೂ ಇದ್ದಿದ್ದರೆ, ನಮ್ಮ ನೋಟಗಳೆರಡು ಕೂಡಿದಾಗ , ಕಂಡೂ ಕಾಣದವನಂತೆ ದೃಷ್ಟಿ ಬೇರೆಡೆಗೆ ಸರಿಸುತ್ತಿದ್ದೆ. ಆದರೂ ನಿನ್ನ ಕಂಡಾಕ್ಷಣ ನಿನ್ನ ಕಣ್ಣಿನ ಮುಗ್ಧತೆ,ರೂಪ ನನ್ನನ್ನು ಸೆಳೆಯದೇ ಇರಲಿಲ್ಲ. ಅದರೂ ಇಲ್ಲದ ತೊಂದರೆಯನ್ನು ಗಂಟಿಕ್ಕಿಕ್ಕೊಳ್ಳಬಾರದು ಎಂದು ಮನಸ್ಸಿನಲ್ಲೇ ನಿರ್ಧರಿಸಿ ಮನೆಯೆಡೆಗೆ ನಡೆದೆ. ಎಷ್ಟಾದರೂ ನೀನು ಅಪರಿಚಿತನಲ್ಲವೆ ?. ಮನೆಗೆ ಹೋಗುವಾಗ ಸಿಕ್ಕುವ ಜಾರುಬಂಡೆಯಂತಿರುವ ರಸ್ತೆಯಲ್ಲಿ ನಡೆದು ಬರುವಾಗ ಯಾರೋ ನನ್ನನ್ನು ಹಿಂಬಾಲಿಸುವಂತೆನ್ನಿಸಿ ಹಿಂದುರುಗಿ ನೋಡಿದಾಗ ಮತ್ತೆ ನಿನ್ನ ದರ್ಶನವಾಯಿತು. “ ಥೂ ! ನಾನು ನೋಡಿದ್ದೇ ತಪ್ಪಾಯಿತು. ಅನಗತ್ಯ ತಲೆನೋವು ಎದುರಾಯಿತಲ್ಲಾ” ಎಂದು ಒಮ್ಮೆ ನನ್ನನ್ನೇ ಬೈದುಕೊಂಡೆ. ಅಲ್ಲೇ ಬಳಿ ಬಂದು ಚೆನ್ನಾಗಿ ಬೈದು, ಬೇಕಾದರೆ ಅಲ್ಲೇ ತಿರುಗಾಡುತ್ತಿರುವ ಬೆರಳೆಣಿಕೆಯ ಜನರನ್ನು ಸೇರಿಸಿ ಜಗಳ ಪ್ರಾರಂಭಿಸಬಹುದೆಂದು ಯೋಚಿಸಿದೆ.ಅದರೆ ಧೈರ್ಯಬರಲಿಲ್ಲ. ಜಗಳದಲ್ಲಿ ನೀನು ಕೋಪಗೊಂಡು ಗಾಯಗೊಳಿಸಿದರೆ, ಒಬ್ಬಳೇ ಆಸ್ಪತ್ರೆಗೆ ತಿರುಗಬೇಕಾಗುತ್ತದೆ ಎಂದೆನ್ನಿಸಿ ಹಾಗೆಯೇ ಮುಂದೆ ನಡೆದೆ. ರಸ್ತೆ ಕೊನೆಯವರೆಗೂ ಹಿಂದಿರುಗಿ ನೋಡದೆ ನಡೆದು, ಅರಳಿ ಮರದ ಜೋಡಿ ರಸ್ತೆ ಸಿಕ್ಕಾಗ ಸ್ವಲ್ಪ ಧೈರ್ಯ ಬಂತು. ಈ ಜನನಿಬಿಡ ರಸ್ತೆಯಲ್ಲಿ ಹಿಂಬಾಲಿಸುವ ಧೈರ್ಯ ಯಾರಿಗಿದೆ ? ಎಂದೆನ್ನುತ್ತಾ ಮತ್ತೆ ತಿರುಗಿ ನೋಡಿದಾಗ ನಿನ್ನನ್ನು ಕಂಡು ಅಶ್ಚರ್ಯವಾಯಿತು. ನಿನ್ನ ತಾಳ್ಮೆಯನ್ನು ಮೆಚ್ಚಲೇಬೇಕು, ಇಷ್ಟು ದೂರ ಹಿಂಬಾಲಿಸುವುದು ಕಷ್ಟವೇ ಸರಿ. ಹಿಂಬಾಲಿಕೆಯಲ್ಲೂ ಸೌಜನ್ಯವೇ ? ಹಿಂಬಾಲಿಸುತ್ತಿರುವಂತೆ ಕಾಣದಿರಲು ದೂರ ಕಾಯ್ದುಕೊಳ್ಳುತ್ತಿರುವುದು. ಜೊಲ್ಲು ಸುರಿಸಿಕೊಂಡು ಬೀದಿ ತಿರುಗುವ ನಿಮ್ಮಂಥವರಿಗೆ ಸೌಜನ್ಯಗಳ ಗಂಧವಿದೆಯೇ ?
ಸುಮ್ಮನೆ ಅಲಕ್ಷಿಸಿ ನಡೆದರೆ, ತೆಪ್ಪಗೆ ಹಿಂದಿರುಗುತ್ತೀಯ ಎಂದು ಗೊಣಗಿಕೊಂಡು ನಡೆದೆ. ಅರಳಿಮರದ ಕೆಳಗೆ ಕುಳಿತುಕೊಳ್ಳುವ ಪಡ್ಡೆ ಹುಡುಗರು, ಸೋಮಾರಿಗಳು ನಾನು ನಡೆದುಬರುವುದನ್ನು ನೋಡುತ್ತಿರುವಾಗ, ನಿನ್ನ ಅವರ ನೋಟಗಳ ವ್ಯತ್ಯಾಸದ ಅರಿವಾಯಿತು. ಗೆಳೆತನದ ಅಪೇಕ್ಷೆಯ ನೋಟಕ್ಕೂ, ಲಂಪಟ ನೋಟಕ್ಕೂ ವ್ಯತ್ಯಾಸ ತಿಳಿಯುವ ಬುದ್ಧಿಮತ್ತೆ ನನ್ನಲ್ಲಿದೆ. ಈಗ ನೀನು ನನ್ನೊಂದಿಗಿದ್ದಿದ್ದರೆ ನನ್ನನ್ನು ಗೇಲಿಮಾಡುವುದಿರಲಿ, ನೋಡಲೂ ಅವರು ಹೆದರುತ್ತಿದ್ದರು ಎನ್ನಿಸಿತು.ಇದ್ದಕ್ಕಿದ್ದಂತೆ ನಿನ್ನ ಗೆಳೆತನದ ಬಗ್ಗೆ ಯೋಚಿಸತೊಡಗಿದೆ. ಮನೆಯಲ್ಲಿ ಯಾವ ತೊಂದರೆ ಆಗುವುದಿಲ್ಲ .ಅಪ್ಪ ತುಂಬಾ “ಬಿಂದಾಸ್” ಆಸಾಮಿ. ಇಲ್ಲಿಯವರೆಗೆ ನಾನು ಮಾಡಿರುವ ಕೆಲಸವನ್ನು ವಿರೋಧಿಸಿಲ್ಲ. ತಪ್ಪಾಗಿ ಕಂಡಾಗ ಮಾತ್ರ,ಅದರಿಂದ ಎದುರಾಗುವ ತೊಂದರೆಗಳನ್ನು ಎಳೆ ಎಳೆಯಾಗಿ ಅವರು ವಿವಿರಿಸಿದಾಗ ,ನನಗೆ ಅದೆಷ್ಟು ಬಾರಿ ಮನಃಪರಿವರ್ತನೆಯಾಗಿಲ್ಲ. ಅಮ್ಮ ಸ್ವಲ್ಪ ಕೋಪಮಾಡಿಕೊಳ್ಳಬಹುದು. ಹೊಸಬರು, ಯಾರೇ ಇರಲಿ ಸಂಶಯದ ದೃಷ್ಟಿಯಿಂದ ನೋಡುವುದು ಅವರ ಅಭ್ಯಾಸ.ಆದರೂ ಅಮ್ಮ ತುಂಬಾ ಒಳ್ಳೆಯವರು.ನಿನ್ನ ಕಣ್ಣಿನ ಮುಗ್ಧತೆಯನ್ನು ಕಂಡಾಗ ಅವರೂ ಕರಗಿ ಸುಮ್ಮನಾಗುತ್ತಾರೆ. ಆದರೂ ಕೆಲವು ಸೋಮಾರಿಗಳ ಕಾಡುಹರಟೆಗೆ ಹೆದರಿ ನಿನ್ನ ಗೆಳೆತನ ಬೆಳೆಸಿದರೆ ನಿನ್ನನ್ನು ಉಪಯೋಗಿಸಿದಂತಾಗುವುದಿಲ್ಲವೆ ? . ಈ ವ್ಯರ್ಥ ಚಿಂತೆಗಳಲ್ಲಿ ಕಾಲಹರಣ ಮಾಡಬಾರದು. ಕೆಲಸ ಸಾಕಷ್ಟಿದೆ. ಪರೀಕ್ಷೆಗಳು ಹತ್ತಿರವಾಗುತ್ತಿವೆ, ಒಳ್ಳೆ ಕಾಲೇಜಿನಲ್ಲಿ ಸೀಟು ಸಿಕ್ಕುವಂತಾಗಬೇಕು. ಅದೂ ಮೆರಿಟ್ ಸೀಟು. ಅಪ್ಪನಿಗೆ ಹೊರೆಯಾಗದೇ ಸ್ವಂತ ಕಾಲಿನ ಮೇಲೆ ನಿಂತಾಗ ಅಮ್ಮನ ದಿನನಿತ್ಯದ “ಮನೆ ಕೆಲಸ ಕಲಿತುಕೊ” ರಾಗಕ್ಕೆ ಮಂಗಳ ಹಾಡಿದಂತಾಗುತ್ತದೆ.” ನಾನು ಇಷ್ಟೆಲ್ಲಾ ಓದಿರುವುದು ಮನೆಯಲ್ಲಿ ಅಡಿಗೆಮಾಡಿಕೊಂಡು ಸುಮ್ಮನಿರುವುದಕ್ಕಲ್ಲ , ಏನಾದರೂ ಸಾಧಿಸಬೇಕು, ಹೆಸರುಗಳಿಸಬೇಕು “ ಎಂದು ಹುಮ್ಮಸ್ಸಿನಿಂದ ನಡೆಯತೊಡಗಿದೆ. ಮನೆಯ ರಸ್ತೆ ತಿರುವಿನಲ್ಲಿಯೂ ನಿನ್ನ ಬಗ್ಗೆ ಯೋಚಿಸುತ್ತಿರಲಿಲ್ಲ, ಆದರೆ ನೀನು ನಡೆದು ಬರುತ್ತಿರುವುದು ಮಾತ್ರ ಕಾಣಿಸಿತು. ಕೊನೆಯ ಬಾರಿ ನಿನ್ನ ಕಣ್ಣುಗಳನ್ನು ಒಮ್ಮೆ ನೋಡಿಬಿಡಬೇಕೆಂದು ತಿರುಗಿದೆ. ನಿನ್ನ ಕಣ್ಣುಗಳ ಮುಗ್ಧತೆಯಲ್ಲಿ ನನ್ನ ದೃಢನಿಶ್ಚಯವೆಲ್ಲಾ ಕರಗಿ ಅಲ್ಲೇ ನಿಂತುಬಿಟ್ಟೆ. ಆಗ ಅನುಭವಿಸಿದ ತಳಮಳ, ಅವಿಸ್ಮರಣೀಯ ! ಕೆಲವು ಕ್ಷಣಗಳು ಮುಂದೇನು ಮಾಡಬೇಕೆಂದು ತಿಳಿಯದಂತಾದರೂ ಭಯ, ಅನಿಶ್ಚಿತತೆಗಳ ನಡುವೆ ವಿಚಿತ್ರವಾದ ಸಂತೋಷವನ್ನೂ ಅನುಭವಿಸುತ್ತಿದ್ದೆ. ಸರಿ ಅದ್ದದ್ದಾಗಲಿ ಎಂದು ಗಟ್ಟಿ ಮನಸ್ಸು ಮಾಡಿ ನಿನ್ನೆಡೆಗೆ ಕೈಮಾಡಿ ಕರೆದಾಗ, ಒಡನೆ ಬಳಿ ಬಂದು ನೀನು ಬಾಲವಲ್ಲಾಡಿಸಿದೆ.

ಪಾನಿಪಟ್

“ಹೆದರಿಕೊಳ್ಳಬೇಡಿ, ನಾನು ನಿಮಗೆ ಯಾವ ರೀತಿಯಲ್ಲೂ ತೊಂದರೆ ಕೊಡೊದಿಲ್ಲ”

( ಅಲ್ಲಿದ್ದವರು ಸುತ್ತಮುತ್ತ ತಿರುಗಿ, ಎಲ್ಲ ನೋಟಗಳು ಎಲ್ಲ ದಿಕ್ಕುಗಳನ್ನು ಸುತ್ತಿಬಂದು ಕೊನೆಗೆ ಒಂದೇ ಕಡೆ ಕೇಂದ್ರೀಕೃತವಾದವು. ಮತ್ತೆ ಅದೇ ವಿನಯಪೂರ್ಣ ಧ್ವನಿ ಮಾತನಾಡಿತು)

“ನಾನು ನಿಮ್ಮಂತೆ ಒಂದು ಸಾಧಾರಣ ಜೀವ,ನನ್ನ ಮಾತು ಕೇಳಿ ನಿಮಗೆ ಆಶ್ಚರ್ಯವಾಗ್ತಿರಬಹುದು.ಆದ್ರೆ ನನಗೆ ಇದೇನು ಹೊಸದಲ್ಲ.ನಿಮ್ಮೊಡನೆ ಮಾತನಾಡುವುದಕ್ಕಿಂತ ಮೊದಲು ಇಲ್ಲೇ ಇದ್ದನನ್ನ ಬಂಧುಗಳೊಡನೆ, ಸ್ನೇಹಿತರೊಡನೆ ಮಾತನಾಡುತ್ತಿದ್ದೆ.ಆದರೆ ಈಗ ಅವರ್ಯಾರು ಇಲ್ಲ.”

(ವಿನಯದಿಂದ ಧ್ವನಿಯ ಭಾವ ವಿಷಾದಕ್ಕೆ ತಿರುಗಿದರೂ, ಮಾತನಾಡುವುದನ್ನು ಮುಂದುವರೆಸುತ್ತದೆ)

“ನಿಮ್ಮಂಥವರೇ ಅವರನ್ನೆಲ್ಲ ನನ್ನ ಪಾಲಿಗೆ ಇಲ್ಲದಂತೆ ಮಾಡಿಬಿಟ್ರು. ಚೈತ್ರದಲ್ಲಿ ಕೊಬ್ಬಿ ಗ್ರೀಷ್ಮದಲ್ಲಿ ಸೊರಗುತ್ತಿದ್ದ ನಮಗೆ ಹೆಚ್ಚೇನೂ ಚಿಂತೆಗಳಿರಲಿಲ್ಲ.ಬೆಳಗ್ಗಿನಿಂದ ಸಂಜೆಯವರೆಗೆ ಊಟ ತಯಾರಿಸಿ,ಶೇಖರಿಸಿ, ರಾತ್ರಿ ಹರಟೆಹೊಡೆಯುತ್ತಾ, ನಿದ್ದೆ ಹೋಗುತ್ತಿದ್ದ ನಮಗೆ ಆಗೊಂದು, ಈಗೊಂದು ಕ್ಷಾಮ ಬಿಟ್ಟರೆ ಜೀವಕ್ಕೆ ಆಪತ್ತಾಗುವಂತಹ ಪರಿಸ್ಥಿತಿ ಒದಗೊದಿಲ್ಲ, ಅಂತಲೇ ಅಓದುಕೊಂಡಿದ್ದ.ಆದ್ರೆ ಒಂದು ದಿನ ಜನರ ಗುಂಪೊಂದು ಬಂದು ನನ್ನ ಬಂಧುಗಳನ್ನೂ , ಮಿತ್ರರನ್ನೂ ಕೊಂದು, ಅವರ ಅವಯವಗಳನ್ನು ಕೊಂಡೊಯ್ದರು. ಆ ಗುಂಪು ನಮ್ಮನ್ನೆಲ್ಲಾ ಕೊಲ್ಲಲು, ನಮ್ಮ ದೂರದ ಸಂಬಂಧಿಯೊಬ್ಬನ ಅಂಗವನ್ನೇ ಆಯುಧದ ಹಿಡಿಯಾಗಿ ಬಳಸುತ್ತಿದ್ದರು. ನಿಂತುಬಿಡು ಎಂದು ಅವನನ್ನು ಗೋಗರೆದೆವು, ಆದರೆ ಅವರು ಅವನ ಬಾಯಿ ಮುಚ್ಚಿಸಿಬಿಟ್ಟಿದ್ದರು. ನಮ್ಮ ಚೀರಾಟವೆಲ್ಲಾ ವ್ಯರ್ಥವಾಯಿತು. ಅಂದು ನಾನು ತಬ್ಬಲಿಯಾದೆ.

(ವಿಷಾದದಿಂದ ಶಾಂತಭಾವಕ್ಕೆ ಧ್ವನಿ ಮರಳಿತು.ಅಲ್ಲಿದ್ದ ದಾರಿಹೋಕರೆಲ್ಲ ತಬ್ಬಿಬ್ಬಾಗಿ , ತಮ್ಮ ಕಿವಿಗಳನ್ನೇ ನಂಬಲಾಗದೆ ಮೌನವಾಗಿದ್ದರು. ಸ್ವಲ್ಪ ಹೊತ್ತು ಮೌನವು ಅಲ್ಲಿನ ವಾತವರಣದಲ್ಲಿ ನೆಲೆಸಿತು )

“ನನ್ನನ್ನು ಯಾಕೆ ಕೊಲ್ಲದೇ ಬಿಟ್ಟು ಹೋದರು ಅಂತ ಒಮ್ಮೊಮ್ಮೆ ಯೋಚಿಸುತ್ತೇನೆ ? ಆದ್ರೆ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಬಹುಶಃ ಮನುಷ್ಯರು ತೊಂದರೆಯಿಂದ ಪಾರಾದಾಗಲೆಲ್ಲಾ “ತಮ್ಮ ಪೂರ್ವ ಜನ್ಮದ ಪುಣ್ಯ” ಎಂದು ಹೇಳುತ್ತಾರಲ್ಲ ಅದೇ ನನ್ನ ಉಳಿವಿಗೂ ಅದೇ ಕಾರಣವಿರಬಹುದೇನೋ ?” ಅಥವ ನನ್ನ ಅಂಗಾಂಗಗಳು ಅವರ ಪ್ರಯೋಜನಕ್ಕೆ ಬರುತ್ತಿರಲ್ಲಿಲ್ಲವೋ ? ಗೊತ್ತಿಲ್ಲ “
( ಮೆಲ್ಲನೆ ಚಿಕ್ಕ ನಗು ಕೇಳಿಬಂತು)

“ಅಂದಿನಿಂದ ಮನುಷ್ಯರ ಮೇಲೆ ನನಗೆ ತಡೆಯಲಾರದಷ್ಟು ಕೋಪ. ನನ್ನ ನೆರಳನ್ನರಸಿ ಬಂದ ದಾರಿಹೋಕರಿಗೆ, ಅದು ದೊರೆಯದಿರಲೆಂದು , ಹಿಂದಕ್ಕೆ ಬಾಗಲು ಪ್ರಯತ್ನಿಸುತ್ತಿದ್ದೆ, ಗಟ್ಟಿಯಾದ ನನ್ನ ಕಾಯಿಗಳನ್ನು ಅವರ ಮೇಲೆಲ್ಲಾಉದುರಿಸುತ್ತಿದ್ದೆ. ಆದರೆ ಆ ದಿನ ಒಂದು ಘಟನೆ ನೋಡಿದ ಮೇಲೆ ನಿಮ್ಮ ಮೇಲಿದ್ದ ಧೋರಣೆಯೇ ಬದಲಾಯಿತು. ಮತ್ತೆ ಅದೇ ಘಟನೆ ಸಂಭವಿಸುವ ಸೂಚನೆಗಳು ಸಿಕ್ಕಿದ್ದರಿಂದ, ನೀವೆಲ್ಲಾ ಇಲ್ಲಿಂದ ಹೋಗುವುದು ಒಳಿತೆಂದು ಎಚ್ಚರಿಸಲು ಮಾತನಾಡಬೇಕಾಯಿತು. ಆದ್ರೆ ಅಷ್ಟಕ್ಕೆ ಸುಮ್ಮನಾಗದೆ ನನ್ನ ಕಥೆಯನ್ನೆಲ್ಲಾ ಹೇಳಿಬಿಟ್ಟೆ”
( ಮರದ ಮಾತುಗಳನ್ನು ಕೇಳಿದ ನಂತರ ಅಲ್ಲಿದ್ದ ದಾರಿಹೋಕರ ಕುತೂಹಲ ಗಾಬರಿಗೆ ತಿರುಗುತ್ತದೆ. ಅವರಲ್ಲೊಬ್ಬ ಧೈರ್ಯಮಾಡಿ ನಡೆದ ಘಟನೆಯನ್ನು ವಿವರಿಸೆಂದು ಮರಕ್ಕೆ ಹೇಳುತ್ತಾನೆ)

“ ಈ ಘಟನೆ ನಡೆದು ಬಹಳ ಕಾಲವೇ ಆಗಿವೆ. ಆಗ ನಾನು ಘಮಘಮಿಸುವ ಹೂವುಗಳಿಂದ, ದಪ್ಪ ಕಾಯಿಗಳಿಂದ ಕೂಡಿ ವಿಜ್ರಂಭಿಸುತ್ತಿದ್ದೆ . ನಾಲ್ಕೈದು ಜೋಡಿಹಕ್ಕಿಗಳ ಗೂಡುಗಳು ಕೂಡ ಇದ್ದವು. ಹಕ್ಕಿಮರಿಗಳ ಚಿಲಿಪಿಲಿಯೊಂದಿಗೆ ನಾನು ಕೂಡ ಹಾಡುತ್ತಿದ್ದೆ. ನನ್ನ ಬಂಧು ಮಿತ್ರರೇ ಹಕ್ಕಿಮರಿಗಳಾಗಿ ಬಂದಿರಬೇಕೆನ್ನಿಸುತ್ತಿತ್ತು.ಒಂದು ದಿನ ಆಯುಧಗಳನ್ನು ಹಿಡಿದ ಜನರ ದೊಡ್ಡ ಗುಂಪು ನಾನಿದ್ದಲ್ಲಿಗೆಬರುತ್ತಿರುವುದು ಕಾಣಿಸಿತು.ಇಲ್ಲಿಗೆ ನನ್ನ ಜೀವಿತವು ಮುಗಿಯಿತೆಂದು ಅನ್ನಿಸತೊಡಗಿದರೂ, ಈ ಬಾರಿ ಸುಲಭವಾಗಿ ಶರಣಾಗದೆ,ಹೋರಡಬೇಕೆಂದು ನಿರ್ಧರಿಸಿ, ಅತ್ತಿತ್ತ ಅಲುಗಾಡಿ ಕಾಯಿಗಳ ಮಳೆಯನ್ನು ,ಬರುತ್ತಿರುವ ಗುಂಪಿನ ಮೇಲೆ ಸುರಿಸಲು ಸಜ್ಜಾದೆ. ಆದರೆ ಆ ಗುಂಪಿನ ಬಳಿ ನನ್ನ ಬಂಧುಗಳನ್ನು ಕೊಂದ ಆಯುಧವಿರಲಿಲ್ಲ , ಬದಲಿಗೆ ಹರಿತ ತುದಿಯ ಆಯುಧಗಳೇ ಇದ್ದವು. ಗುಂಪಿನಲ್ಲಿ ಕೆಲವರು ನಡೆದುಬರುತ್ತಿದ್ದರೆ, ಇನ್ನುಕೆಲವರು ಕುದುರೆಯ ಮೇಲೆ, ಆನೆಯ ಮೇಲೆ ಕುಳಿತು ಸಾಗಿ ಬರುತ್ತಿದ್ದರು. ಆನೆಯ ಮೇಲೆ ಕುಳಿತಿದ್ದವರಂತೂ ವಿಚಿತ್ರವಾದ ಬಟ್ಟೆಗಳನ್ನು ಧರಿಸಿದ್ದರು. ಆನೆಯ ಮೇಲೆ ಕುಳಿತಿದ್ದ ಒಬ್ಬನಂತೂ ಕಬ್ಬಿಣದ ಬಟ್ಟೆಯನ್ನೇ ಧರಿಸಿದ್ದನು. ಸೂರ್ಯನ ಬೆಳಕು ಅದರ ಮೇಲೆ ಬಿದ್ದು , ಹೊಳೆಯುವಂತೆ ಮಾಡುತ್ತಿತ್ತು. ಆ ಗುಂಪು “ಬಾಬರ್ ಚಕ್ರವರ್ತಿ ಜಿಂದಾಬಾದ್” “ಅಲ್ಲಾ-ಹು-ಅಕ್ಬರ್” ಎಂದೆಲ್ಲಾ ಕೂಗುತ್ತಾ ಹತ್ತಿರ ಬರುತ್ತಿತ್ತು. ಆ ಗಲಾಟೆಗೆ ಹೆದರಿ ಮರದಲ್ಲಿದ್ದ ಹಕ್ಕಿಗಳೆಲ್ಲಾ ಗೂಡುಗಳನ್ನು ಬಿಟ್ಟು ಹಾರಿಹೋಗಿ, ತಮ್ಮ ಗೂಡುಗಳತ್ತ ಆ ಗುಂಪು ಗಮನಹರಿಸದಿರಲೆಂದು ಅವುಗಳೂ ಗಲಾಟೆ ಮಾಡತೊಡಗಿದವು. ಅವರ ಗಲಾಟೆಯಲ್ಲೇ ಮಗ್ನವಾಗಿದ್ದ ಆ ಗುಂಪಿಗೆ ಹಕ್ಕಿಗಳ ಗುಂಪಿನ ಗಲಾಟೆ ಗಮನಕ್ಕೇ ಬರಲಿಲ್ಲ.

ಆನೆಯ ಮೇಲೆ ಕುಳಿತಿದ್ದವನು, ಆ “ಬಾಬರ್ ಚಕ್ರವರ್ತಿ” ಯೇ ಆಗಿರಬೇಕು. ಆತ ಮರದ ಬಳಿ ಬಂದಾಗ, ಆನೆಯಿಂದಿಳಿದು ಅವನಂತೆಯೇ ಬಟ್ಟೆ ಧರಿಸಿದ್ದ ಕೆಲವರೊಂದಿಗೆ ಸ್ವಲ್ಪ ಹೊತ್ತು ಮಾತನಾಡಿದನು. ನಾನು ಕೋಪದಿಂದ ಒಂದು ದಪ್ಪ ಕಾಯನ್ನು ಅವನ ತಲೆಯ ಮೇಲೆ ಬೀಳುವಂತೆ ಮಾಡಿದೆ. ಅವನು ಸಮಧಾನದಿಂದಿದ್ದರೂ “ಹಾಯ್ ಅಲ್ಲಾ ! “ ಎಂದು ಗುಂಪಿನಿಂದ ಹಲವು ಧ್ವನಿಗಳು ಬಿಡಿಬಿಡಿಯಾಗಿ ಕೇಳಿಬಂದವು. ಅವನು ಮಾತ್ರ ಬೆದರದೆ, ನನ್ನನ್ನು ದಿಟ್ಟಿಸಿ ನೋಡಿ “ಈ ದೇಶದಲ್ಲಿ ಎಲ್ಲರೂ ನಮ್ಮ ಶತ್ರುಗಳು, ಎಚ್ಚರದಿಂದಿರಿ, ಎಲ್ಲಿಂದ ಮುಂದಿನ ಪ್ರಹಾರ ಬರುತ್ತದೋ ಗೊತ್ತಿಲ್ಲ” ಎಂದು ನಕ್ಕನು. ಅವನ ಮಾತು ಆ ಗುಂಪಿನಲ್ಲಿ ನಗೆಯ ಅಲೆಯನ್ನು ತರಿಸಿತು. ಅವನ ಮಾತನ್ನು ಕೇಳಿದವರು, ಕೇಳದಿದ್ದವರು ಎಲ್ಲರೂ ನಗುತ್ತಿದ್ದರು. ಅವನ ಮಾತಿನಲ್ಲಿ ನಗುವಂತಹ ವಿಚಾರವೇನೆಂದು ನನಗೆ ತಿಳಿಯಲಿಲ್ಲ.
ಬಹುಶಃ ಅವರಿಗೆಲ್ಲಾ ಅವನಿಂದೇನೋ ಪ್ರಯೋಜನವಿರಬೇಕು. ಅಷ್ಟು ಜನ ಒಬ್ಬ ವ್ಯಕ್ತಿಯನ್ನು ಸಂತೋಷಪಡಿಸಲು ಹಾತೊರೆಯುತ್ತಿರುವುದನ್ನು ಕಂಡು ನನಗೆ ಅಸೂಯೆಯಾಯಿತು.
ಸ್ವಲ್ಪ ವಿರಾಮದ ನಂತರ ಆ ಗುಂಪು ಮುಂದುವರೆಯಿತು. ಎಷ್ಟೋ ಜನ ನಾನು ಬೀಳಿಸಿದ್ದ ಕಾಯಿಗಳನ್ನು ಆರಿಸಿಕೊಂಡು ತಿನ್ನುತ್ತಾ ಮುಂದುವರೆದರು “
“ನನ್ನ ಪ್ರಾಣಕ್ಕೊದಗಿದ ಸಂಚಕಾರದಿಂದ ಪಾರಾದೆನೆಂಬ ಸಮಾಧಾನ, ಜೊತೆಗೆ ಸಂತೋಷದಿಂದ ಆ ಗುಂಪು ದೂರಸರಿಯುತ್ತಿರುವುದನ್ನು ನೋಡುತ್ತಾ ನಿಂತೆ.ನೀರಿನ ಹನಿಗಳೆಲ್ಲಾ ತಮ್ಮ ಸ್ವಂತಿಕೆಯನ್ನು ಬಿಟ್ಟು ಒಡಗೂಡಿ ಮೋಡವಾಗುವಂತೆ, ಆ ಗುಂಪಿನ ಆನೆ, ಕುದುರೆ ಮತ್ತು ಮನುಷ್ಯರು ಒಡಗೂಡಿ, ಅವರ ಬಿಡಿಚಿತ್ರಗಳೆಲ್ಲ ಮಾಯವಾಗಿ ಆಯುಧಗಳ ಕಾಡೊಂದು ಸೃಷ್ಟಿಯಾಯಿತು. ಅದರಿಂದ ಸ್ವಲ್ಪ ದೂರದಲ್ಲೇ ಮತ್ತೊಂದು ಆಯುಧಗಳ ಕಾಡು ನಿಂತಿತ್ತು.

ಇದ್ದಕ್ಕಿದ್ದಂತೆ, ಎರಡೂ ಕಾಡುಗಳಿಂದ ಬಿಡಿ,ಬಿಡಿಯಾಗಿ ಮನುಷ್ಯರು, ಕುದುರೆಗಳು ಹೊಮ್ಮತೊಡಗಿದರು. ಅವರೆಲ್ಲರೂ ಮತ್ತೊಂದು ಗುಂಪಿನ ಜನರೊಂದಿಗೆ ಹೊಡೆದಾಡತೊಡಗಿದರು. ನನ್ನ ಬಂಧುಗಳ ಅಂಗಗಳನ್ನು ಕತ್ತರಿಸಿದಂತೆ, ಅವರು ಮತ್ತೊಬ್ಬರ ಅಂಗಗಳನ್ನು ಕತ್ತರಿಸತೊಡಗಿದರು. ಕೆಂಪು ನೀರು ದೂರಕ್ಕೆ ಕಾಣುತ್ತಿತ್ತು.
ಮನುಷ್ಯರ ಆವೇಷದ ಕೂಗಾಟ, ಕುದುರೆಗಳ ಕೆನೆತ, ಆನೆಗಳ ಘೀಳಾಟ ದೂರದಲ್ಲಿದ್ದ ನನಗೇ ಕೇಳುತ್ತಿತ್ತು.
ಬಹಳ ಹೊತ್ತಿನ ಹೊಡೆದಾಟದ ನಂತರ ಒಂದು ಗುಂಪು ಅಲ್ಲಿಂದ ಓಡತೊಡಗಿತು.ನಾನು ಮೊದಲೇ ನೋಡಿದ್ದ ಗುಂಪಿನ ಜನರು, ಅವರ ಬೆನ್ನಟ್ಟಿ,ಎಷ್ಟೋ ಜನರನ್ನು ಹಿಡಿದು ಕತ್ತರಿಸಿದರು. ಕೆಲವರು ಮಾತ್ರ ತಪ್ಪಿಸಿಕೊಂಡರು . ಅವರೆಲ್ಲಾ ” ಪೂರ್ವಜನ್ಮದಲ್ಲಿ ಪುಣ್ಯ” ಮಾಡಿದ್ದ ವರಿರಬೇಕು. ಅವರ ಹಿಂಬಾಲಿಕೆಯನ್ನು ನಿಲ್ಲಿಸಿ ಆ ಗುಂಪು , ಮತ್ತೆ ಆಯುಧಗಳ ಕಾಡಾಯಿತು. ಮತ್ತೆ “ ಬಾಬರ್ ಚಕ್ರವರ್ತಿ ಜಿಂದಾಬಾದ್” ,” ಅಲ್ಲಾ-ಹು- ಅಕ್ಬರ್” ಎಂದು ಕೂಗತೊಡಗಿದರು.

“ ಕೆಲವರನ್ನು ಗಾಯಾಳುಗಳ ಶುಶ್ರೂಷೆಗೆ ಬಿಟ್ಟು , ಪೂರ್ವ ಜನ್ಮದಲ್ಲಿ ಪುಣ್ಯಮಾಡಿದ್ದವರು ಓಡಿಹೋದ ದಿಕ್ಕಿನಲ್ಲಿ ಆ ಗುಂಪು ಮುಂದುವರೆಯಿತು. ಅಲ್ಲೆ ಉಳಿದವರು ಒಂದು ದೊಡ್ಡ ಗುಂಡಿಯನ್ನು ತೆಗೆದು, ತಮ್ಮ ಗುಂಪಿನ ಸತ್ತವರನ್ನು ಮಾತ್ರ ಹೂಳತೊಡಗಿದರು. ಪ್ರಾಣ ಉಳಿಸುವಷ್ಟು ಸಮಯವಿಲ್ಲದವರನ್ನು ಅಲ್ಲೆ ಕೊಂದು ಹೂಳಿಬಿಡುತ್ತಿದ್ದರು. ಇದಾದ ನಂತರ ಸಾಧ್ಯವಾದಷ್ಟು ಗಾಯಾಳುಗಳನ್ನು ಹೊತ್ತು ಮಾಯವಾದರು. ತುಂಡರಿಸಿದ್ದ ಮನುಷ್ಯರ ದೇಹಗಳು ರಣಹದ್ದುಗಳಿಗೆ ಹೇರಳವಾಗಿ ಆಹಾರವಾದವು.ಅವುಗಳು ನನ್ನಲ್ಲೆ ತಂಗತೊಡಗಿದ್ದರಿಂದ , ಜೋಡಿಹಕ್ಕಿಗಳೆಲ್ಲ ಹೆದರಿ ದೂರವಾದವು. ಎರಡನೇ ಬಾರಿ, ಸಿಕ್ಕ ಅಲ್ಪ ಸಂತೋಷವು , ಮನುಷ್ಯರ ದೆಸೆಯಿಂದ ದೂರವಾಯಿತು. ಆದರೂ ಆ ಹೊಡೆದಾಟ ಕಂಡ ಮೇಲೆ ನನಗೆ ಮನುಷ್ಯರ ಮೇಲಿದ್ದ ಕೋಪವೆಲ್ಲ ತಣ್ಣಗಾಯಿತು. ತಮ್ಮ ಕುಲದವರನ್ನೇ ಹೀಗೆ ಕೊಲ್ಲುವಾಗ ಮರಗಳನ್ನು ಉಳಿಸಿಯಾರೆ ? ನಾನು ಹೂಬಿಡೂವುದನ್ನು ಹೇಗೆ ತಡೆಯಲಾಗುವುದಿಲ್ಲವೋ ಅಂತೆಯೆ ಮನುಷ್ಯರು ಹೊಡೆದಾಡುವುದನ್ನು ತಡೆಯಲಾಗುವುದಿಲ್ಲವೆನ್ನಿಸಿಬಿಟ್ಟಿತು. ಈಗಲೂ ನಿಮ್ಮ ಮೇಲೆ ಅದೇ ಧೋರಣೆಯಿದೆ.
ಎಷ್ಟೋ ದಾರಿಹೋಕರು ಆ ಘಟನೆಯನ್ನು “ಯುದ್ಧ” ವೆಂದು ಕರೆಯುವುದುಂಟು “ ಎಂದು ಹೇಳಿ ಸುಮ್ಮನಾಯಿತು.

(ಯುದ್ಧದ ವಿಚಾರವನ್ನು ಕೇಳಿದೊಡನೆ ಅಲ್ಲಿದ್ದ ಬಹುತೇಕ ಮಂದಿ ಮರದ ಮಾತುಗಳು ಮುಗಿಯುವ ಮುನ್ನವೇ ಮಾಯವಾಗಿದ್ದರು. ಒಬ್ಬ ಮಾತ್ರ ಅದರ ಮಾತುಗಳಲ್ಲಿ ಉತ್ಸುಕನಾಗಿ ನಿಂತಿದ್ದನು.)

ಆ ದಾರಿಹೋಕನು “ಯುದ್ಧ ಆರಂಭವಾದ ಸುದ್ದಿ ಕೇಳಿದ್ದೇನೆ. ಇಂದು ಇಲ್ಲಿ ಕಾದಡುತ್ತಿರುವುದು, ಇನ್ಯಾರೂ ಅಲ್ಲ , ಅಂದು ನೀನು ನೋಡಿದ ಆ ಬಾಬರ್ ಚಕ್ರವರ್ತಿಯ ಮೊಮ್ಮಗನ ಸೈನ್ಯ ? ಗೊತ್ತಾ? “ ಎಂದನು

(ಮರದ ಉತ್ತರಕ್ಕೆ ಕಾಯದೆ, ಮಾತು ಮುಂದುವರೆಸುತ್ತಾ)

“ ಹುಮಾಯೂನನ ಹಠಾತ್ ಮರಣದ ನಂತರ ಆ ಹಸುಗೂಸನ್ನು ಸಿಂಹಾಸನದ ಮೇಲೆ ಕೂರಿಸಿ, ರಾಜ್ಯಭಾರವನ್ನೆಲ್ಲಾ ಅವನ ಮಾವ ಬೈರಾಮ್ ಖಾನನು ನೋಡಿಕೊಳ್ತಾ ಇದ್ದಾನೆ. ಮೊಗಲರ ಹುಟ್ಟಡಗಿಸಬೇಕೆಂದು ಕಾಯುತ್ತಿದ್ದ ಹೇಮುವಿಗೆ ಇದು ಸರಿಯಾದ ಸಮಯವೆನ್ನಿಸಿ ಅವರ ಮೇಲೆ ದಂಡೆತ್ತಿ ಬಂದಿದ್ದಾನೆ. ಆದ್ರೆ ಪಾಣಿಪಟ್ ನಲ್ಲಿ ಕಾದಾಡುವಷ್ಟು ಧೈರ್ಯ ಮೊಗಲರಿಗೆ ಹೇಗೆ ಬಂತು ? ಸ್ವಲ್ಪ ಆಶ್ಚರ್ಯವೇ ಆಗ್ತಾಯಿದೆ ! ಹೇಮುವಿನ ಸೈನ್ಯದಲ್ಲಿ ೧೫೦೦ ಆನೆಗಳಿವೆ, ಜೊತೆಗೆ ಅವನ ಸೈನ್ಯವು ಮೊಗಲರಿಗಿಂತ ದುಪ್ಪಟ್ಟಿದೆ ಎಂಬ ಸುದ್ದಿ ಕೇಳಿದ್ದೇನೆ. “ ಎಂದು ದೂರದ ಯುದ್ಧಭೂಮಿಯನ್ನು ದಿಟ್ಟಿಸುತ್ತಾ ನುಡಿದನು.

“ ಏನು ? ಯುದ್ಧ ಪ್ರಾರಂಭವಾಗಿದೆಯೇ ? ಮತ್ತೆ ಜನರ ಗುಂಪುಗಳೇ ಕಾಣಿಸುತ್ತಿಲ್ಲ ? “ ಎಂದು ಮರವು ಪ್ರಶ್ನಿಸಿತು.
(ದಾರಿಹೋಕನು ಒಮ್ಮೆ ನಕ್ಕನು)
“ ಹೇಮು ಆಗಲೇ ಮೊಗಲ್ ಸೈನ್ಯವನ್ನು ಎಷ್ಟೋ ಕಡೆ ಹಿಮ್ಮೆಟ್ಟಿಸಿದ್ದಾನೆ, ಈಗ ನಡೆಯುವುದೇನಿದ್ದರೂ ಕೊನೆಯ ಯುದ್ಧ , ಮೊಗಲ ಸಂತತಿಯ ಅಳಿವು-ಉಳಿವುಗಳನ್ನು ನಿರ್ಧರಿಸುವ ಯುದ್ಧ. ನಾನು ಇಲ್ಲಿಯವರೆಗೆ ಯುದ್ಧವನ್ನು ಕಣ್ಣಾರೆ ನೋಡಿಲ್ಲ, ನೀನು ಅವಕಾಶಕೊಟ್ಟರೆ ಕೊಂಬೆಯೊಂದರ ಮೇಲೆ ಕುಳಿತು, ಎಲೆಮರೆಯಿಂದ ಯುದ್ಧವನ್ನು ನೋಡುತ್ತೇನೆ”
(ಮರದ ಸಮ್ಮತಿ ಪಡೆದು , ದಾರಿಹೋಕನು ಮರವೇರಿ ಎಲೆಮರೆಯಲ್ಲಿ ಕುಳಿತು, ಯುದ್ಧಭೂಮಿಯೆಡೆಗೆ ನೋಟ ಬೀರುತ್ತಾ ಮೌನವಾಗುತ್ತಾನೆ. ಸ್ವಲ್ಪ ಹೊತ್ತಿಗೆ ಆಯಾಸದಿಂದ ನಿದ್ದೆಹೋಗುತ್ತಾನೆ)

“ಏಳು, ಏಳು, ಅಲ್ಲಿ ನೋಡು , ಆಗಲೇ ಒಂದು ಗುಂಪು ಬಂದಾಗಿದೆ ”

(ಕೊಂಬೆಗಳನ್ನು ಅಲ್ಲಾಡಿಸುತ್ತಾ ಮರವು ದಾರಿಹೋಕನನ್ನು ಎಬ್ಬಿಸುತ್ತದೆ)

“ಕುದುರೆಯ ಮೇಲೆ ಕುಳಿತ ಒಬ್ಬ ವ್ಯಕ್ತಿ ಬೊಬ್ಬೆಹೊಡೆಯುತ್ತಾ ಎಡಬಿಡದೆ ಒಂದು ತುದಿಯಿಂದ, ಇನ್ನೊಂದೆಡೆಗೆ ಓಡಾಡುತ್ತಿದ್ದಾನೆ. ಆಗಲೇ ನಾಲ್ಕು ಬಾರಿ ಗುಂಪಿನ ರಚನೆ ಬದಲಿಸಿದ್ದಾಯಿತು”

(ದಾರಿಹೋಕನು ಎಚ್ಚರವಾಗುತ್ತಾನೆ)

“ ಓ ! ಆಗಲೇ ಮೊಗಲ್ ಸೈನ್ಯ ಬಂದುಬಿಟ್ಟಿದೆ.ಅವರ ಕುದುರೆಗಳನ್ನು ಎಲ್ಲಿಬೇಕಾದರೂ, ಎಷ್ಟು ದೂರಿದಿಂದಾದರೂ ಪತ್ತೆ ಹಚ್ಚಬಹುದು. ಅವರ ಸೈನ್ಯದಲ್ಲಿ ಬೇರೆಯವರ ಸೈನ್ಯಕ್ಕಿಂತ ವಿಭಿನ್ನ. ಆನೆಗಳ ಮೇಲೆ ಅವರಿಗೆ ಹೆಚ್ಚಾಗಿ ನಂಬಿಕೆಯಿಲ್ಲ, ಕುದುರೆಗಳು, ಬಿಲ್ಲುಗಾರರೇ ಹೆಚ್ಚಾಗಿ ಕಂಡುಬರೋದು”

(ಬೈರಾಮ ಖಾನನ ಹುರುಪನ್ನೂ , ಚಾಕಚಕ್ಯತೆಯನ್ನು ಮರವು ತೀಕ್ಷ್ಣ ವಾಗಿ ಗಮನಿಸುತ್ತಿತ್ತು)
“ಇಂಥವನೊಬ್ಬ ನಮ್ಮಲ್ಲೊಬ್ಬನಿದ್ದಿದ್ದರೆ ನಮ್ಮನ್ನು ಕೊಲ್ಲಲು ಬಂದ ಗುಂಪಿಗೆ ಒಳ್ಳೆ ಪ್ರತಿರೋಧವನ್ನೇ ಒಡುತ್ತಿದ್ದೆವು” ಎಂದು ಅವನನ್ನು ಪ್ರಶಂಸಿಸುತ್ತಾ ಮರವು ಹೇಳಿತು.

“ಅಲ್ಲಿ ನೋಡು ಹೇಮುವಿನ ಸೈನ್ಯ ನಡೆದು ಬರುತ್ತಿದೆ. ಅಬ್ಬ ! ಹೇಮು ಕುಳಿತಿರುವ ಆನೆ ಎಷ್ಟು ಎತ್ತರವಾಗಿದೆ. ಆನೆಗಳ ಗುಂಪಿನ ಮಧ್ಯದಲ್ಲಿದ್ದರೂ ಅವನು ಎದ್ದು ತೋರುತ್ತಿದ್ದಾನೆ. ಗೆಲ್ಲುವೆನೆಂಬ ಆತ್ಮವಿಶ್ವಾಸ , ಅವನ ದೇಹವನ್ನು ಕಂಬದಂತೆ ನೆಟ್ಟಗೆ ನಿಲ್ಲುವಂತೆ ಮಾಡಿದೆ” ಎಂದು ಹೇಮುವಿದ್ದ ಆನೆಗಳ ಗುಂಪಿನೆಡೆಗೆ ಕೈಮಾಡಿ ತೋರಿಸಿದನು.

“ ಈ ಆತ್ಮವಿಶ್ವಾಸ ಅಂದರೇನು ?” ಎಂದು ಮರವು ದಾರಿಹೋಕನನ್ನು ಪ್ರಶ್ನಿಸಿತು.

“ಸ್ವಲ್ಪ ಸೂಕ್ಷ್ಮವಾಗಿ ಗಮನಿಸು, ಬೈರಾಮ್ ಖಾನನು ಮುಖದಲ್ಲಿ ಸಮಾಧಾನ ಭಾವವಿದ್ದರೂ, ಅವನ ಕೈಗಳು ಅದುರುತ್ತಿವೆ. ಜೀನಿನ ಹಿಡಿತ ಆಗ್ಗಿಂದಾಗ್ಗೆ ತಪ್ಪಿ, ಕುದುರೆಯು ಸೊಟ್ಟ ಸೊಟ್ಟ ಹಾದಿಯಲ್ಲಿ ನಡೆದಾಡುತ್ತಿದೆ. ಸೋಲಿನ ಅಳುಕು ಅವನನ್ನು ಕಾಡುತ್ತಿದೆ. ಅದೇ ಹೇಮುವನ್ನು ನೋಡು , ಶರೀರವು ಅಲುಗಾಡುತ್ತಿಲ್ಲ , ಗೆಲುವು ನಿಶ್ಚಿತವೆಂದು, ಒಮ್ಮೊಮ್ಮೆ ನಗುತ್ತಿದ್ದಾನೆ. “

( ಸೈನ್ಯಗಳೆರಡೂ ಮತ್ತೆ ಆಯುಧಗಳ ಕಾಡಾಗಿ, ಮತ್ತೆ ಬಿಡಿಬಿಡಿಯಾಗಿ, ಕಾದಾಟ ಆರಂಭವಾಗುತ್ತದೆ. ಎದುರು ನಡೆಯುತ್ತಿದ್ದ ಕಾಳಗವನ್ನು ನೋಡುತ್ತಾ ಮರ ಮತ್ತು ದಾರಿಹೋಕನು ಬಾಯಿಗೆ ಬೀಗಹಾಕಿದವರಂತೆ ಸೊಲ್ಲೆತ್ತದೆ ನೋಡುತ್ತಿರುತ್ತಾರೆ. ಅದೆ ರಕ್ತದೋಕುಳಿ, ಅದೇ ಆವೇಷದ ಕೂಗಾಟ. )

ಹೇಮುವಿನ ಸೈನ್ಯ ಮೊಗಲ್ ಸೈನ್ಯವನ್ನು ಹಿಂದೂಡಲು ಪ್ರಾರಂಭಿಸಿದಾಗ “ಇನ್ನು ಮೊಗಲರ ಕಥೆ ಮುಗಿಯಿತು.ಆನೆಗಳು ಮುನ್ನುಗ್ಗಿದರೆ ಬೈರಾಮ್ ಖಾನನು ಹೆದರಿ ಓಡುತ್ತಾನೆ” ಎಂದು ದಾರಿಹೋಕನು ತನ್ನ ಯುದ್ಧಪಾಂಡಿತ್ಯ ಪ್ರದರ್ಶಿಸತೊಡಗಿದನು. ಆದರೆ ಮರವು ಅದಕ್ಕೆ ಬೆಲೆಕೊಡದೇ ಯುದ್ಧವನ್ನು ನೋಡುತ್ತಿತ್ತು.

ಯುದ್ಧದಲ್ಲಿ, ಗುರಿಯಿಲ್ಲದೆ ಹಾರಿಬಿಟ್ಟ ಬಾಣವೊಂದು ಆನೆಯ ಮೇಲಿದ್ದ ಹೇಮುವಿನ ಕಣ್ಣಿಗೆ ತಾಗಿ, ರಕ್ತದ ಧಾರೆ ಹರಿಯತೊಡಗಿ, ಮೂರ್ಛೆಹೋಗುತ್ತಾನೆ. ದಂಡನಾಯಕರು ತಮ್ಮ ಯುದ್ಧ ರಚನೆಗಳನ್ನೆಲ್ಲ ಮರೆತು ಹೇಮು ರಕ್ಷಣೆಗೆ ನಿಲ್ಲುತ್ತಾರೆ.

“ ಅಬ್ಬಾ ! ಯುದ್ಧ ಎಷ್ಟು ಬೇಗ ತಿರುಗಿಬಿಟ್ಟಿತು. ಹೇಮುವಿನ ಸೈನ್ಯ ಹೆದರಿದಂತಿದೆ. ಅವನು ಸತ್ತನೆಂದು ಸೈನ್ಯದಲ್ಲಿ ಗುಲ್ಲೆದ್ದಿರಬೇಕು.ಆ ದಂಡನಾಯಕರೋ ದಡ್ಡ ಶಿಖಾಮಣಿಗಳು, ಸೈನ್ಯವನ್ನು ಸಾಂತ್ವನಗೊಳಿಸದೇ ಹೇಮುವಿನ ಬಳಿ ನಿಂತಿದ್ದಾರೆ “ ಎಂದು ಎತ್ತರದ ಧ್ವನಿಯಲ್ಲಿ ಮಾತನಾಡುವಾಗ ಅವನ ಮಾತುಗಳು ಯುಕ್ತಿಯ ಗೋಡೆಗಳನ್ನು ಲೆಕ್ಕಿಸದೇ, ಸ್ವಚ್ಛಂದವಾಗಿ ಹರಿದಾಡುತ್ತಿರುತ್ತದೆ.

ಹಿಂದೂಡಲ್ಪಡುತ್ತಿದ್ದ ಮೊಗಲ್ ಸೈನ್ಯ ಆತ್ಮವಿಶ್ವಾಸದ ಸಂಚಾಲನವಾಗಿ, ಹೇಮುವಿನ ಪದಾತಿದಳದತ್ತ ವೇಗವಾಗಿ ಮುನ್ನುಗ್ಗಿ ಅವರನ್ನು ಚಂಡಾಡತೊಡಗಿದರು.ಹೆದರಿದರ ಪದಾತಿಸೈನ್ಯ ಕಂಗೆಟ್ಟು ಓಡತೊಡಗಿತು.

“ಇನ್ನು ಹೇಮು ಕಥೆ ಮುಗಿಯಿತು.ಆ ಚುರುಕಾದ ಕುದುರೆ ಸೈನ್ಯವನ್ನು ಆನೆ ಮೇಲಿರುವವರು ಹೇಗೆ ತಾನೆ ಎದುರಿಸಿಯಾರು ?” ಎನ್ನುತ್ತಾ ಕೊಂಬೆಯ ಮೇಲೆ ಸರಿದಾಡಿದ್ದರಿಂದ ಇನ್ನೇನು ಆಯತಪ್ಪಿ ಬೀಳುವಂತಾದರೂ, ಪ್ರಾಣಭೀತಿಯ ಅರಿವಾದೊಡನೆ, ತಾರಕಕ್ಕೇರಿದ ಅವನ ಧ್ವನಿಯಲ್ಲಿ ಸಂಯಮ ಕಾಣಿಸಿಕೊಂಡು ಮರದಂತೆ ಮತ್ತೆ ಮೂಕಪ್ರೇಕ್ಷಕನಗುತ್ತಾನೆ.

ದಾರಿಹೋಕನು ಊಹಿಸಿದಂತೆ ಮಿಂಚಿನ ವೇಗದಲ್ಲಿ ಸಂಚರಿಸುವ ಅಶ್ವದಳದ ಮುಂದೆ ಗಜಸೈನ್ಯವು ಅಶಕ್ತವಾಯಿತು. ಹೇಮುವನ್ನು ಕಾಪಾಡಲು ಪಟ್ಟಪ್ರಯತ್ನಗಳೆಲ್ಲ ವ್ಯರ್ಥವಾಗಿ, ಮೊಗಲರು ಅವನ ಶವವು ಸಿಕ್ಕಿ ಅದನ್ನು ಅಕ್ಬರ್ ಆಸ್ಥನಕ್ಕೆ ಎಳೆದೊಯ್ಯುತ್ತಾರೆ.

ವೈರಿ ಪಡೆ ಪಲಾಯನದ ನಂತರ “ ಅಲ್ಲಾ-ಹು-ಅಕ್ಬರ್” ಘೋಷಣೆಗಳ ತೆರೆಮರೆಯಲ್ಲಿ “ ಜೈ ಭಜರಂಗ ಬಲಿ”
ಘೋಷಣೆಗಳೂ ಕೇಳಿಬರುತ್ತವೆ.

“ನೋಡಲ್ಲಿ ಮತ-ಧರ್ಮದ ಹೆಸರಲ್ಲಿ ಕಚ್ಚಾಡುವ ಜನರು ಇಂದು ಒಡಗೂಡಿ ಘೋಷಣೆಗಳನ್ನು ಕೂಗುತ್ತಿದ್ದಾರೆ. ಎಂತಹ ವಿಚಿತ್ರ ?” ಎಂದು ದಾರಿಹೋಕನು ನುಡಿದನು.

“ ಮತವೆಂದರೇನು ? ಧರ್ಮ ವೆಂದರೇನು ?” ಎಂದು ಮರವು ಪ್ರಶ್ನಿಸಿತು.

“ಈ ಪ್ರಶ್ನೆಗೆ ನನ್ನ ಬಳಿ ಉತ್ತರವಿಲ್ಲ, ಜೊತೆಗೆ ಸಮಯವೂ ಇಲ್ಲ. ಕತ್ತಲಾಗುತ್ತಿದೆ. ಆದರೆ ಹೋಗುವ ಮುನ್ನ ಒಂದು ಮಾತು, ಮನುಷ್ಯರೆಲ್ಲಾ ಹೊಡೆದಾಡುತ್ತಾರೆ ನಿಜ, ಇನ್ನೂ ನಿನ್ನ ಜೀವಿತದಲ್ಲಿ ಇದೇ ಭೂಮಿಯಲ್ಲಿ ಸಾಕಷ್ಟು ಹೊಡೆದಾಟವನ್ನು ನೋಡಬಹುದು, ಅದಕ್ಕೆ ದುರಾಸೆ ಕಾರಣವಾಗಿರಬಹುದು , ಒಮ್ಮೊಮ್ಮೆ ಶಾಂತಿ ನೆಲೆಸಲು ಹೊಡೆದಾಡಬೇಕಾಗುವುದು. ಆದರೆ ಹೊಡೆದಾಟ ಮನುಷ್ಯನ ಮನೋಧರ್ಮವಲ್ಲ “. ಎಂದು ಹೇಳಿ ಕೊಂಬೆಯಿಂದ ಜಾಗರೂಕನಾಗಿ ಇಳಿದು ನಡೆದುಹೋದನು.

ಮತ್ತೊಂದು ಯುದ್ಧಕ್ಕೆ ಕಾಯುತ್ತಾ ಮರವು ಅಲ್ಲಿ ಉಳಿಯಿತು. ಪಾಣಿಪಟ್ ರಣರಂಗವನ್ನು ಒಂಟಿತನ ಮತ್ತು ರಣಹದ್ದುಗಳು ಮತ್ತೆ ಆವರಿಸಿದವು.

Thursday, February 16, 2006

ಪರಿವರ್ತನೆ

ಪರಿವರ್ತನೆ
ಭೈರಪ್ಪನವರ ಕೆಲವು ಕೃತಿಗಳ ಮುನ್ನುಡಿಯಲ್ಲಿ ಈ ವಿಚಾರ ಓದಿದ ನೆನಪು.ಯಾವುದೋ ಒಂದು ವಿಚಾರ ಅವರ ಮನಸ್ಸಿನಲ್ಲಿ ಉಂಟಾಗಿ ,ಬಹುಕಾಲ ಚರ್ಚೆ ,ವಿಶ್ಲೇಷಣೆಗಳಾಗಿ,ಕೊನೆಗೆ ಕಥೆಯಾಗಿ ಮೂಡಿಬಂದಿರುವ ಬಗ್ಗೆ ತಿಳಿಸಿದ್ದಾರೆ.ಹೀಗೆ ಮನಸ್ಸಿನ ವಿಚಾರವನ್ನು ಹೊರಗೆಡವಲು ಕಥೆಗಳನ್ನು ಬಳಸುವ ಲೇಖಕರ ಪುಸ್ತಕಗಳನ್ನು ಹೆಚ್ಚಾಗಿ ಓದಿರುವುದರಿಂದಲೇ ಇರಬೇಕು , ಅವರ ಕಥೆಗಳು ನನಗೆ ತುಂಬಾ ಕುತೂಹಲಕಾರಿಯಾಗಿ ತೋರುತ್ತವೆ. ಬಹುಶಃ ಒಬ್ಬ ಬರಹಗಾರ/ಬರಹಗಾರ್ತಿಗೆ ಮಾತ್ರ ಅಂತಹ ಭಾವನೆಯನ್ನು ಅನುಭವಿಸಲು ಸಾಧ್ಯ. ನನ್ನಂತಹ ಹವ್ಯಾಸಿ ಓದುಗನಿಗೆ ಇದು ಅರ್ಥವಾಗುವುದಿಲ್ಲವೇನೋ.ಅಂತೆಯೇ ಕೆಲವರಿಗೆ ಬದುಕಿನ ದಿನನಿತ್ಯದ ಘಟನೆ ಎಷ್ಟೇ ಸಣ್ಣದಿರಲಿ ,ಮನಸ್ಸಿನಲ್ಲೇ ನಿಂತುಬಿಟ್ಟು, ಅದನ್ನು ಯಾರಿಗಾದರೂ ವಿವರಿಸಿದ ನಂತರವೇ ಆ ವಿಚಾರ ಚಿಂತನಾಲಹರಿಯಲ್ಲಿ ಹಿಂದೆ ಸರಿಯತ್ತದೆ.
ಇಂದು ಬೆಳಿಗ್ಗೆ ಒಂದು ಬಸ್ಸಿನ ಸಂಭಾಷಣೆಯು ನನ್ನಲ್ಲಿ ವಿಚಿತ್ರವಾದ ಕುತೂಹಲ ಉಂಟುಮಾಡಿದೆ.
ಆ ಸಂಭಷಣೆಯೇ ಇಲ್ಲಿನ ಕಥ(ನ)ವಸ್ತುವಾಗಿದೆ.
ವಾರದ ಐದು ದಿನಗಳನಂತೆ ಈ ದಿನವೂ ಬೆಳಿಗ್ಗೆ ಆಫೀಸಿಗೆ ತಯಾರಾಗಿ ಬಸ್ ನಿಲ್ದಾಣಕ್ಕೆ ಬಂದು ಕಾದು ನಿಂತೆ.ಸ್ವಲ್ಪ ಹೊತ್ತಿನ ಬಳಿಕ ಬಂದ ಬಸ್ ಏರಿದಾಗ ಅದೃಷ್ಟಕ್ಕೆ ಸೀಟು ಕೂಡ ಸಿಕ್ಕಿತು.ನಿತ್ಯದ ಅಭ್ಯಾಸದಂತೆ ಮೊಬೈಲ್ ಫೋನಿನಲ್ಲಿದ್ದ , ಆಟಗಳನ್ನಡುತ್ತಿರುವಾಗ ಪಕ್ಕದ ಸೀಟಿನಿಂದ ಇಬ್ಬರು ತರುಣರ ಸಂಭಾಷಣೆ ಕೇಳಿಬಂತು.ಒಬ್ಬ ಸ್ವಲ್ಪ ಕಪ್ಪಗಿದ್ದು ಬೈತಲೆ ಸೀಳು ಮಧ್ಯಕ್ಕೆ ಬರುವಂತೆ ಕೂದಲನ್ನು ಬಾಚಿದ್ದ.ಮತ್ತೊಬ್ಬ ಬೆಳ್ಳಗಿದ್ದು,ಕೂದಲನ್ನು ಕ್ರಾಪು ತೆಗೆಸಿದ್ದ.ಇಬ್ಬರೂ ಟೀಶರ್ಟ್, ಜೀನ್ಸ್ ಧರಿಸಿದ್ದರು.ಅವರಿಬ್ಬರೂ ಸಹಪಾಠಿಗಳಿರಬಹುದು.ಇಬ್ಬರೂ ಪರಸ್ಪರ ಆಂಗ್ಲ ಭಾಷೆಯಲ್ಲಿ ಮಾತನಾಡಿಕೊಳ್ಳುತಿದ್ದರು.ಅವರ ಸಂಭಾಷಣೆಯಲ್ಲಿನ ಭಾವವನ್ನು ,ಧಾಟಿಯನ್ನು ಕಾಪಡುವ ಸಲುವಾಗಿ ಅವರ ಮಾತುಗಳನ್ನು ಅದೇ ಭಾಷೆಯಲ್ಲೇ ಬರೆದಿದ್ದೇನೆ.ಇದು ನನಗೆ ಅನಿವಾರ್ಯವೆನ್ನಿಸಿತು.
"you know, that Praveen asked out Priya last week da ?? " ಎಂದು ಬಿಸಿ ಸುದ್ದಿ ಬಿತ್ತರಿಸುವ ಖಾಸಗಿ ವಾರ್ತಾ ಚಾನೆಲ್ ಗಳ ಸುದ್ದಿಗಾರರು ಮಾತನಾಡುವ ಉತ್ಸಾಹ ಉಕ್ಕುತ್ತಿರುವ ಧ್ವನಿಯಲ್ಲಿ ಕ್ರಾಪಿನ ಹುಡುಗ ಹೇಳಿದ.
ಹುಬ್ಬೇರಿಸುತ್ತಾ ಅ ಮಧ್ಯ-ತಲೆಸೀಳಿನ ಹುಡುಗ "When this did happen da ?" ಎಂದು ಕೇಳಿದ.
ಆಂಗ್ಲ ಭಾಷೆಯಲ್ಲಿ ಮಾತನಾಡುವಾಗ ವಾಕ್ಯದ ಕೊನೆಯಲ್ಲಿ "da" ಪೋಣಿಸುವುದು ಎಂದಿನಿಂದ ಪ್ರಾರಂಭವಾಯ್ತೋ ಗೊತ್ತಿಲ್ಲ,ಚೆನ್ನೈನ ನನ್ನ ಮಿತ್ರರ ಮಾತುಗಳಲ್ಲಿ "da" ಪ್ರಯೋಗವನ್ನು ಮೊದಲು ಬಾರಿ ಕೇಳಿದ್ದೆ.ಈಗ ಆ ಪ್ರಯೋಗತುಂಬಾ ಪ್ರಖ್ಯಾತವಾಗಿ ಹೇಗೋ ಒಂದು ತಮಿಳಿನ ಪದ ದಕ್ಷಿಣ ಭಾರತದ ಆಡು ಮಾತಿನ ಇಂಗ್ಲಿಷ್ ನಲ್ಲಿ ಸೇರಿಹೋಗಿದೆ.ಆದರೆ ಪ್ರತಿ ಸಾರಿಯೂ ಆ 'ಡಾ' ನನ್ನು ಬಳಸಿದಾಗ ವಿಚಿತ್ರವೆನ್ನಿಸುತ್ತದೆ,ಆಭಸವಾಗಿ ತೋರುತ್ತದೆ.ಇವರಿಬ್ಬರ ಮಾತುಗಳಲ್ಲಿ ಪುಂಖಾನುಪುಂಖವಾಗಿ "ಡಾ" ಪ್ರಯೋಗಗಳು ಕೇಳಿಬರುತಿದ್ದವು.ಅವೆಲ್ಲವನ್ನೂ ನೆನಪಿಸಿಕೊಂಡು ಬರೆಯುವ ಶಕ್ತಿ ನನಗಿಲ್ಲ.
"Last Friday da" ಎಂದು ಉತ್ತರಿಸಿದ.
"Bastard !! I was thinking of asking her out during holidays after the exams" ಎಂದು ಕೋಪದಿಂದ ಗೊಣಗಿದರೂ ಮತ್ತೆ ಕಳ್ಳ ನಗೆ ಬೀರುತ್ತ "you know,of all the gals in our class ,Shraavani,Priya... are the cool chicks da" ಎಂದು ಉದ್ಗಾರದೊಡನೆ ಆ ಬೈತಲೆ-ಸೀಳಿನ ಹುಡುಗ ಮಾತು ನಿಲ್ಲಿಸಿದ.
ಇನ್ನಿಬ್ಬರು ಕೂಲ್ ಚಿಕ್ಸ್ ಹೆಸರುಗಳು ಅ ವಾಕ್ಯದಲ್ಲಿತ್ತು , ಆದರೆ ಈಗ ನೆನಪಿಗೆ ಬರುತ್ತಿಲ್ಲ.
ಕೀಟಲೆ ದನಿಯಲ್ಲಿ "ಓ............." ಎಂದು ಧೀರ್ಘವಾದ 'ಓ' ಹೇಳಿ " good thing you didn't ask her out , she made a big fuss about it .But have you asked Shraavani out anytime ?" ಎಂದು ಕಿರುನಗೆಯೊಂದಿಗೆ ಕ್ರಾಪಿನ ಹುಡುಗ ಪ್ರಶ್ನಿಸಿದ.
"she doesn't hang out with our gang.....,so I haven't asked her,but looks like she wants to go out with me" ಎಂದು ಅವನ ಮಿತ್ರ ಉತ್ತರಿಸಿದ.
ಈ ವಿಷಯ ನಿನಗೆ ಹೇಗೆ ತಿಳಿಯಿತೆನ್ದು ಕೇಳಲು ಮುಖ ಅರಳಿಸಿಕೊಂಡ.ಅಷ್ಟರಲ್ಲೇ ಅದನ್ನರಿತ ಅವನ ಮಿತ್ರ "she had sent Sindhu to indirectly enquire about me ,you know.............sindhu is in our gang.But, instead of saying good things about her, sindhu started making fun of her " ಎಂದು ನಗತೊಡಗಿದ.

"what did she say ?? " ಎಂದು ಮತ್ತೆ ಪ್ರಶ್ನಿಸದ.

ಮಾತು ಮುಂದುವರೆದಂತೆ ಆ ಕ್ರಾಪಿನ ಹುಡುಗ ಕ್ವಿಜ್ ಮಾಸ್ಟರ್ ಆಗತೊಡಗಿದ್ದ.ಆದರೆ ತನ್ನ ಮಿತ್ರನ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಬೇಕಾದುದು ತನ್ನ ಕರ್ತವ್ಯವೆಂಬಂತೆ ಮತ್ತೊಬ್ಬ ಅವಕ್ಕೆಲ್ಲ ಉತ್ತರಿಸುತ್ತಿದ್ದ.
"sindhu joked about possessiveness of shraavani saying that she was very kind, caring and other things,but I could make out what she was saying" ಎಂದ.

ಇಬ್ಬರು ಸ್ವಲ್ಪಹೊತ್ತು ನಕ್ಕರು.ಇದ್ದಕ್ಕಿದ್ದಂತೆ ಡೇಟಿಂಗ್ ನಿಂದ ನಾಳಿನ ವರಮಹಾಲಕ್ಷ್ಮೀ ಹಬ್ಬದ ರಜೆಯ ಪ್ರಯುಕ್ತ ಇಬ್ಬರೂ ಹಮ್ಮಿಕೊಂಡಿದ್ದ ಕಾರ್ಯಕ್ರಮದ ವೇಳಾಪಟ್ಟಿಯ ಪರಸ್ಪರ ವಿನಿಮಯ ಮಾಡಿಕೊಳ್ಳುತ್ತ
" Tomorrow is a holiday, some vara..... varlakshmi it seems ? whatever....?
Most colleges are closed tomorrow for varlakshmi so what are you doing da ?" ಎಂದ.
ಆ ಕ್ರಾಪಿನ ಹುಡುಗ "I need to prepare for maths test tomorrow da" ಎಂದು ಹೇಳುವಾಗ ಅವನ ಮಾತಿನಲ್ಲಿ ಹಿಂದಿನ ಸುದ್ದಿಗಾರನ ಉತ್ಸಾಹವೆಲ್ಲಾ ಇಳಿದುಹೋಯಿತು.

ಅದನ್ನು ಲೆಕ್ಕಿಸದೆ ಅವನ ಮಿತ್ರ "Ok, I am comfortable, with differentiation ..........but worried about complex numbers" ಎಂದು ಚಿಂತೆಯಿಲ್ಲದ ಧ್ವನಿಯಲ್ಲಿ ಹೇಳಿದ.
ಸ್ವಲ್ಪಹೊತ್ತು ಇಬ್ಬರೂ ಮೌನವಾದರು.ಕಿಟಕಿಯ ಹೊರಗೊಂದು ಹೋಂಡ ಸಿಟಿ ಕಾರನ್ನು ಕಂಡಾಗ ಅವರ ಮಾತುಗಳು ಕಾರುಗಳ ಕಡೆಗೆ ತಿರುಗಿತು.ಆರಾಮದಯಕ,ಬೆಲೆಬಾಳುವ ಕಾರುಗಳ ಪಟ್ಟಿಯನ್ನೇ ಮಾಡಿಬಿಟ್ಟರು. ಜಯನಗರ ನಾಲ್ಕನೇ ಬ್ಲಾಕ್ ಬಸ್ ನಿಲ್ದಾಣ ಕಂಡೊಡನೆ ,ಅವರಿಬ್ಬರ ಮಾತುಗಳ ಆಲಿಕೆಯನ್ನು ಬಿಟ್ಟು ಕೆಳಗಿಳಿದು ಆಫೀಸಿನ ಕಡೆಗೆ ನಡೆದೆ.ದಾರಿಯುದ್ದಕ್ಕೂ ಒಂದು ವಿಚಿತ್ರ ಭಾವನೆ ಮನಸ್ಸಿನಲ್ಲಿ ಹಾಗು ಮುಖದಲ್ಲಿ ನಗುವನ್ನೂ,ಕುತೂಹಲವನ್ನು ಏಕಕಾಲದಲ್ಲಿ ತರಿಸಿತ್ತು.
"ಸಮಾಜದ/ನಾಗರೀಕತೆಯ ಮೌಲ್ಯಗಳು ,ತತ್ವಗಳು ಎಂದಿಗೂ ಶಾಶ್ವತಗಳಲ್ಲ,ಚಿರಸ್ಥಾಯಿಯೂ ಅಲ್ಲ,ಪ್ರತಿಯೊಂದು ತಲೆಮಾರು ಕೂಡ ತನ್ನದೇ ಆದ ಮೌಲ್ಯಗಳನ್ನು ,ತತ್ವಗಳನ್ನು ಸೃಷ್ಟಿಸಿಕೊಂಡು ಸಮಾಜ/ನಾಗರೀಕತೆಯಲ್ಲಿ ಪರಿವರ್ತನೆಗೆ ಕಾರಣವಾಗುತ್ತದೆ" ಎಂದು ಯಾರೋ ಒಬ್ಬ ಚಿಂತಕನ ಮಾತನ್ನು ನನ್ನ ಮಿತ್ರ ಪೃಥ್ವಿರಾಜ್ ನಿಂದ ಕೇಳಿದ್ದೆ.

ಇಪ್ಪತ್ತನೇ ಶತಮಾನದ ಮೌಲ್ಯಗಳ,ತತ್ವಗಳ ಅಸ್ತಂಗತವನ್ನು ,ಜೊತೆಗೆ ಇಪ್ಪತ್ತೊಂದನೇ ಶತಮಾನದ ಹೊಸ ಮೌಲ್ಯಗಳ ಉದಯವನ್ನು ಕಾಣುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಈ ಸಂಭಾಷಣೆ ಉದಯಿಸುತ್ತಿರುವ ಹೊಸ ಸಮಾಜದ ಬಗ್ಗೆ ಬೆಳಕನ್ನು ಚೆಲ್ಲುತ್ತದೆ.

ಕಾಲೇಜಿನ ದಿನಗಳಲ್ಲಿ e√x ನ ಡಿರೈವೇಟಿವ್ ನನ್ನು ಫರ್ಸ್ಟ್ ಪ್ರಿನ್ಸಿಪಲ್ಸ್ ನಿಂದ ಬಿಡಿಸುವ ಬಗ್ಗೆ ಹೆಚ್ಚು ಗಮನಕೊಟ್ಟ ನನಗೆ ಈ ಘಟನೆ ವಿಚಿತ್ರವೇ ಸರಿ.

ಕವಿಸಮಯ

"ಇಂದು ಜನರು ಸಂಗೀತವನ್ನು ನೋಡುತ್ತಾರೆ , ಕೇಳೋದಿಲ್ಲ" ಹೀಗೆ ನೊಂದು ನುಡಿದವರು ಸಂಗೀತ ನಿರ್ದೇಶಕ ಮನ್ನಾ ಡೆ. ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ಪ್ರಕಟವಾದ ಸಂದರ್ಶನವೊಂದರಲ್ಲಿ ಸಂಗೀತದಲ್ಲಾಗುತ್ತಿರುವ ಇತ್ತಿಚಿನ ಬೆಳವಣಿಗೆಗಳ ಬಗ್ಗೆ ಮಾತನಾಡುತ್ತ ಮೇಲಿನ ಮಾತನ್ನು ಹೇಳಿದ್ದರು.ಪ್ರಾಚೀನ ಕಲೆ,ಪರಂಪರೆಗಳ ಸುವರ್ಣಯುಗವನ್ನು ವರ್ಣಿಸುತ್ತಾ,ಇಂದಿನ ಅವುಗಳ ಅವಸಾನದ ಬಗ್ಗೆ ಗೊಣಗಾಡುವ ಇನ್ನೊಬ್ಬ 'ಮುತ್ಸದ್ದಿ'ಗಳೆನ್ದುಕೊಂಡು ದಿನಪತ್ರಿಕೆಯ ಪುಟಗಳನ್ನು ತಿರುವುತ್ತಾ ಬೇರೆ ಸುದ್ದಿಗಳನ್ನು ಗಮನಿಸುತ್ತ ಹೋದೆ. ರೇಡಿಯೋದಲ್ಲಿ ಕೇಳಿದ ಕಿಶೋರಿ ಅಮೋಂನ್ಕರ್ ಅವರ ಗಾಯನವು ಮೇಲಿನ ಮಾತನ್ನು ಎರಡು ವರ್ಷದ ನಂತರ ಮತ್ತೆ ನೆನಪಿಸಿತು. ಅಂದು ಅವರು ರಾಗ 'ಮಿಯನ್ ಕೆ ಮಲ್ಹರ್" ವನ್ನು ಹಾಡಿದ್ದು , ಶಾಸ್ತ್ರೀಯ ಸಂಗೀತದ ಒಂದು ಆಯಾಮವನ್ನು ಪರಿಚಯಮಾಡಿಕೊಟ್ಟಿತು. ವಿಶೇಷವೆಂದರೆ ಈ ರಾಗಕ್ಕೆ ಸಮಾನಾಂತರವಾಗಿ "Allegro" ಎಂಬ ರಾಗವು ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದಲ್ಲೂ ಇದೆ.
ಸಂಗೀತದ ಬಗ್ಗೆ ನಾನಗೆ ಹೆಚ್ಚೇನೂ ತಿಳಿದಿಲ್ಲ, ಕೆಲವರು ಪ್ರಖ್ಯಾತ ಗಾಯಕರ, ವಾದಕರ ಧ್ವನಿಮುದ್ರಿಕೆಗಳನ್ನು
ಕೇಳಿದ್ದೇನೆ.ರಾಗದ ಪರಿಚಯವಾಗಲಿ, ಸ್ವರಜ್ಞಾನವಾಗಲಿ ಇಲ್ಲ.ಆದರೂ ಅಮೋನ್ಕರ್ ಅವರ ಹಾಡುಗಾರಿಕೆ ನೆನಪಿನಲ್ಲಿ ಉಳಿಯುವ ಆಲಿಕೆಯಾಯಿತು.
ಗಾಯನ ಪ್ರಾರಂಭವಾಗುವ ಮುನ್ನ ರಾಗದ ಪರಿಚಯವನ್ನು ನಿರೂಪಕಿಯು ಮಾಡಿಕೊಟ್ಟರು. ಅವರು ಹೇಳಿದ ರಾಗದಲ್ಲಿನ ಗಾಂಧಾರ, ಮಧ್ಯಮಗಳ ಪ್ರಯೋಗ ಏನೇನೂ ಅರ್ಥವಾಗಲ್ಲಿಲ್ಲ.ಆದರೆ ಆಲಾಪದಲ್ಲಿ ಚಲಿಸುವ ಮೋಡಗಳ ಕಲ್ಪನೆ ಇದೆಯೆಂದೂ, ತಾನದಲ್ಲಿ ಗುಡುಗು-ಮಿಂಚುಗಳ ಕಲ್ಪನೆಯಿದೆಯೆಂದು ಹೇಳಿದರು.ಇಂತಹ ಕಲ್ಪನೆ ಹಾಡಿನಲ್ಲಿ ಹೇಗೆ ಕಲ್ಪಿಸಿಯಾರು ? ಎಂಬ ಕುತೂಹಲ ಉಂಟಾಗಿ, ಮುಂದಿನ ಎಫ್ ಎಂ ಸ್ಟೇಷನ್ನಿಗೆ ಬದಲಾಯಿಸದೆ ಹಾಡನ್ನು ಕೇಳಲು ಆರಂಭಿಸಿದೆ.

ಮಂದಗತಿಯಲ್ಲಿದ್ದ ಆಲಾಪವು ,ಆಲಿಕೆಯನ್ನು ಸ್ವಲ್ಪ ಕಷ್ಟಕರವಾಗೇ ಮಾಡಿತ್ತು. ಆದರೂ ಕೇಳುತ್ತ ಮುಂದುವರಿದಾಗ, ಮಂದಗತಿಯಲ್ಲಿ ಚಲಿಸುವ ಮೇಘಗಳ ಕಲ್ಪನೆ ಮನಸ್ಸಿಗೆ ಬರತೊಡಗಿತು. ಭೂಮಿಯಿಂದ ಏತ್ತರದಲ್ಲಿ ಮೋಡಗಳ ಚಲನೆಯ ಶಾಂತತೆಯನ್ನು ,ಆಲಾಪದ ಶಾಂತತೆಯಲ್ಲಿ ಹಿಡಿದಿಟ್ಟಿದ್ದರು. ಜೊತೆಗೆ ಹಾಡಿನ ನುಡಿಯು, ತನ್ನಿಂದ ದೂರವಗಿರುವ ಪ್ರಿಯಕರನ ನೆನಪಿಸಿಕೊಳ್ಳುತ್ತಿರುವ ಹೆಣ್ಣೊಬ್ಬಳ ಚಿತ್ರವನ್ನು ಮೂಡಿಸತೊಡಗಿತು. ಮನೆಯ ಎತ್ತರದ ಅಂತಸ್ತಿನ ಕಿಟಕಿಯಿಂದ ಮೋಡಗಳನ್ನು ಕಂಡೊಡನೆ ಚಲಿಸುವ ಮೋಡದಂತೆ ದೂರವಾಗುತ್ತಿರುವ ಪ್ರಿಯಕರನ ನೆನಪು ಆಲಾಪನೆಯ ನಿಧಾನ ಗತಿಯಿಂದ ,ಏಕತಾನತೆಯಿಂದ, ಚಿತ್ರಿತವಾಗುತ್ತಿತ್ತು.

ಬಹಳ ಹೊತ್ತು ಸಾಗಿದ ಆಲಾಪನೆಯಿಯಿಂದ ಬೇಸರ ಉಂಟುಮಾಡುವಂತೆ ತಡೆದದ್ದು , ಮೇಲೆ ಕಲ್ಪಿಸಿದ ಚಿತ್ರವೊಂದೇ.ಆಂತೂ ಆಗ ರೇಡಿಯೋ ಟ್ಯೂನ್ ಮಾಡದೇ ಸುಮ್ಮನಿದ್ದೆ.ಆಲಾಪನೆಯ ಗತಿಯೇರತೊಡಗಿತು, ಆದರೆ ಈ ಗತಿ ಬದಲಾವಣೆ, ಪಾದರಸವೇರಿದನಂತೆ ಕ್ಷಣಮಾತ್ರದಲ್ಲಾಗದೇ,ಗುರುತ್ವಾಕರ್ಷಣೆಯ ಪ್ರಭಾವದಿಂದ ಹೊರಬಂದು ಮೇಲಕ್ಕೆ ಹರಿಯಲು ಪ್ರಯತ್ನಿಸುತ್ತಿರುವ ಆಕಾಶಗಂಗೆಯಂತೆ ಅಮೋನ್ಕರ್ ರವರ ಧ್ವನಿ ಏರಿಳಿತಗಳು, ಪ್ರತಿ ಏರಿಕೆಯಲ್ಲೂ ಹಿಂದಿನ ಮಟ್ಟವನ್ನು ಹಿಂದೆಹಾಕಿ ಇಳಿಕೆಯಲ್ಲಿ ಮತ್ತೆ ಅದೇ ಕೆಳಮಟ್ಟವನ್ನು ತಲುಪುತ್ತಿತ್ತು.ಕಿಟಕಿಯಿಂದ ಹೊರನೋಡುತ್ತಿರುವ ಆ ಹೆಣ್ಣಿನ ಮನಸ್ಸಿನಲ್ಲಿ ವಿವಿಧ ಭಾವನೆಗಳ ಏರಿಳಿಕೆಯಾಗಿ, ವಿರಹವು ಮನಸ್ಸನ್ನು ದಾಟಿ ಮೇಲೇಳಲು ಪ್ರಯತ್ನಿಸುವಂತಿತ್ತು.
ತಾನದ ಆರೋಹಣ, ಅವರೋಹಣಗಳು ಆರಂಭವಾಯಿತು,ಆರೋಹಣವು ಮೆಟ್ಟಿಲು-ಮೆಟ್ಟಿಲಾಗಿ ಮೇಲೇರಿ,ಎತ್ತರದಲ್ಲಿ ಮಿಂಚಿನ ಬೆಳಕಂತೆ ಕ್ಷಣಮಾತ್ರ ನಿಂತು ಮರೆಯಾಗಿ, ಅವರೋಹಣವು ಗುಡುಗಿನಂತೆ ಗಂಭೀರ ಧ್ವನಿಯಲ್ಲಿ ಕೆಳಗಿಳಿಯುತ್ತಿತ್ತು.ಆಗಸದ ಮಿಂಚು-ಗುಡುಗುಗಳನ್ನು ಕಂಡ ಕಣ್ಣುಗಳು ಮನಸ್ಸಿನಲ್ಲಿ ವಿರಹದಿಂದ ಉಕ್ಕುವ ದು:ಖ-ಕೋಪಗಳ
ಮಿಂಚು-ಗುಡುಗನ್ನು ಅನುಭವಿಸತೊಡಗಿತು.ಪ್ರತಿ ಆರೋಹಣದಲ್ಲಿನ ಮಿಂಚಿನ ಬೆಳಕು ಹೆಚ್ಚು ಹೊತ್ತು ನಿಲ್ಲತೊಡಗಿತು, ಅಷ್ಟು ಮೇಲೇರಿದ್ದರಿಂದ ಅವರೋಹಣದಲ್ಲಿಳಿಯುವಾಗ ಗುಡುಗಿನ ಧ್ವನಿಯ ಪ್ರಭಾವ ಪ್ರಖರವಾಗಿತ್ತು.ಪ್ರತಿ ಆರೋಹಣ-ಆವರೋಹಣ ಚಕ್ರದ ನಡುವೆ ಗುಡುಗಿನ ನಂತರದ ಶಾಂತಿ ಇರುತ್ತಿತ್ತು.

ಮಿಂಚು-ಗುಡುಗುಗಳನ್ನು ಆಹ್ವಾನಿಸಿದ್ದ ತಾನವು ಈಗ "ಉಮಡ್, ಗುಮಡ್, ಗರಜ್ ಗರತ್ " ಎಂದು ಮಳೆಯನ್ನು ಆಹ್ವಾನಿಸತೊಡಗಿತು,ಜೊತೆಗೆ ಅವಳ ಕಣ್ಣುಗಳಲ್ಲಿ ಕಣ್ಣೀರಿನ ಮಳೆಯನ್ನು ತರಿಸಿತು. ಮಳೆ ಬಂದು ,ಚಲಿಸುವ ಮೋಡಗಳೆಲ್ಲ ಕರಗಿಹೋದವು.ಅವಳ ಮುಖದಲ್ಲಿ ಕಣ್ಣೀರು ಬಂದು ವಿರಹದ ಮೋಡವನ್ನು ಕರಗಿಸಿ ಸಮಾಧಾನ ತರಿಸಿತು.
ಈ ಸಮಾಧನದ ಭಾವದೊಂದಿಗೆ ಗಾಯನವು ಮುಕ್ತಾಯವಾಯಿತು.

ಒಂದು ಘಂಟೆ ನನ್ನನ್ನು ಕೇಳುವಂತೆ ಮಾಡಿದ್ದ ಈ ಸಂಗೀತದ ಅನುಭವವನ್ನು ಮರೆಯುವ ಮುನ್ನ ಬರೆದಿಡಬೇಕೆನ್ನಿಸಿತು.ಬಹುಶಃ ಮತ್ತೊಮ್ಮೆ ಇದೆ ಹಾಡನ್ನು ಕೇಳಿದರೂ ಈ ನೆನಪು ಮರುಕಳಿಸದಿದ್ದರೆ ?
ರೀಮಿಕ್ಸ್ ವಿಡಿಯೋಗಳಲ್ಲಿ ಕಟ್ಟುಮಸ್ತಾದ ಆಳೊಬ್ಬನ ಸುತ್ತ ಲಘುವಸ್ತ್ರಖಚಿತವಾಗಿ ನರ್ತಿಸುವ ಸುಂದರಿಯರು ಹಾಡುವ ಹಾಡುಗಳು, ಮಲ್ಹರ್ ನಂತೆ ಮನಸ್ಸಿನಲ್ಲಿ ಚಿತ್ರಗಳನ್ನು ಕೆತ್ತುತ್ತವೋ? ತಿಳಿಯದು, ಪರದೆಯ ಮೇಲಂತೂ ಕೆತ್ತುತ್ತವೆ.
ಮನಸ್ಸಿನ ಚಿತ್ರಗಳು ಪರದೆಯ ಮೇಲೆ ಕಾಣತೊಡಗಿದಾಗ ಮನ್ನಾ ಡೆ ಅವರೂ ಸಂಗೀತವನ್ನು ನೋಡಲು ಕಲಿಯುತ್ತಾರೋ ಏನೋ ?